- ಬಿಜೆಪಿಯವರು ನಿರುದ್ಯೋಗಿಗಳಾಗಿದ್ದಾರೆ, ಕೆಲಸ ಇಲ್ಲದೆ ಏನೇನೆಲ್ಲ ಹೇಳುತ್ತಿದ್ದಾರೆ
- ಕುಮಾರಸ್ವಾಮಿ ಅವರು ಎಸ್ ಪಿ ರೋಡ್ ನಿಂದ ಪೆನ್ ಡ್ರೈವ್ ತಂದಿದ್ದಾರೆ ಅಸಿಸುತ್ತೆ
ಎರಡು ಬಾರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆ ಆಗಿತ್ತು, ಹಾಗಾಗಿ ಸಭೆ ಕರೆದಿದ್ದಾರೆ. ಇದನ್ನೇ ಬಿಜೆಪಿ ನಾಯಕರು ಫೋಟೋಶಾಪ್ ಮಾಡಿ ಹಾಕಿದ್ದಾರೆ. ಆ ಬಗ್ಗೆ ಕ್ರಿಮಿನಲ್ ಕೇಸ್ ಹಾಕಿ ತನಿಖೆಗೆ ಕೊಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಕಾಸ ಸೌಧದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಪತ್ರ ಬರೆದಿದ್ದು ನಿಜ, ಶಾಸಕಾಂಗ ಸಭೆ ಕರೆಯಬೇಕೆಂದು ಮುಖ್ಯಮಂತ್ರಿ ಜೊತೆಗೆ ಕೇಳಿಕೊಂಡಿದ್ದೇನೆ. ಬಿಜೆಪಿ ಬಳಿ ಇರುವುದು ನಕಲಿ ಪತ್ರ ಎಂದು ಶಾಸಕ ಬಿ ಆರ್ ಪಾಟೀಲ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಶಾಸಕಾಂಗ ಸಭೆ ಮುಂದೂಡಿದ್ದರಿಂದ ಬೇಗ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಹೇಳಿದ್ದಾರೆ. ಅದರಲ್ಲಿ ಗೊಂದಲ ಏನಿದೆ? ಬಿಜೆಪಿ ಅವರು ನಿರುದ್ಯೋಗಿಗಳಾಗಿದ್ದಾರೆ. ಕೆಲಸ ಇಲ್ಲದೆ ಮೈ ಪರಚಿಕೊಂಡು ಏನೇನೆಲ್ಲ ಹೇಳುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
“ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರು ಹೇಳಿದ್ದು ಬಜೆಟ್ ಇರುವ ಕಾರಣ ಅನುದಾನ ಬಿಡುಗಡೆ ಆಗಿಲ್ಲ. ಅನುದಾನದ ಕುರಿತು ಚರ್ಚೆ ಆಗಲಿದೆ. ಹಿಂದಿನ ಸರ್ಕಾರದಲ್ಲಿ ಅನುಮತಿ ಇಲ್ಲದೆ ಅನುದಾನ ಮಂಜೂರು ಆಗಿದೆ. ಸಾವಿರಾರು ಕೋಟಿ ಕೆಲಸ ಆಗಬೇಕಿದೆ. ಅವೈಜ್ಞಾನಿಕವಾಗಿ ಅನುದಾನ ಹಂಚಿಕೆ ಆಗಿದೆ ಎಂದಿದ್ದಾರೆ” ಎಂದು ವಿವರಿಸಿದರು.
‘ಅಗತ್ಯ ಇರುವ ಕಾಮಗಾರಿಗಳಿಗೆ ಅನುದಾನ ಸಿಗಲಿದೆ‘
ಡಿಸಿಎಂ ಡಿ ಕೆ ಶಿವಕುಮಾರ್ ಅವರ ಗ್ಯಾರಂಟಿ ಜಾರಿ ಆಗಿರುವುದರಿಂದ ಅನುದಾನ ಕೇಳಬೇಡಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಕೆಲಸ ಆಗುತ್ತದೆ ಎಂದು ಜನರು ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಎರಡೇ ತಿಂಗಳು ಕಳೆದಿವೆ. ನೂತನವಾಗಿ ಗೆದ್ದಿರುವ ಶಾಸಕರಿಗೆ ಭಯ ಇರೋದು ನಿಜ. ಅದನ್ನು ಸಭೆಯಲ್ಲಿ ಬಗೆಹರಿಸುತ್ತೇವೆ. ಅಗತ್ಯ ಇರುವ ಕಾಮಗಾರಿಗಳಿಗೆ ಯಾವುದೇ ಕೊರತೆ ಆಗದೆ ಅನುದಾನ ಸಿಗಲಿದೆ” ಎಂದು ಸ್ಪಷ್ಟನೆ ನೀಡಿದರು.
