- ವೇಣುಗೋಪಾಲ್ ಪತ್ನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಕೊಡಿಸಲು ಯತ್ನಿಸುವೆ
- 8 ಲಕ್ಷ ರೂ. ಪರಿಹಾರದಲ್ಲಿ ಮೊದಲ ಕಂತು 4.12 ಲಕ್ಷ ರೂ. ಕುಟುಂಬದವರಿಗೆ ನೀಡಿದ್ದೇವೆ
ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ಹತ್ಯೆ ಪ್ರಕರಣವು ಧರ್ಮ ಮತ್ತು ರಾಜಕೀಯದ ವ್ಯಾಪ್ತಿ ಎರಡಕ್ಕೂ ಬರುವುದಿಲ್ಲ. ಆದರೂ ಬಿಜೆಪಿಯವರು ನನ್ನ ಪುತ್ರ ಸುನೀಲ್ ಬೋಸ್ ಹೆಸರನ್ನು ವಿನಾಕಾರಣ ಎಳೆದು ತರುತ್ತಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಹೇಳಿದರು.
ಮೈಸೂರು ಜಿಲ್ಲೆಯ ತಿ. ನರಸೀಪುರದ ವೇಣುಗೋಪಾಲ್ ಮನೆಗೆ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಸಚಿವ ಎಚ್ ಸಿ ಮಹದೇವಪ್ಪ ಅವರು ಮಾತನಾಡಿದರು.
“ಪೊಲೀಸ್ ತನಿಖೆ ಸರಿ ದಾರಿಯಲ್ಲಿದೆ. ಘಟನೆಯಾದ ಕೆಲವೇ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿಯವರು ಧರ್ಮದ ಬಣ್ಣ ಬಳಿಯಲು ಹೊರಟಿದ್ದಾರೆ” ಎಂದು ಆರೋಪಿಸಿದರು.
“ಕೊಲೆ ಪ್ರಕರಣದಲ್ಲಿ ಹಿಂದುತ್ವದ ಕಾರ್ಯಸೂಚಿಯನ್ನು ಹಬ್ಬಿಸುವ ಸಂಚನ್ನು ಬಿಜೆಪಿ ಮಾಡುತ್ತಿದೆ. ಈ ಆಟ ಬಹಳ ಕಾಲ ನಡೆಯುವುದಿಲ್ಲ. ಎಲ್ಲದಕ್ಕೂ ಹಿಂದುತ್ವದ ಕಾರ್ಯಸೂಚಿ ಮುಂದು ಮಾಡುವುದು ಆ ಪಕ್ಷದವರ ಚಾಳಿ. ಸುಳ್ಳನ್ನು ಸತ್ಯ ಮಾಡಲು ಆ ಪಕ್ಷದವರು ಹೊರಟಿದ್ದಾರೆ. ನನ್ನ ಮಗನ ಮೇಲೆ ಹೀಗೆ ಹಿಂದೆಯೂ ವಿನಾಕಾರಣ ಆರೋಪ ಮಾಡಿದ್ದರು” ಎಂದು ಆರೋಪಿಸಿದರು.
“ಯುವ ಬ್ರಿಗೇಡ್ ಸಂಘಟನೆ ಕಟ್ಟಿಕೊಂಡು ಹನುಮ ಜಯಂತಿಯನ್ನು ಚೆನ್ನಾಗಿಯೇ ಮಾಡಿದ್ದಾರೆ. ಅದಕ್ಕೆ ಯಾರ ಅಡ್ಡಿ ಅಥವಾ ತಕಾರರು ಇರಲಿಲ್ಲ. ಆ ಸಂಘಟನೆಯವರೇ ಬೈಕ್ ನಿಲುಗಡೆ ಮತ್ತು ಫೋಟೊ ಹಾಕುವ ವಿಚಾರದಲ್ಲಿ ಜಗಳವಾಡಿದ್ದಾರೆ. ಕಾರ್ಯಕ್ರಮ ಮುಗಿದ ನಂತರವೂ ಗಲಾಟೆ ಮಾಡಿಕೊಂಡಿದ್ದಾರೆ. ಆ ವೇಳೆ ಕೊಲೆಯಾಗಿದೆ” ಎಂದು ತಿಳಿಸಿದರು.
ಈ ಸುದ್ದಿಓದಿದ್ದೀರಾ? ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹಳಿ ತಪ್ಪಿ, ಅರಾಜಕತೆ ತಾಂಡವವಾಡುತ್ತಿದೆ: ಬಿಜೆಪಿ ವಾಗ್ದಾಳಿ
“ಇದು ದೌರ್ಜನ್ಯದ ಪ್ರಕರಣವಲ್ಲ. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಯಾರಾದರೂ ಈ ರೀತಿ ಕೊಲೆಯಾದರೆ 8 ಲಕ್ಷ ರೂ. ಪರಿಹಾರ ಕೊಡಬಹುದು. ಮೊದಲ ಕಂತಾಗಿ 4.12 ಲಕ್ಷ ರೂ.ಗಳನ್ನು ಈಗ ಕುಟುಂಬದವರಿಗೆ ನೀಡಿದ್ದೇವೆ. ಪ್ರಕರಣದ ದೋಷಾರೋಪ ಪಟ್ಟಿ ಸಿದ್ಧವಾದ ಮೇಲೆ ಉಳಿದ ಹಣ ನೀಡುತ್ತೇವೆ. ವೇಣುಗೋಪಾಲ್ ಪತ್ನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಕೊಡಿಸಲು ಪ್ರಯತ್ನಿಸುತ್ತೇನೆ” ಎಂದು ತಿಳಿಸಿದರು.