ಚೆಕ್ ಬೌನ್ಸ್ ಪ್ರಕರಣದಲ್ಲಿ ಕೋರ್ಟ್ ತೀರ್ಪು ಬಂದ ಬಳಿಕ ನನ್ನ ರಾಜೀನಾಮೆಗೆ ಒತ್ತಾಯಿಸಿರುವ ಬಿಜೆಪಿಗರು ಮೊದಲು ಯತ್ನಾಳ್ ಆರೋಪಕ್ಕೆ ಉತ್ತರಿಸಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ. ವಿಪಕ್ಷ ನಾಯಕ ಆರ್ ಆಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಸಚಿವ ಮಧು ಬಂಗಾರಪ್ಪ ಅವರಿಗೆ 6 ಕೋಟಿ ರೂ. ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಈ ಬೆನ್ನಲ್ಲೇ, ಮಧು ಬಂಗಾರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆರ್ ಅಶೋಕ್ ಮತ್ತು ವಿಜಯೇಂದ್ರ ಒತ್ತಾಯಿಸುತ್ತಿದ್ದಾರೆ. ಅವರ ಒತ್ತಾಯಕ್ಕೆ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಧು ಬಂಗಾರಪ್ಪ ಮಾತನಾಡಿ, “ಚೆಕ್ ಬೌನ್ಸ್ ಪ್ರಕರಣ ವ್ಯವಹಾರಿಕ ವಿಷಯ. ಅದು ಖಾಸಗಿ ವಿಷಯ. ನನ್ನ ಖಾಸಗಿ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ನೀಚತನದ ರಾಜಕಾರಣ ಮಾಡುತ್ತಿದೆ. ಕೊರೋನಾ ಸಮಯದಲ್ಲಿ ಬಿಜೆಪಿ ಸರ್ಕಾರ 40,000 ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ ಎಂದು ಸ್ವತಃ ಬಿಜೆಪಿ ಶಾಸಕ ಯತ್ನಾಳ್ ಅವರೇ ಆರೋಪಿಸಿದ್ದಾರೆ. ಯತ್ನಾಳ್ ಯಾರ ವಿರುದ್ದ ಆರೋಪ ಮಾಡಿದ್ದಾರೆ ಎಂಬುದಕ್ಕೆ ವಿಜಯೇಂದ್ರ ಉತ್ತರಿಸಲಿ” ಎಂದು ಸವಾಲು ಹಾಕಿದ್ದಾರೆ.
“ನನ್ನ ತಂದೆ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ಅವರನ್ನು ಪವಿತ್ರವಾಗಿ ನೋಡಿಕೊಂಡಿದ್ದೇನೆ. ಚೋಟಾ ಸಹಿ, ಉದ್ದ ಸಹಿ ಮಾಡಿ ನನ್ನ ತಂದೆಯನ್ನು ಕೇಸಿಗೆ ಸಿಲುಕಿಸಲಿಲ್ಲ. ನನ್ನ ವಿರುದ್ದ ಟ್ವೀಟ್ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರನಿಗೆ ಮಾನ, ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ” ಎಂದಿದ್ದಾರೆ.
“ಉಪಮುಖ್ಯಮಂತ್ರಿಯಾಗಿದ್ದ ಅಶೋಕ್ ಅವರ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ಎಂಎಲ್‌ಸಿ ರವಿಕುಮಾರ್ ಜೀವನದಲ್ಲಿ ಒಂದು ಗ್ರಾಮ ಪಂಚಾಯತಿ ಚುನಾವಣೆಯನ್ನು ಎದುರಿಸಲಿಲ್ಲ. ನಳೀನ್ ಕುಮಾರ್ ಕಟೀಲ್‌ಗೆ ಧಮ್ಮು, ತಾಕತ್ತು ಇದ್ದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿ, ನಾನೇ ಕರಾವಳಿಗೆ ಬರುತ್ತೇನೆ” ಎಂದು ಸವಾಲು ಹಾಕಿದ್ದಾರೆ.