ಜನಪರ ಆಡಳಿತ ನಡೆಸುವಲ್ಲಿ ಬಿಜೆಪಿ ವಿಫಲ – ಚುನಾವಣೆ ಗೆಲ್ಲುವಲ್ಲಿ ಸಫಲ

Date:

Advertisements

2024ರ ಜೂನ್ 4ರಂದು 18ನೇಯ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ದೇಶದ ಮತದಾರರು ನೀಡಿದ ಫಲಿತಾಂಶ ಹಲವು ರಾಜಕಾರಣಿಗಳನ್ನು ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ. ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದ ಬಿಜೆಪಿಯ ಮುಖಕ್ಕೆ ಹೊಡೆಯುವಂತಹ ಫಲಿತಾಂಶವನ್ನು ದೇಶದ ಮತದಾರರು ನೀಡಿದ್ದು, ಇದೀಗ ಎಲ್ಲರ ಕಣ್ಣಮುಂದಿದೆ. ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವುದಕ್ಕೆ ಅಗತ್ಯವಿದ್ದ ಮ್ಯಾಜಿಕ್ ನಂಬರ್ 272 ಸ್ಥಾನಗಳನ್ನು ಗೆಲ್ಲುವಲ್ಲಿ ಬಿಜೆಪಿ ವಿಫಲವಾಗಿದೆ. ಆದರೂ, ಎನ್‌ಡಿಎ ಮೈತ್ರಿಯೊಂದಿಗೆ ಸರ್ಕಾರ ರಚಿಸಿದ್ದು, 3ನೇ ಅವಧಿಗೆ ಅಧಿಕಾರಕ್ಕೇರಿದೆ.

ಕಳೆದ ಹತ್ತು ವರ್ಷಗಳಲ್ಲಿ ಅಂದರೆ, 2014 ಮತ್ತು 2019ರ ಚುನಾವಣೆಯಲ್ಲಿ ಮ್ಯಾಜಿಕ್ ನಂಬರ್‌ಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಯಾರ ಬೆಂಬಲವೂ ಇಲ್ಲದೆ ಸರ್ಕಾರ ರಚನೆ ಮಾಡಿತ್ತು. ಇದೀಗ, 2024ರ ಚುನಾವಣೆಯಲ್ಲಿ 240ರ ಗಡಿಯನ್ನು ಮುಟ್ಟೋಕೆ ಬಿಜೆಪಿ ತಡಕಾಡಿತ್ತು. ಸರ್ಕಾರ ರಚನೆ ಮಾಡೋದಕ್ಕೆ ಮೋದಿ ನೇತೃತ್ವದ ಬಿಜೆಪಿ ನಾನಾ ತಂತ್ರಗಳನ್ನು ಎಣೆದಿತ್ತು. ಕೊನೆಗೆ, ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಮೈತ್ರಿಕೂಟದಿಂದ 292 ಸ್ಥಾನಗಳನ್ನು ಕ್ರೂಡಿಕರಿಸಿ ಸಮ್ಮಿಶ್ರ ಸರ್ಕಾರವನ್ನು ರಚನೆ ಮಾಡಿದೆ.

ಏನೇ ಇರಲಿ, ಬಿಜೆಪಿ ಜನರ ಪರ ನಿಲುವು, ಜನರಿಗೆ ಅವಶ್ಯ ಇರುವ ಯೋಜನೆಗಳನ್ನು ರೂಪಿಸುವಲ್ಲಿ ಹಿಂದೆ ಇದ್ದರೂ, ಒಳ್ಳೆಯ ಆಡಳಿತ ನಡೆಸಲು ವಿಫಲವಾಗಿದ್ದರೂ ಚುನಾವಣೆ ಗೆಲ್ಲುವಲ್ಲಿ ತನ್ನ ಉತ್ಸುಕತೆಯಲ್ಲಿ ಯಾವತ್ತಿಗೂ ಹಿಂದೆಬಿದ್ದಿಲ್ಲ. ನಿರುತ್ಸಾಹ ತೋರಿಸಿಲ್ಲ. ಬಿಜೆಪಿ ಚುನಾವಣೆಯನ್ನು ಗೆಲ್ಲಬೇಕು, ಈ ಹಿಂದೆ ಕಾಂಗ್ರೆಸ್ ದೇಶವನ್ನು ಆಳಿದಂತೆಯೇ ನಿರಂತರವಾಗಿ ಸರ್ಕಾರ ರಚಿಸಿ ಭಾರತವನ್ನು ಆಳಬೇಕೆಂದು ಬಯಸುತ್ತದೆ. ಇದರಲ್ಲಿ ಬಿಜೆಪಿ ಸಾಕಷ್ಟು ಯಶಸ್ವಿಯನ್ನೂ ಖಂಡಿದೆ. 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಮತ್ತು ಆ ಎರಡೂ ಅವಧಿಗಳಲ್ಲಿ ಹಲವಾರು ರಾಜ್ಯ ಚುನಾವಣೆಗಳಲ್ಲಿಯೂ ಗೆಲುವು ಸಾಧಿಸಿದೆ.

