ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವರ್ಗಾವಣೆ ದಂಧೆ ಆರೋಪ ಮಾಡಿ, ದರಪಟ್ಟಿ ಬಿಡುಗಡೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಚ್ ಡಿ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಅವರ ಆರೋಪಗಳಿಗೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡುತ್ತಾರೆ” ಎಂದರು.
“ಸದನದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವುದು, ಬಹುಶಃ ಅವರು ಸಿಎಂ ಆಗಿದ್ದಾಗ ಇದ್ದ ರೇಟ್ ಕಾರ್ಡ್ ಅನಿಸುತ್ತದೆ. ಚೆನ್ನಾಗಿಯೇ ಮಾಡಿದ್ದಾರೆ. ಅಭಿನಂದನೆ ಸಲ್ಲಿಸಬೇಕು” ಎಂದು ಟಾಂಗ್ ನೀಡಿದರು.
“ನಾನು ಒಕ್ಕಲಿಗ ಎಂಬ ಕಾರಣಕ್ಕೆ ನನ್ನ ವಿರುದ್ದ ಟಾರ್ಗೆಟ್ ಮಾಡಿದ್ದಾರೆ. ನಾನು ಎಚ್ ಡಿ ದೇವೇಗೌಡರ ಕುಟಂಬದ ಬಗ್ಗೆ ಮಾತಾಡಿಲ್ಲ. ಎಚ್‌ಡಿಕೆ ವಿಚಾರ ಎತ್ತಿದರೆ ಸಾಕು ಕುಟುಂಬ ಎನ್ನುತ್ತಾರೆ. ಕುಮಾರಸ್ವಾಮಿ ಯಾವಾಗಲೂ ಕುಟುಂಬದ ಜಪ ಮಾಡಬಾರದು” ಎಂದರು.
ಈ ಸುದ್ದಿ ಓದಿದ್ದೀರಾ? ರಾಜಕೀಯ ಅಭದ್ರೆತೆಯಿಂದ ವರ್ಗಾವಣೆ ದಂಧೆ ಆರೋಪ ಹರಿಬಿಟ್ಟಿದ್ದಾರೆ: ಸಿಎಂ ಸಿದ್ದರಾಮಯ್ಯ
“ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೋ ಏನೋ ಗೊತ್ತಿಲ್ಲ. ಲೋಕಸಭಾ ಚುನಾವಣೆ ಇದೆ. ಹೀಗಾಗಿ ನನ್ನ ಮಂಡ್ಯ ಎನ್ನುತ್ತಿದ್ದಾರೆ” ಎಂದು ಸಚಿವ ಚಲುವರಾಯಸ್ವಾಮಿ ಕುಟುಕಿದರು.