ಪ್ರಧಾನಿ ಮೋದಿ ಅವರಿಗೆ ಡಬಲ್ ಡೆಕ್ಕರ್, ಮೆಟ್ರೋ ನಿಲ್ದಾಣಗಳಿಗೆ ಪ್ರತಿಷ್ಠಿತ ಕಂಪೆನಿಗಳ ಹೆಸರಿಡಲು ನಿಧಿ ಸಂಗ್ರಹ, ಸಿಎಸ್‌ಆರ್ ಯೋಜನೆಗಳ ಬಗ್ಗೆ ವಿವರಿಸಿದಾಗ ʼವೆರಿಗುಡ್ ಡಿ.ಕೆ., ಒಳ್ಳೆ ಕೆಲಸ ಮಾಡುತ್ತಿದ್ದೀರಾʼ ಎಂದು ಹೊಗಳಿದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ಬಳಿ ಸೋಮವಾರ ಮಾಧ್ಯಮ ಪ್ರತಿನಿಧಿಗಳು, ‘ಮೋದಿಯವರ ಜೊತೆ ನೀವು ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿವೆಯಲ್ಲ’ ಎಂದು ಕೇಳಿದಾಗ, “ಬೆಂಗಳೂರು ಅಭಿವೃದ್ದಿ ಸಚಿವನಾಗಿ ನಾನು ಅವರ ಬಳಿ ಮಾತನಾಡದೆ ಇನ್ಯಾರು ಮಾತನಾಡಲು ಸಾಧ್ಯ? ಎಲೆಕ್ಟ್ರಾನಿಕ್ ಸಿಟಿ ಭಾಗದ ಮೆಟ್ರೋ ನಿಲ್ದಾಣಗಳಿಗೆ ಇನ್ಫೋಸಿಸ್, ಡೆಲ್ಟಾ, ಬಯೋಕಾನ್ ಅವರ ಹೆಸರನ್ನು ಇಡಲು ಅವರಿಂದ 50, 100 ಕೋಟಿ ನಿಧಿ ಸಂಗ್ರಹಿಸಲಾಗಿದೆ. ಈಗ ಬಾಗಮನೆ ಅವರು ಸಹ ನಿಧಿ ನೀಡುತ್ತೇವೆ ಎಂದಿದ್ದಾರೆ. ಇದೆಲ್ಲವನ್ನು ಪ್ರಧಾನಿ ಅವರಿಗೆ ತಿಳಿಸಿದೆ” ಎಂದು ಹೇಳಿದರು.
ನಾನೇನು ಬಿಜೆಪಿಗೆ ಓಡಿಹೋಗುತ್ತಿಲ್ಲ
“ನಾನೇನು ಬಿಜೆಪಿಗೆ ಓಡಿ ಹೋಗುತ್ತಿಲ್ಲ, ನನಗೆ ಅದರ ಅವಶ್ಯಕತೆಯೂ ಇಲ್ಲ. ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮಾಧ್ಯಮದವರು ನಿಧಿ ನೀಡಿದರೆ ನಿಮ್ಮ ಹೆಸರಿನಲ್ಲಿಯೂ ಮೆಟ್ರೋ ನಿಲ್ದಾಣಗಳ ನಾಮಕರಣ ಮಾಡಲಾಗುವುದು. ಈ ಯೋಜನೆ ಬೇರೆ ಎಲ್ಲಿಯೂ ಇಲ್ಲ. ಈ ಮಾದರಿಯನ್ನು ಬೆಂಗಳೂರಿನಲ್ಲಿ ಪ್ರಾರಂಭ ಮಾಡಿದ್ದೇವೆ” ಎಂದು ಹೇಳಿದರು.