Advertisements

ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ, ಕರ್ನಾಟಕ ಮತ್ತು ಮಧ್ಯಪ್ರದೇಶದಂತೆ ಆಡಳಿತದಲ್ಲಿದ್ದ ಇತರ ಪಕ್ಷಗಳ ಶಾಸಕರನ್ನು ಬೇಟೆಯಾಡುವ ಮೂಲಕ ಸರ್ಕಾರಗಳನ್ನು ರಚಿಸಿದೆ. ರಾಹುಲ್‌ಗಾಂಧಿ ಅವರಿಗೆ ಆಪ್ತರಾಗಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ಮಾಜಿ ನಾಯಕ ಜ್ಯೋತಿರಧೊತ್ಯ ಸಿಂಧಿಯಾ ಅವರನ್ನೂ ಬಿಜೆಪಿ ಸೆಳೆದುಕೊಂಡಿದೆ. ವಿಶೇಷವೆಂದರೆ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಡಾ. ಸುಶ್ರುತಗೌಡ ಬಿಜೆಪಿಗೆ ಸೇರಿದರು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಬಲಗೈ ಬಂಟನಂತಿದ್ದ ಸುವೇಂದು ಅಧಿಕಾರಿಯನ್ನೂ ಬಿಜೆಪಿ ಸೆಳೆದುಕೊಂಡಿತು. ಹೀಗೆ, ದೇಶಾದ್ಯಂತ, ವಿವಿಧ ಪಕ್ಷಗಳ ನಾಯಕರನ್ನು ಬಿಜೆಪಿ ಬೇಟೆಯಾಡುವಲ್ಲಿ ಯಶಸ್ವಿಯಾಗಿದೆ.

ಚುನಾವಣೆಗಳನ್ನು ಗೆಲ್ಲಲು ಬಿಜೆಪಿ ನಾಯಕರು ಜನರು ಭಾವನೆಗಳನ್ನು ಬಳಸಿಕೊಳ್ಳುತ್ತಾರೆ. ಜನರ ಭಾವನೆಗಳೊಂದಿಗೆ ಆಟವಾಡುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚುನಾವಣಾ ಪ್ರಚಾರದ ಸಮಯದಲ್ಲಿ ಅವರು ಜನರ ಗಮನವನ್ನು ತಮ್ಮತ್ತ ಸೆಳೆಯರು ನಾನಾ ರೀತಿಯ ತಂತ್ರಗಳನ್ನು ಹೆಣೆಯುತ್ತಾರೆ. ಅದಕ್ಕೆ, ಬಳಕೆಯಾಗುವ ಪ್ರಮುಖ ಅಸ್ತ್ರಗಳು ಹಿಂದುತ್ವ ಮತ್ತು ಕೋಮುವಾದ.

