ಪ್ರಧಾನಿ ಮೋದಿ ಅವರ ಅತ್ಯಾಪ್ತ ಎಂದೇ ಗುರುತಿಸಿಕೊಂಡಿರುವ, ಅಮೆರಿಕದಲ್ಲಿ ದಾಖಲಾಗಿರುವ ಲಂಚ ಪ್ರಕರಣದ ಆರೋಪಿಯೂ ಆಗಿರುವ ಉದ್ಯಮಿ ಗೌತಮ್ ಅದಾನಿ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದಾರೆ. ಇದು ಸೌಜನ್ಯದ ಭೇಟಿಯೆಂದು ಹೇಳಿಕೊಂಡಿದ್ದಾರೆ.
ದಕ್ಷಿಣ ಮುಂಬೈನಲ್ಲಿರುವ ಫಡ್ನವೀಸ್ ಅವರ ಅಧಿಕೃತ ನಿವಾಸ ‘ಸಾಗರ್’ ಬಂಗಲೆಯಲ್ಲಿ ಫಡ್ನವೀಸ್ ಅವರನ್ನು ಅದಾನಿ ಭೇಟಿ ಮಾಡಿದ್ದಾರೆ. ಫಡ್ನವೀಸ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅದಾನಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಈಗ ಭೇಟಿ ಮಾಡಿದ್ದಾರೆ ಎಂದು ಅವರ ಆಪ್ತರು ಹೇಳಿರುವುದಾಗಿ ವರದಿಯಾಗಿದೆ.
ಅಂದಹಾಗೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅದಾನಿ ಹೆಸರು ಭಾರೀ ಚರ್ಚೆಯಲ್ಲಿತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಅದಾನಿ ಶ್ರಮಿಸಿದ್ದಾರೆ. ಶ್ರಮಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. 2019ರ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಮತ್ತು ಎನ್‌ಸಿಪಿ ನಡುವಿನ ಮೈತ್ರಿಗಾಗಿ ಅದಾನಿ ಮಧ್ಯಸ್ಥಿಕೆ ವಹಿಸಿದ್ದರು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರೇ ಇತ್ತೀಚೆಗೆ ಹೇಳಿದ್ದರು.
ಗಮನಾರ್ಹವಾಗಿ, ಮಹಾರಾಷ್ಟ್ರದಲ್ಲಿ ತನ್ನ ಉದ್ಯಮವನ್ನು ಉಳಿಸಿಕೊಳ್ಳಲು ಮತ್ತು ವಿಸ್ತರಿಸಲು ಅಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಬೇಕೆಂದು ಅದಾನಿ ಬಯಸಿದ್ದರು. ಅದಕ್ಕಾಗಿಯೇ, 2019ರಲ್ಲಿಯೂ ಅವರು ಬಿಜೆಪಿ-ಎನ್‌ಸಿಪಿ ಒಳಗೊಂಡ ಸಭೆ ನಡೆಸಿದ್ದರು. ಆದರೆ, ಅದು ವಿಫಲವಾಗಿತ್ತು. 2022ರಲ್ಲಿ ಹಿಂಬಾಗಿಲಿನಿಂದ ಬಿಜೆಪಿ ಅಧಿಕಾರಕ್ಕೇರಿದ ಬಳಿಕ, ಮಹಾಯುತಿ ಸರ್ಕಾರದಿಂದ ಭಾರೀ ಪ್ರಯೋಜನಗಳನ್ನು ಅದಾನಿ ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ, ಮಹಾರಾಷ್ಟ್ರಕ್ಕೆ 6,600 ಮೆಗಾವ್ಯಾಟ್ ಸೌರವಿದ್ಯುತ್ ಮತ್ತು ಥರ್ಮಲ್ ವಿದ್ಯುತ್ ಪೂರೈಸುವ ಗುತ್ತಿಗೆಯನ್ನು ಅದಾನಿ ಗ್ರೂಪ್ ಪಡೆದುಕೊಂಡಿದೆ. ಮಹಾಯುತಿ ಸರ್ಕಾರವು ಮೋದಿ ಸೂಚನೆಯ ಮೇರೆಗೆ ಆ ಗುತ್ತಿಗೆಯನ್ನು ಅದಾನಿಗೆ ನೀಡಿದೆ ಎಂಬ ಆರೋಪಗಳಿವೆ.
ಈ ವರದಿ ಓದಿದ್ದೀರಾ?: ಮೋದಾನಿ ಫೈಲ್ಸ್ | ಜಾರ್ಖಂಡ್‌ನ ಅದಾನಿ ವಿದ್ಯುತ್ ಸ್ಥಾವರದ ವಿಚಿತ್ರ ಕಥೆ ಇದು!
ಅಲ್ಲದೆ, ಮುಂಬೈನಲ್ಲಿರುವ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನೂ ಅದಾನಿ ಗ್ರೂಪ್ ಪಡೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಪವರ್ ಪ್ಲಾಂಟ್, ಸಿಮೆಂಟ್ ಪ್ಲಾಂಟ್, ಸಿಎನ್‌ಜಿ-ಪೆಟ್ರೋಲಿಯಂ ಪ್ಲಾಂಟ್‌ಗಳು ಸೇರಿದಂತೆ ಹಲವಾರು ಉದ್ದಿಮೆಗಳನ್ನು ಅದಾನಿ ಹೊಂದಿದ್ದಾರೆ. ಇತರ ಉದ್ದಿಮೆಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವಾಗಿಯೇ ಇತ್ತೀಚೆಗೆ ಅಂಬುಜಾ ಸಿಮೆಂಟ್ ಉದ್ದಿಮೆಯನ್ನು ತಮ್ಮ ಸಮೂಹಕ್ಕೆ ವಿಲೀನ ಮಾಡಿಕೊಂಡಿದ್ದಾರೆ.
ಕಳೆದ ತಿಂಗಳ ನಡೆದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರಲು ಅದಾನಿ ನೇರವಾಗಿ ಕಣಕ್ಕಿಳಿದಿದ್ದಾರೆ, ಹಣವನ್ನು ನೀರಿನಂತೆ ಹರಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಸದ್ಯ, ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಮತ್ತೆ ರಚನೆಯಾಗಿದೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಫಡ್ನವೀಸ್ ಅವರನ್ನು ಅದಾನಿ ಭೇಟಿಯಾಗಿದ್ದಾರೆ. ಅದಾನಿಗಾಗಿ ಮಹಾರಾಷ್ಟ್ರ ಸರ್ಕಾರ ಏನೆಲ್ಲಾ ನೀತಿಗಳನ್ನು ತರಬಹುದು. ಯಾವೆಲ್ಲ ಗುತ್ತಿಗೆಗಳನ್ನು ಅದಾನಿಗೆ ನೀಡಬಹುದು. ಕಾದುನೋಡಬೇಕಷ್ಟೇ…!