- ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಘಟನೆ
- ಅಧಿಕಾರಿಗಳಿಂದ ಉಂಟಾದ ಯಡವಟ್ಟು
ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅಧಿಕಾರಿಗಳ ಎಡವಟ್ಟಿನಿಂದಾಗಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪೇಚಿಗೆ ಸಿಲುಕಿದರು.
ಧ್ವಜಾರೋಹಣ ನೆರವೇರಿಸಿದ ಬಳಿಕ ಜಿಲ್ಲೆಯ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತ ಸಚಿವರು, ತಮ್ಮ ಭಾಷಣದಲ್ಲಿ ಕಳೆದ ವರ್ಷದ ರಾಜ್ಯೋತ್ಸವ ಪುರಸ್ಕೃತರ ಹೆಸರನ್ನು ಓದಿದರು.
ಈ ಬಾರಿ ಪ್ರಶಸ್ತಿಗೆ ಭಾಜನರಾದವರ ಹೆಸರನ್ನು ಸಚಿವರ ಭಾಷಣದಲ್ಲಿ ಸೇರಿಸದೇ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಅಧಿಕಾರಿಗಳು ಸಚಿವರ ಭಾಷಣದಲ್ಲಿ ಕಳೆದ ವರ್ಷ ಪ್ರಶಸ್ತಿ ಪಡೆದ ಶಂಕ್ರಪ್ಪ ಹೊರಪೇಟೆ ಹಾಗೂ ಸಣ್ಣ ರಂಗಪ್ಪ ಚಿತ್ರಗಾರ ಹೆಸರು ಹಾಕಿದ್ದಾರೆ. ಅವರ ಹೆಸರುಗಳನ್ನೇ ಸಚಿವರು ಓದಿ ಪೇಚಿಗೆ ಸಿಲುಕಿದರು.
ಜಿಲ್ಲೆಯ ತೊಗಲು ಗೊಂಬೆ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ, ಭೂ ದಾನಿ ಹುಚ್ಚಮ್ಮಚೌದ್ರಿ ಹಾಗೂ ಹಗಲು ವೇಷ ಕಲಾವಿದ ವಿಭೂತಿ ಗುಂಡಪ್ಪ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ತಕ್ಷಣ ಎಚ್ಚೆತ್ತ ಸಚಿವರು ಈ ವರ್ಷ ಮೂವರು ಗಣ್ಯರಿಗೆ ರಾಜ್ಯೋತ್ಸವ ನೀಡಲಾಗಿದೆ ಎಂದು ತಪ್ಪು ಸರಿಪಡಿಸಿದರು.