ಚುನಾವಣೆಯ ಸಮಯದಲ್ಲಿ ದ್ವೇಷ ರಾಜಕಾರಣವನ್ನು ಮುನ್ನೆಲೆಗೆ ತರುತ್ತದೆ. ಹಿಂದು-ಮುಸ್ಲಿಮರ ನಡುವೆ ದ್ವೇಷ ಬಿತ್ತುವಲ್ಲಿ, ಮುಸ್ಲಿಮರನ್ನು ತಮ್ಮ ಶತ್ರುಗಳಂತೆ ಬಿಂಬಿಸುವಲ್ಲಿ ಬಿಜೆಪಿ ಯಶಸ್ವಿಯಾಗುತ್ತಿದೆ. ಇದಕ್ಕೆ ಹಲವಾರು ಉದಾಹರಣೆಗಳು ಕೂಡ ಇವೆ. ಇತ್ತೀಚೆಗೆ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ಎರಡು ಘಟನೆಗಳ ಬಗ್ಗೆ ನಾವು ಸೂಕ್ಷ್ಮವಾಗಿ ಅವಲೋಕನ ಮಾಡಿದರೇ, ವಾಸ್ತವ ಏನು ಎಂಬುದು ಅರ್ಥ ಆಗುತದೆ. ಮೊದಲನೆಯದಾಗಿ ಹುಬ್ಬಳ್ಳಿಯಲ್ಲಿ ಪ್ರೀತಿಯ ವಿಚಾರಕ್ಕೆ ನೇಹಾ ಹಿರೇಮಠ ಎಂಬ ಯುವತಿಯನ್ನು ಫೈಜಲ್ ಎಂಬಾತ ಬರ್ಬರವಾಗಿ ಹಾಡಹಗಲೇ ಕಾಲೇಜು ಕ್ಯಾಂಪಸ್‌ನಲ್ಲಿ ಕೊಲೆ ಮಾಡಿದ್ದನು. ಈ ಕೊಲೆ ಖಂಡನೀಯ, ಆರೋಪಿಗೆ ತಕ್ಕ ಶಿಕ್ಷೆಯಾಗಲೇಬೇಕು. ಇದರಲ್ಲಿ ಎರಡು ಮಾತಿಲ್ಲ. ಆದರೆ, ಬಿಜೆಪಿ ಇದನ್ನು ರಾಜಕೀಯವಾಗಿ ಬಳಸಿಕೊಂಡು ಹಿಂದೂ-ಮುಸ್ಲಿಂ ನಡುವೆ ದ್ವೇಷವನ್ನು ಪ್ರಚೋದಿಸಿತು. ಇಲ್ಲಿ ಕೊಲೆ ಮಾಡಿದ್ದು, ಓರ್ವ ವ್ಯಕ್ತಿಯೇ ಹೊರತು, ಸಮುದಾಯ ಅಲ್ಲ. ಆದರೆ, ಇಡೀ ಸಮುದಾಯವನ್ನು ಬಿಜೆಪಿ ಕಟಕಟೆಗೆ ನಿಲ್ಲಿಸಿತು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಅದೇ ಹುಬ್ಬಳ್ಳಿಯಲ್ಲಿ ಪ್ರೀತಿಯ ವಿಚಾರಕ್ಕೆ ಅಂಜಲಿ ಎಂಬ ಯುವತಿಯನ್ನು ಗಿರೀಶ್ ಎಂಬಾತ ಹತ್ಯೆಗೈದ ದುರ್ಘಟನೆ ನಡೆಯಿತು. ಆದರೆ, ಈ ಘಟನೆಯನ್ನು ಬಿಜೆಪಿ ಖಂಡಿಸಲಿಲ್ಲ. ಪ್ರತಿಭಟನೆ ಮಾಡಲಿಲ್ಲ. ಅಷ್ಟೇಯಾಕೆ, ತುಟಿಬಿಚ್ಚಿ ಒಂದೇ ಒಂದು ಮಾತನ್ನೂ ಆಡಲಿಲ್ಲ.

ನಾವು ಬಿಜೆಪಿಯ ರಾಜಕೀಯವನ್ನು ‘ಕಾಮನ್‌ಸೆನ್ಸಲ್ ರಾಜಕೀಯ’ ಎಂದು ಉಲ್ಲೇಖಿಸಬಹುದು. ಅವರು ಯಾವಾಗಲೂ ವಿವಾದಾತ್ಮಕ ವಿಷಯಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಪ್ರಚಾರ ಮಾಡುತ್ತಾರೆ. ಜನರ ಸಹಾನುಭೂತಿ ಪಡೆಯಲು ಮತ್ತು ಅಂತಿಮವಾಗಿ ಮತಗಳನ್ನು ಪಡೆಯಲು ಮೀಸಲಾತಿ, ರಾಮ ಮಂದಿರ, ಹಿಂದೂ-ಮುಸ್ಲಿಂ ಸಂಘರ್ಷ, ಚೀನಾ-ಪಾಕಿಸ್ತಾನ ಇತ್ಯಾದಿಗಳ ಕುರಿತಾದ ‘ಚರ್ಚೆ’ಗಳನ್ನು ಮುನ್ನೆಲೆಗೆ ತರುತ್ತಾರೆ. ಈ ತಂತ್ರವು ಜನರು ಬಿಜೆಪಿಯತ್ತ ಆಕರ್ಷಿತರಾಗುವುದನ್ನು ಖಾತ್ರಿಗೊಳಿಸುತ್ತದೆ. ಇತರ ಪಕ್ಷಗಳು ಈ ವಿವಾದಾತ್ಮಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಹೊಂದಿದ್ದರೂ, ಅವುಗಳ ಬಗೆಗಿನ ಮುಕ್ತ ಚರ್ಚೆಯಿಂದ ದೂರ ಸರಿಯುತ್ತವೆ. ಈ ವಿಷಯದಲ್ಲಿ ಬಿಜೆಪಿ ಬಹಳ ಬುದ್ದಿವಂತಿಕೆಯಿಂದ ಜನರನ್ನು ಸೆಳೆಯುತ್ತಿದೆ.

ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ವಿಪಕ್ಷಗಳ ಮಹಾಘಟಬಂಧನ್ 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಇದನ್ನು ಅರಿತುಕೊಂಡ ಬಿಜೆಪಿ 2ನೇ ಹಂತದ ಮತದಾನದ ವೇಳೆಗೆ ತನ್ನ ಕಾರ್ಯತಂತ್ರವನ್ನು ಬದಲಾಯಿಸಿತು. ‘ಜಂಗಲ್ ರಾಜ್’ ಎಂಬ ಪದವನ್ನು ಪದೇಪದೆ ತನ್ನ ಭಾಷಣಗಳಲ್ಲಿ ಉಲ್ಲೇಖಿಸುತ್ತಲೇ ಜನರ ತಲೆಗೆ ಆ ಪದವನ್ನು ತುಂಬಿತು. ಬಿಜೆಪಿ ನಾಯಕರು ರಾಷ್ಟ್ರೀಯ ಜನತಾದಳದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ತೇಜಶ್ವಿ ಯಾದವ್ ಅವರನ್ನು ‘ಜಂಗಲ್ ರಾಜ್ ಕಾ ಯುವರಾಜ್’ ಎಂದು ಕರೆದರು. ಎರಡನೇ ಮತ್ತು ಮೂರನೇ ಹಂತಗಳಲ್ಲಿ ಬಿಜೆಪಿ ಕ್ರಮವಾಗಿ 52 ಮತ್ತು 53 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಲು ಇದು ಸಹಾಯ ಮಾಡಿತು.

ಕರ್ನಾಟಕದಲ್ಲಿ ಉರಿಗೌಡ, ನಂಜೇಗೌಡ ಎಂಬ ವ್ಯಕ್ತಿಗಳಿಬ್ಬರು ಟಿಪ್ಪು ಸಂಸ್ಥಾನದಲ್ಲಿದ್ದರು. ಅವರೇ ಟಿಪ್ಪುವನ್ನು ಕೊಲೆ ಮಾಡಿದರು ಎಂದು ಹಸಿ, ಹಸಿ ಸುಳ್ಳುಗಳನ್ನು ಹುಟ್ಟುಹಾಕಿತು. ಅಬ್ಬರದ ಪ್ರಚಾರ ನಡೆಸಿ ಒಕ್ಕಲಿಗ ಮತದಾರರನ್ನು ಸೆಳೆಯಲು ಭಾರೀ ಕಸರತ್ತು ನಡೆಸಿತು. ಆದರೆ, ಅದೃಷ್ಟವಶಾತ್, ಬಿಜೆಪಿಯ ಸುಳ್ಳು ಬಟಾಬಯಲಾಗಿ, ಬಿಜೆಪಿ ಮೌನವಾಗಿ ಹಿಂದೆ ಸರಿಯಿತು. ಅಲ್ಲದೆ, ಬೆಂಗಳೂರಿನ ಕೃಷ್ಣಾ ಟೆಲಿಕಾಂ ಎಂಬ ಮೊಬೈಲ್ ಶಾಪ್‍ವೊಂದರಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಅಂಗಡಿ ಯುವಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆಂದು ಪ್ರಕರಣವೊಂದನ್ನು ತಿರುಸಿತು. ಆ ಘಟನೆ ನಡೆದ ಕೆಲ ಗಂಟೆಗಳಲ್ಲಿಯೇ ಬಿಜೆಪಿಯ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಸ್ಥಳದಲ್ಲಿದ್ದರು. ಕರಾವಳಿಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಬಿಜೆಪಿ ತನ್ನ ರಾಜಕೀಯಕ್ಕೆ ಬಳಸಿಕೊಂಡಿತು. ಹೀಗೆ ಬಿಜೆಪಿ ನಡೆಸಿದ ಕೋಮು ರಾಜಕಾರಣದ ಬಗ್ಗೆ ಪಟ್ಟಿ ಮಾಡುತ್ತಾ ಹೋದರೇ ಅದಿಕ್ಕೆ ದಿನ ಸಾಲೋದಿಲ್ಲ.