‘ವಿಪಕ್ಷಗಳಿಗೆ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಸಹಿಸಲಾಗುತ್ತಿಲ್ಲ’
“ವಿರೋಧ ಪಕ್ಷದವರಿಗೆ ಗ್ಯಾರಂಟಿ ಯೋಜನೆಗಳು ಜಾರಿ ಆಗಿರುವುದನ್ನು ಸಹಿಸಲು ಆಗುತ್ತಿಲ್ಲ. ಜೆಡಿಎಸ್ ಅವರಿಗೆ ಅಸ್ತಿತ್ವ ಇರಲಿದೆಯೋ ಇಲ್ಲವೋ ಗೊತ್ತಿಲ್ಲ, ವಿಲೀನ ಆಗುತ್ತೇನೋ ಗೊತ್ತಿಲ್ಲ. ಆದರೆ ಪ್ಲೇಯಿಂಗ್ 11 ಅಂತ ಇರುತ್ತದೆ. ಬಿಜೆಪಿಯವರಿಗೆ ಇದರಲ್ಲಿ ನಾಯಕ ಯಾರು ಎಂದು ಆಯ್ಕೆ ಮಾಡಲು ಆಗಿಲ್ಲ. ಬಿಜೆಪಿ ಅವರು 12 ಸಬ್ಸ್ಟಿಟ್ಯೂಟ್ ಆಯ್ಕೆ ಮಾಡುತ್ತಿದ್ದಾರೆ. ಅವರಿಗೂ ಅಸ್ತಿತ್ವ ಇಲ್ಲ, ಇವರಿಗೂ ಅಸ್ತಿತ್ವ ಇಲ್ಲ” ಎಂದು ವ್ಯಂಗ್ಯವಾಡಿದರು.
“ಜೆಡಿಎಸ್ ಬಿಜೆಪಿಯದ್ದು ಮೈತ್ರಿ ಎಂದು ಹೇಳಿಲ್ಲ, ವಿಲೀನ ಎಂದು ಹೇಳಿದ್ದೇನೆ. ನಾವು ಮೈತ್ರಿ ಮಾಡಿಕೊಂಡಿದ್ದು, ಅವರು ವಿಲೀನ ಮಾಡಿಕೊಳ್ಳುತ್ತಿದ್ದಾರೆ. ವರ್ಜಿನಲ್ ಬಿಜೆಪಿನೂ ಇಲ್ಲ, ಜೆಡಿಎಸ್ ಕೂಡ ಇಲ್ಲ. ಇವರಲ್ಲಿ ವಿರೋಧ ಪಕ್ಷದ ನಾಯಕನೇ ಇಲ್ಲ. ಹತಾಶರಾಗಿ ಪ್ರತಿಭಟನೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ವರ್ಗಾವಣೆ ದಂಧೆ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಆದರೆ, ಅವರು ಬಳಿ ಸಾಕ್ಷಿ ಏನಿದೆ? ಏನಾದರೂ ಸಾಕ್ಷಿ ಇದ್ದರೆ ಮಾತನಾಡಲಿ. ಅದೇನೋ ಪೆನ್ ಡ್ರೈವ್ ಅಂದ್ರು. ಎಸ್ ಪಿ ರೋಡ್ ನಿಂದ ಪೆನ್ ಡ್ರೈವ್ ತಂದಿರೋದು ಅನ್ಸುತ್ತೆ” ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯವರು ಹಿಂದುತ್ವ ಜಪ ಬಿಟ್ಟು ಭಗವಂತನ ಸೇವೆ ಮಾಡಲಿ: ಜನಾರ್ದನ ರೆಡ್ಡಿ ಅಭಿಮತ
ಜೆಡಿಎಸ್ ಶಾಸಕ ರೇವಣ್ಣಗೆ ತಿರುಗೇಟು
‘ಪಿಡಿಒಗಳ ವರ್ಗಾವಣೆ ವಿಚಾರದಲ್ಲಿ ಸಚಿವರೇ ಡೀಲ್ ಮಾಡುತ್ತಿದ್ದಾರೆ’ ಎಂಬ ಜೆಡಿಎಸ್ ಎಚ್ ಡಿ ರೇವಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಯಾಂಕ್ ಖರ್ಗೆ, “ಹೌದು, ನೇರವಾಗಿ ಪಿಡಿಓ ವರ್ಗಾವಣೆ ಸರ್ಕಾರದ ಮಟ್ಟದಲ್ಲಿ ಆಗುತ್ತದೆ. ಪಿಡಿಓಗಳು ಈಗ ಸ್ಟೇಟ್ ಕೇಡರ್ ನಲ್ಲಿ ಬರ್ತಾರೆ. ಮೊದಲು ಸಿಇಒ ಮತ್ತು ಕಮಿಷನರ್ ಹಂತದಲ್ಲಿ ಪಿಡಿಓ ವರ್ಗಾವಣೆ ಆಗುತ್ತಿತ್ತು. ಡೀಲ್ ಬಗ್ಗೆ ಆರೋಪ ಮಾಡಿರುವ ರೇವಣ್ಣ ಅವರು ದಾಖಲೆ ಇದ್ದರೆ ಕೊಡಲಿ. ವರ್ಗಾವಣೆ ಸಹಜ ಪ್ರಕ್ರಿಯೆ ಅದು ಕಾನೂನು ಪ್ರಕಾರ ಆಗುತ್ತದೆ. ಬೇಕಿದ್ದರೆ ಪಿಡಿಓ ಸಂಘಟನೆ ಅವರನ್ನು ಕರೆದು ಕೇಳಲಿ. ರೇವಣ್ಣ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಾರೆ. ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಹಾಗಾಗಿ ಹೀಗೆಲ್ಲ ಮಾತಾನಾಡುತ್ತಿದ್ದಾರೆ” ಎಂದು ಆರೋಪವನ್ನು ತಳ್ಳಿಹಾಕಿದರು.