ಕಾಂಗ್ರೆಸ್ ಸರ್ಕಾರವು ಬಡ ಮಧ್ಯಮ ವರ್ಗದ ಜನರಿಗೆ ನೀಡಿರುವ ಯೋಜನೆಗಳ ಬಗ್ಗೆ ನಿರಂತರವಾಗಿ ಟೀಕೆ ಮಾಡುತ್ತಿರುವ ವಿರೋಧ ಪಕ್ಷಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, “ವಿಪಕ್ಷಗಳು ಎಷ್ಟೇ ಅಪಪ್ರಚಾರ ನಡೆಸಿದರೂ ರಾಜ್ಯದ ಜನ ಕಾಂಗ್ರೆಸ್ ಸರ್ಕಾರದ ಬೆನ್ನಿಗೆ ನಿಂತಿದ್ದಾರೆ” ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ರಾಜ್ಯಾದ್ಯಂತ ಇರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ 1,00,000ಕ್ಕೂ ಅಧಿಕ ಕುಟುಂಬಗಳು ಯೋಜನೆಯ ಫಲಾನುಭವಿಗಳಾಗಲು ನೋಂದಣಿ ಮಾಡಿಸಿಕೊಂಡಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
“ವಿಪಕ್ಷಗಳು ಎಷ್ಟೇ ಅಪಪ್ರಚಾರ ನಡೆಸಿದರೂ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಬೆನ್ನಿಗೆ ನಿಂತಿದ್ದಾರೆ. ಜನರ ಸೇವೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಸರ್ಕಾರದ ಸೇವೆಗಳನ್ನು ಜನರ ಬಳಿಗೆ ತಲುಪಿಸಲು ನಮ್ಮ ಇಲಾಖೆ ಸರ್ವ ಸನ್ನದ್ದವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ತಿಳಿಸಿದ್ದಾರೆ.