ಮಾಧ್ಯಮ ಬಳಕೆಯಲ್ಲಿ ಯಶಸ್ವಿಯಾದ ಬಿಜೆಪಿ

ಇನ್ನು, ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಮತಗಳನ್ನು ಗಳಿಸುವಂತೆ ಮಾಡುವಲ್ಲಿ ಬಿಜೆಪಿ ಸೋಷಿಯಲ್ ಮೀಡಿಯಾ ತಂಡ ಭಾರೀ ಕಾರ್ಯಪ್ರವೃತ್ತವಾಗಿರುತ್ತದೆ. ಸೋಷಿಯಲ್ ಮೀಡಿಯಾ ಬಳಕೆ ಮತ್ತು ಪ್ರಭಾವದಲ್ಲಿ ಪಕ್ಷವು ಯಾವಾಗಲೂ ಕಾಂಗ್ರೆಸ್‌ಗಿಂತಲೂ ಬಹಳ ಮುಂದಿದೆ. ಉದಾಹರಣೆಗೆ, ಫೆಬ್ರವರಿ 1998ರಲ್ಲಿ ಬಿಜೆಪಿ ತನ್ನ ಪಕ್ಷದ ವೆಬ್‌ಸೈಟ್ ಅನ್ನು ಸ್ಥಾಪಿಸಿತ್ತು. ಆದ,ರೆ ಕಾಂಗ್ರೆಸ್ ತನ್ನ ಮೊದಲ ಅಧಿಕೃತ ವೆಬ್‌ಸೈಟ್ ಅನ್ನು ಏಳು ವರ್ಷಗಳ ನಂತರ, ಅಂದರೆ 2005ರ ಫೆಬ್ರವರಿಯಲ್ಲಿ ಉದ್ಘಾಟಿಸಿತು.

ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರ ಪಕ್ಷವು ಆನ್‌ಲೈನ್ ಅಭಿಯಾನದೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಪತ್ರಕರ್ತ ಸ್ವಾತಿ ಚತುರ್ವೇದಿ, ಅರವಿಂದ್ ಗುಪ್ತಾ ಅವರ ಪುಸ್ತಕ “ಐ ಆಮ್‌ ಎ ಟ್ರೋಲ್‌”ನಲ್ಲಿ ಮೋದಿಗೆ ಸಾಮಾಜಿಕ ಮಾಧ್ಯಮವು ಉತ್ಸಾಹ ಮಾತ್ರವಲ್ಲ, ಅವಶ್ಯಕತೆಯೂ ಆಗಿದೆ ಎಂದು ಹೇಳಿದ್ದಾರೆ.

ಬಿಹಾರ ಚುನಾವಣೆಯ ಸಮಯದಲ್ಲಿ, ಬಿಜೆಪಿ ‘ಒಂದು ಲಕ್ಷಕ್ಕೂ ಹೆಚ್ಚು’ ವಾಟ್ಸಾಪ್ ಗುಂಪುಗಳನ್ನು ರಚಿಸಿತ್ತು ಎಂದು ಹೇಳಿಕೊಂಡಿದೆ. ಫೇಸ್‌ಬುಕ್ ಮತ್ತು ಗೂಗಲ್‌ನಲ್ಲಿ ನೀಡಲಾದ ಜಾಹೀರಾತುಗಳ ಮೂಲಕ ತನ್ನ ಆಲೋಚನೆಗಳನ್ನು ಹರಡಿದೆ. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಪಶ್ಚಿಮ ಬಂಗಾಳದ ಮೂರು ಕೋಟಿ ಜನರನ್ನು ತಲುಪಲು ಪಕ್ಷವು 50,000ಕ್ಕೂ ಹೆಚ್ಚು ವಾಟ್ಸಾಪ್ ಗುಂಪುಗಳನ್ನು ರಚಿಸಿತ್ತು. 2024ರ ಚುನಾವಣೆಯಲ್ಲಿಯೂ ಈ ವಾಟ್ಸಾಪ್ ಗುಂಪುಗಳ ಬಳಕೆ ಹೆಚ್ಚಾಗಿಯೇ ನಡೆದಿತ್ತು.

