ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಳಿ ವಾಷಿಂಗ್ ಮಷೀನ್ ಎಂಬ ದೊಡ್ಡ ಯಂತ್ರವಿದೆ. ಇದು ಎಷ್ಟು ದೊಡ್ಡ ಯಂತ್ರವೆಂದರೆ ಅದು ಬಟ್ಟೆಗಳನ್ನು ಮಾತ್ರವಲ್ಲ; ಮನುಷ್ಯರನ್ನು ಕೂಡ ಶುದ್ಧಗೊಳಿಸಬಲ್ಲದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ನಾಮಪತ್ರ ಸಲ್ಲಿಸಿದ ಬಳಿಕ ನಗರದ ಎನ್. ವಿ.ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಒಮ್ಮೆ ಬಿಜೆಪಿ ಸೇರಿದರೆ ಸಾಕು ವಾಷಿಂಗ್ ಮಷೀನ್ ಯಂತ್ರದ ಮೂಲಕ ಹಾದು ಎಲ್ಲರೂ ಪರಿಶುದ್ಧರಾಗುತ್ತಾರೆ. ಭ್ರಷ್ಟತೆಯ ಆರೋಪದ ಮೇಲೆ ಜೈಲಿಗೆ ಕಳುಹಿಸಲ್ಪಟ್ಟವರು, ಭ್ರಷ್ಟಾಚಾರ ಆರೋಪ ಪ್ರಕರಣ ದಾಖಲಾದವರು, ನೀವೇ ಜೈಲಿಗೆ ಕಳಿಸದವರೆಲ್ಲಾ ನಿಮ್ಮ ಪಕ್ಷಕ್ಕೆ ಸೇರಿದ ಮೇಲೆ ಅದು ಹೇಗೆ ಪರಿಶುದ್ಧರಾಗುತ್ತಾರೆ?” ಎಂದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಪ್ರಶ್ನಿಸಿದರು.
“ಮೋದಿ ಭ್ರಷ್ಟರನ್ನು ಎಂದಿಗೂ ಬಿಡುವುದಿಲ್ಲ ಎನ್ನುತ್ತಾರೆ. ಆದರೆ ಭ್ರಷ್ಟರು ಅವರ ಹೆಗಲ ಮೇಲೆಯೇ ಕುಳಿತಿದ್ದಾರೆ. ಅಂಥವರನ್ನು ನೀವು ಸಿಎಂ ಮಾಡುತ್ತೀರಿ. ಕರ್ನಾಟಕ, ಗೋವಾ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ನೀವು ಇದನ್ನೇ ಮಾಡಿದ್ದೀರಿ. ಇದೇ ಮೋದಿ ಮತ್ತು ಶಾ ರ ಪ್ರಜಾಸತ್ತಾತ್ಮಕ ತತ್ವಗಳು” ಎಂದು ಕುಟುಕಿದರು.
ನಮ್ಮ ಭಾಗಕ್ಕೆ ಪ್ರಧಾನಿ ಮಂತ್ರಿಗಳು ಬರುವುದೇ ತುಂಬಾ ಕಡಿಮೆ, ಆದರೆ ಪ್ರಧಾನಿ ಮೋದಿ ಪದೇ ಪದೇ ಇಲ್ಲಿ ಬಂದು ಹೋಗಿದ್ದಾರೆ. ಹೊರತು ಹತ್ತು ವರ್ಷದ ಕೇಂದ್ರ ಬಿಜೆಪಿ ಆಡಳಿತ ಅವಧಿಯಲ್ಲಿ ಈ ಭಾಗಕ್ಕೆ ಏನು ಕೊಟ್ಟಿದ್ದಾರೆ ಎಂಬುದು ಮುಖ್ಯವಾಗಿದೆ. ನಾವು 371(J) ವಿಧಿಯನ್ನು ಜಾರಿಯಾದ ಬಳಿಕ ಈ ಭಾಗದ ಕೇಂದ್ರ ಸರ್ಕಾರ ಯಾವ ಅಭಿವೃದ್ಧಿ ಕಾರ್ಯಗಳನ್ನು ಕೈಗೆೊಂಡಿದೆ, ಯಾವ ಕಾರ್ಖಾನೆಗಳನ್ನು ತಂದಿದೆ ಹಾಗೂ ಯಾವ ಹೊಸ ಮೂಲಸೌಕರ್ಯ ಯೋಜನೆಗಳನ್ನು ಮಂಜೂರು ಮಾಡಿದೆ ಎಂಬುದನ್ನು ತಿಳಿಸಬೇಕು” ಎಂದರು.
“ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿ ನಡೆಯುತ್ತಿದ್ದ ಸಾಮಾನ್ಯ ಅಭಿವೃದ್ಧಿ ಕಾಮಗಾರಿಗಳನ್ನೂ ನಿಲ್ಲಿಸಿದ್ದಾರೆ. ಯಾದಗಿರಿಯಲ್ಲಿ ನಮ್ಮ ರೈಲ್ವೇ ಕೋಚ್ ಫ್ಯಾಕ್ಟರಿ ನಿಂತಿತು. ಅಲ್ಲಿ ಈಗ ಕೇವಲ 200-300 ಜನರು ಕೆಲಸ ಮಾಡುತ್ತಿದ್ದಾರೆ. ಕನಿಷ್ಠ 2,000 ಜನರಿಗೆ ಉದ್ಯೋಗ ಕಲ್ಪಿಸಲು ನಾನು ಆ ಕಾರ್ಖಾನೆಯನ್ನು ಆರಂಭಿಸಿದ್ದೆ. ಆದರೆ ಅವರು ಈ ಕಾರ್ಖಾನೆಯನ್ನು ಮುಂದುವರಿಸಲಿಲ್ಲ ಬದಲಿಗೆ ನಿಲ್ಲಿಸಿದರು. ನಾನು ಪ್ರಧಾನಿಯವರನ್ನು ಭೇಟಿಯಾದಾಗ ಈ ಭಾಗದಲ್ಲಿ ಅಭಿವೃದ್ಧಿ ಮೂಲಕ ಬದಲಾವಣೆ ತರಲು ಅವರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಲಿಲ್ಲ” ಎಂದರು.
ಕಲಬುರಗಿಯಲ್ಲಿ ಇಎಸ್ಐ ಆಸ್ಪತ್ರೆ ಇದೆ. ಇದು ಕಾರ್ಮಿಕರು, ಬಡವರು, ದಿನಗೂಲಿ ಕಾರ್ಮಿಕರು ಮುಂತಾದ ಇಎಸ್ಐ ಕೊಡುಗೆದಾರರಿಗೆ ದೊಡ್ಡ ಮಟ್ಟದಲ್ಲಿ ಉಪಯೋಗಕಾರಿಯಾಗಿದೆ. ಇದನ್ನು ದೆಹಲಿಯ ಏಮ್ಸ್ ನಂತೆ ಮೇಲ್ದರ್ಜೆಗೆ ಏರಿಸಬೇಕು ಎಂದರೂ ಸ್ಪಂದಿಸಲಿಲ್ಲ. ಕೇಂದ್ರ ಸರ್ಕಾರ, ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕಾಗಿ ಯಾವುದೇ ಕೆಲಸ ಮಾಡಿಲ್ಲ. ಕಳೆದ ಐದು ವರ್ಷದಲ್ಲಿ ಕರ್ನಾಟಕಕ್ಕೆ ನನ್ನ ಕೊಡುಗೆಯ 10 ಪೈಸೆಯಷ್ಟಾದರೂ ಅವರು ಕೊಡುಗೆ ನೀಡಿದ್ದಾರಾ” ಎಂದು ಸವಾಲು ಹಾಕಿದರು.
“ಎಲ್ಲ ಕಡೆಗಳಲ್ಲಿ ಮೋದಿಯವರು ನಮ್ಮ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿನೇ ನಕಲು ಮಾಡಿ ಮೋದಿ ಗ್ಯಾರಂಟಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಮೋದಿಯವರೇ ನಿಮ್ಮ ಗ್ಯಾರಂಟಿ ಎಲ್ಲಿದೆ?. ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ, ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಹೇಳಿದ್ದರು, ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
“ಈ ಚುನಾವಣೆಯು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ನಡೆಯುತ್ತಿದ್ದು ಬಿಜೆಪಿಗೆ ಮತ ನೀಡಿದರೆ ಮೋದಿ ಅವರು ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಪ್ರಜಾಪ್ರಭುತ್ವ ನಾಶಪಡಿಸುತ್ತಾರೆ. ಈಗಾಗಲೇ ಮೋದಿ ಅವರು ಎಲ್ಲಾ ಸಂಘಟನೆಗಳನ್ನು ನಾಶ ಮಾಡಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ
“ಎಲ್ಲ ಸರ್ಕಾರಿ ಸಂಸ್ಥೆಗಳಲ್ಲಿ ಆರ್ಎಸ್ಎಸ್ ಕಾರ್ಯಕರ್ತರನ್ನು ನೇಮಿಸಿಕೊಂಡು ಇತರರನ್ನು ನಿರುದ್ಯೋಗಿಗಳು ಮತ್ತು ಶಕ್ತಿ ಹೀನರನ್ನಾಗಿ ಮಾಡಿದ್ದಾರೆ. ಪ್ರಜಾಪ್ರಭುತ್ವವನ್ನು ಉಳಿಸಬೇಕು, ಡಾ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ರಕ್ಷಿಸಲು ಮತ್ತು ಸ್ಥಳೀಯ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ” ಎಂದು ಮನವಿ ಮಾಡಿದರು.