ಜನರನ್ನು ತಲುಪಲು ಬಿಜೆಪಿಗರು ಶಕ್ತಿ ಮತ್ತು ಹಣವನ್ನು ಹೂಡಿಕೆ ಮಾಡುತ್ತಾರೆ. ಸಾರ್ವಜನಿಕರು ಮತ್ತು ಆಡಳಿತ ಪಕ್ಷದ ನಡುವೆ ಸಂವಹನಕ್ಕೆ ಏಕಮುಖ ಮಾರ್ಗವನ್ನು ಅವರು ಕಟ್ಟಿಕೊಂಡಿದ್ದಾರೆ. ಬಿಜೆಪಿ ನಾಯಕರ ಭಾವೋದ್ರಿಕ್ತ ವಾಕ್ಚಾತುರ್ಯದಿಂದ ಸಾರ್ವಜನಿಕರು ಬಿಜೆಪಿಯತ್ತ ವಾಲುತ್ತಿದ್ದಾರೆ. ಆದರೆ, ತಮ್ಮದೇ ಆದ ಕುಂದುಕೊರತೆಗಳನ್ನು ಸಾರ್ವಜನಿಕರು ಕೇಳುತ್ತಿಲ್ಲ. ಪ್ರಶ್ನಿಸುವುದೂ ಇಲ್ಲ. ಇದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಈರುಳ್ಳಿಯ ಬೆಲೆಗಳು ಹೆಚ್ಚಾಗುವುದರಿಂದ ಆಕೆಗೆ ಯಾವುದೇ ತೊಂದರೆಯಾಗಿಲ್ಲ, ಏಕೆಂದರೆ ತರಕಾರಿ ತನ್ನ ಆಹಾರದ ಭಾಗವಾಗಿಲ್ಲ.

ಬಿಜೆಪಿಯ ಆದ್ಯತೆಯೆಂದರೆ, ಅವರು ಆಳುವ ಜನರು ಬಯಸುತ್ತಾರೋ ಇಲ್ಲವೋ, ಆದರೆ ತನ್ನದೇ ಆದ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ತಳ್ಳುವುದು. ಸಂಸತ್ತಿನಲ್ಲಿ ಮಸೂದೆಗಳನ್ನು ಆಕ್ರಮಣಕಾರಿಯಾಗಿ ಅಂಗೀಕರಿಸುವುದು ಈ ಮನಸ್ಥಿತಿಗೆ ಸಾಕ್ಷಿಯಾಗಿದೆ. ವಾಸ್ತವವಾಗಿ, ‘ಲವ್ ಜಿಹಾದ್’ ವಿರುದ್ಧದ ಇತ್ತೀಚಿನ ಕಾನೂನುಗಳು ಸಾಮಾಜಿಕ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನಕ್ಕಿಂತ ‘ಹಿಂದೂ ಖತ್ರೇ ಮಿ ಹೈ’ ಎಂಬ ಪುರಾಣವನ್ನು ಶಾಶ್ವತಗೊಳಿಸುವ ಸ್ಪಷ್ಟ ಪ್ರಯತ್ನವಾಗಿದೆ.

ಅಂತರ್ ಧರ್ಮ ವಿವಾಹಗಳು ಭಾರತೀಯ ಸಮಾಜಕ್ಕೆ ಸಮಸ್ಯೆಯಲ್ಲ. ನಿಜವಾದ ಸಮಸ್ಯೆ ಲೈಂಗಿಕ ದೌರ್ಜನ್ಯ. ಆದರೂ, ಬಿಜೆಪಿ ಅಂತರ್‌ಧರ್ಮೀಯ ವಿವಾಹಗಳನ್ನು ತಡೆಯುವ ಗುರಿಯನ್ನು ಹೊಂದಿದೆಯೇ ಹೊರತು ಲೈಂಗಿಕ ದೌರ್ಜನ್ಯಗಳನ್ನು ತಡೆಯುವ ಗುರಿಯಿಲ್ಲ.

ಹೆಚ್ಚುವರಿಯಾಗಿ, ಪೌರತ್ವ ತಿದ್ದುಪಡಿ ಕಾಯ್ದೆ-2019 ರ ಅಂಗೀಕಾರ ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಬಿಜೆಪಿ ಸ್ಪಷ್ಟ ಕೋಮು ವಾಕ್ಚಾತುರ್ಯದಿಂದ ಆಡಳಿತಾತ್ಮಕ ದೃಷ್ಟಿಕೋನದ ಜೊತೆಗೆ ಮೋದಿ ಸರ್ಕಾರದ ಈ ಕ್ರಮಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ಅಲ್ಲದೆ, ನಿಜಕ್ಕೂ, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಗಳನ್ನು ಬೆದರಿಕೆ-ಭಯದ ವಾತಾವರಣವನ್ನು ಹೇರುವ ಮತ್ತು ಉಳಿಸಿಕೊಳ್ಳುವ ನಿರಂತರ ಪ್ರಯತ್ನಗಳ ಜೊತೆಗೆ ದೊಡ್ಡ ಸಾರ್ವಜನಿಕರನ್ನು ಅಧೀನವಾಗಿಡಲು ಬಿಜೆಪಿಯು ಬಯಸುತ್ತಿದೆ.

ಭಾರತೀಯ ಸುದ್ದಿ ವಾಹಿನಿಗಳು ಬಿಜೆಪಿಯ ಕೋಮು ದ್ವೇಷದ ಪ್ರಚಾರವನ್ನು ನ್ಯಾಯಸಮ್ಮತಗೊಳಿಸಲು ನೆರವು ನೀಡುತ್ತಿವೆ. ದೇಶಾದ್ಯಂತ ಜನರು ಈ ಚಾನೆಲ್‌ಗಳಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ. ಮಾಧ್ಯಮಗಳ ಪಾತ್ರದಿಂದಾಗಿ ಭಾರತದಲ್ಲಿ ಮೋದಿ, ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್, ಬ್ರೆಜಿಲ್‌ನ ಜೈರ್ ಬೋಲ್ಸನಾರೊ ಮತ್ತು ಇತರ ಪ್ರಬಲರು ಒಂದೇ ರೀತಿಯಲ್ಲಿ ಚುನಾವಣೆಯನ್ನು ಗೆಲ್ಲುತ್ತಿದ್ದಾರೆ. ಅದಾಗ್ಯೂ, ಅಮೆರಿಕದಲ್ಲಿ ಇಡೀ ಮಾಧ್ಯಮವನ್ನು ಒಬ್ಬ ವ್ಯಕ್ತಿಯಿಂದ ನಿಯಂತ್ರಿಸಲಾಗುವುದಿಲ್ಲ. ಆದರೆ, ಭಾರತದಲ್ಲಿ ಮಾಧ್ಯಮಗಳು ಸುಳ್ಳನ್ನು ಎಗ್ಗಿಲ್ಲದೆ ಪ್ರಚಾರ ಮಾಡುವುದನ್ನು ನಾವು ನೋಡಬಹುದು.

ಇನ್ನು, ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಬಿಜೆಪಿಯ ಮತ್ತೊಂದು ಪ್ರಮುಖ ಅಸ್ತ್ರ ಎಂದರೆ, ಇನ್ನೇನು ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ ಎನ್ನುವಷ್ಟರಲ್ಲಿ ಕಾಮಗಾರಿ ಪೂರ್ಣಗೊಳ್ಳದ ರಸ್ತೆ ಉದ್ಘಾಟನೆ ಮಾಡುವುದು, ವಿಮಾನ ಹಾರಾಟ ಮಾಡಲು ಸಜ್ಜಾಗದ ವಿಮಾನ ನಿಲ್ದಾಣವನ್ನು ಉದ್ಘಾಟಿಸುವುದು, ಅರ್ಧಂಬರ್ಧ ಕಾಮಗಾರಿ ನಡೆದಿದ್ದ ರಾಮಮಂದಿರಕ್ಕೆ ಪ್ರಾಣಪ್ರತಿಷ್ಠ ಮಾಡುವುದು ಮೋದಿ ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಆದರೆ, ಅವು ಕೇವಲ ಚುನಾವಣೆಗೆ ಸೀಮಿತವಾಗಿವೇ ಹೊರತು, ಜನರ ಅನುಕೂಕ್ಕಾಗಿ ಅಲ್ಲ ಎಂಬುದು, ಉದ್ಘಾಟನೆಯಾದ ರಸ್ತೆ ಬಿರುಕು ಬಿಟ್ಟಾಗ, ವಿಮಾನ ನಿಲ್ದಾಣದಲ್ಲಿ ಮಳೆ ಸೋರಿದಾಗ, ರಾಮಮಂದಿರದಲ್ಲಿ ಮಳೆ ನೀರು ಸೋರಿ ಬಿದ್ದಾಗ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಇನ್ನು ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ನಡೆಸಿದ ಸಮೀಕ್ಷೆಯನ್ನು ನೋಡುವುದಾದರೇ, 2014 ರಿಂದ 2024ರವರೆಗೆ ನಡೆದ ಸಮೀಪಕ್ಷಗಳ ಡೇಟಾವನ್ನು ಸಿಎಸ್‌ಡಿಎಸ್‌ ನೀಡಿದೆ. ಸಮೀಕ್ಷೆಯ ಪ್ರಕಾರ 56% ಜನರು ತಮ್ಮ ಸ್ವತಂತ್ರವಾಗಿ ತಾವು ಯಾರಿಗೆ ಮತ ಹಾಕಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಅದಾಗ್ಯೂ, ಕೇವಲ 7.5% ಮತದಾರರ ಮೇಲೆ ಮಾತ್ರವೇ ರಾಮಮಂದಿರ ನಿರ್ಮಾಣ ಚುನಾವಣಾ ವಿಷಯವಾಗಿ ಪ್ರಭಾವ ಬೀರಿದೆ ಎಂದು ಸಮೀಕ್ಷೆ ಹೇಳುತ್ತದೆ.

ಈ ಸಮೀಕ್ಷೆಯ ಹೊರತಾಗಿಯೂ, ಬಿಜೆಪಿ ತನ್ನ ನಿರೂಪಣೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡಿದೆ. 370ನೇ ವಿಧಿಯ ರದ್ದತಿಯಿಂದ ಹಿಡಿದು ರಾಮ ಮಂದಿರದ ಉದ್ಘಾಟನೆಯವರೆಗೆ ನಾನಾ ರೀತಿಯಲ್ಲಿ ಸೈದ್ಧಾಂತಿಕವಾಗಿ ಬಿಜೆಪಿ ಜನರ ಮನಸ್ಸಿನಲ್ಲಿ ತನ್ನ ಅಜೆಂಡಾವನ್ನು ಬಿತ್ತುವಲ್ಲಿ ಕೆಲಸ ಮಾಡಿದೆ. ಹೀಗಾಗಿಯೇ, ಸಿಎಸ್‌ಡಿಎಸ್‌ ಸಮೀಕ್ಷೆಯಲ್ಲಿ 22.4% ಮತದಾರರು ರಾಮಮಂದಿರದ ನಿರ್ಮಾಣವು ಕೇಂದ್ರ ಸರ್ಕಾರದ ಅತ್ಯಂತ ಮೆಚ್ಚುಗೆಯ ಕೆಲಸ ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಂದಾಣಿಕೆ ರಾಜಕಾರಣ ಮತ್ತು ಪಾದಯಾತ್ರೆ ಪಾಲಿಟಿಕ್ಸ್

ಇದೆಲ್ಲವೂ, ಜನರ ಮನಸ್ಸಿನ ದುರ್ಬಲತೆಯನ್ನು ಬಿಜೆಪಿ ಬೇಟೆಯಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ. ಜನರ ಅಗತ್ಯಗಳು, ಆರ್ಥಿಕ ಅಸ್ಥಿರತೆಯ ಹೊರತಾಗಿಯೂ, ಭಾವನಾತ್ಮಕ ವಿಚಾರಗಳ ಮೂಲಕ ಮತದಾರರು ಬಿಜೆಪಿ ಸೆಳೆಯುವಲ್ಲಿ ನಿರಂತರವಾಗಿ ಯಶಸ್ಸು ಕಾಣುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಸ್ಥಾನಗಳನ್ನು ಗೆದ್ದರೂ, ಒಡಿಶಾದಲ್ಲಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಿದೆ. ಅದಾಗ್ಯೂ, ಬಿಜೆಪಿ ಚುನಾವಣೆಯಲ್ಲಿ ಗೆಲ್ಲುವ ಪಕ್ಷವಾಗಿದೆಯೇ ಹೊರತು, ದೇಶವನ್ನು ಉತ್ತಮವಾಗಿ ಮುನ್ನಡೆಸುವ ಪಕ್ಷವಾಗಿಲ್ಲ. ಅದರಲ್ಲಿಯೂ, ಮಿತ್ರಪಕ್ಷಗಳೊಂದಿಗೆ ಸರ್ಕಾರವನ್ನು ಸರಿದೂಗಿಸಿಕೊಂಡು ಹೋಗುವುದು ಬಿಜೆಪಿಗೆ ಅಭ್ಯಾಸವೇ ಇಲ್ಲ. ಅಂತಹ ಉದಾಹರಣೆಗಳೂ ಇಲ್ಲ.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X