“ನಾನು ಬೆಂಗಳೂರು ಅಭಿವೃದ್ದಿ ಸಚಿವ. ಮೆಟ್ರೋ ಕೂಡ ನನ್ನ ವ್ಯಾಪ್ತಿಗೆ ಬರುತ್ತದೆ. ಹೀಗಿದ್ದಾಗ ನಾನು ಏನು ಕೆಲಸ ಮಾಡಬೇಕೋ ಅದನ್ನು ಮಾಡಿದ್ದೇನೆ. ಅವರನ್ನು ನಾನು ಸ್ವಾಗತಿಸಬೇಕಿತ್ತು. ಆದರೆ ಒಂದೇ ಕಾರ್ಯಕ್ರಮವಾಗಿ ಮೊಟಕು ಮಾಡಿದ ಕಾರಣಕ್ಕೆ ಸೋಮಣ್ಣ ಅವರಿಗೆ ಆ ಅವಕಾಶ ನೀಡಲಾಯಿತು. ಅವರೂ ಸಹ ನಮ್ಮ ರಾಜ್ಯದವರು. ಆದರೆ ನಾವು ನಮ್ಮ ರಾಜ್ಯದ ಬಗ್ಗೆ ಅವಕಾಶ ಸಿಕ್ಕಾಗ ಪ್ರಧಾನಿ ಅವರ ಬಳಿ ಹೇಳಬೇಕಲ್ಲವೇ? ಈ ಕಾರಣಕ್ಕೆ ನಾನು ಅವರಿಗೆ ಮನವಿ ನೀಡಿ ಅನುದಾನದ ಬಗ್ಗೆ ಮಾತನಾಡಿದ್ದೇನೆ.” ಎಂದು ತಿಳಿಸಿದರು.
ಚುನಾವಣೆ ಆಯೋಗದ ನೋಟಿಸ್‌ಗೆಲ್ಲ ಹೆದರಲ್ಲ
“ಚುನಾವಣೆಗಳಲ್ಲಿ ಏನು ತಪ್ಪಾಗಿದೆ ಎಂದು ರಾಜಕೀಯ ನಾಯಕರಾದ ನಾವುಗಳು ಚುನಾವಣಾ ಆಯೋಗಕ್ಕೆ ತಿಳಿಸಿದ್ದೇವೆ. ಅವರೇ ಈ ತಪ್ಪುಗಳನ್ನು ಬಗೆಹರಿಸಬೇಕು ಹಾಗೂ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಈ ಕೆಲಸ ಮಾಡುವುದು ನಾವಲ್ಲ. ಅವರು ನೀಡಿರುವ ನೋಟಿಸ್ ಗೆಲ್ಲ ನಾವು ಹೆದರುವುದಿಲ್ಲ” ಎಂದು ಹೇಳಿದರು.
ಮತಗಳ್ಳತನ ವಿಚಾರವಾಗಿ ಆಯೋಗವು ರಾಹುಲ್ ಗಾಂಧಿ ಅವರಿಗೆ ನೋಟೀಸ್ ನೀಡಿರುವ ವಿಚಾರವಾಗಿ ಕೇಳಿದಾಗ “ನಾವು ತಪ್ಪು ಹೇಳಿದ್ದರೆ ನಮ್ಮ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಲಿ. ಚುನಾವಣಾ ಪ್ರಕ್ರಿಯೆಯಲ್ಲಿ ಏನೇನು ತಪ್ಪು ನಡೆದಿದೆ ಎಂದು ನಾವು ತಿಳಿಸಿದ್ದೇವೆ. ಇನ್ನೊಂದು ದೊಡ್ಡ ಅವಕಾಶ ನನಗಿದೆ. ಆದರೆ ಆ ವಿಚಾರವನ್ನು ನಾನು ಈಗ ಬಹಿರಂಗಪಡಿಸುವುದಿಲ್ಲ. ದಾಖಲೆಗಳನ್ನು ಪಡೆಯುವ ಜವಾಬ್ದಾರಿ ಅವರದ್ದು. ನಾವು ತಪ್ಪು ನಡೆದಿದೆ ಎಂದು ತಿಳಿಸಿದ್ದೇವೆ. ನಾವೇನು ಶಾಲಾಮಕ್ಕಳಲ್ಲ” ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಇಡೀ ದೇಶಕ್ಕೆ ಎಲ್ಲಾ ಮಾಹಿತಿ ನೀಡಿದ್ದಾರೆ. ನಾವು ಕರ್ನಾಟಕದ ಚುನಾವಣಾ ಆಯೋಗದ ಆಯುಕ್ತರನ್ನು ಭೇಟಿ ಮಾಡಿದ ವೇಳೆಯಲ್ಲಿ ಅವರು ರಾಹುಲ್ ಗಾಂಧಿ ಅವರು ಮಾಡಿದ ಆರೋಪಗಳ ಮೇಲೆ ತನಿಖೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ನಾವು ಸಹ ಒಂದಷ್ಟು ಮಾಹಿತಿಗಳನ್ನು ಕೇಳಿದ್ದೇವೆ” ಎಂದು ತಿಳಿಸಿದರು.
“ರಾಹುಲ್ ಗಾಂಧಿ ಅವರು ದೇಶದ ಪ್ರಜಾಪ್ರಭುತ್ವ ಉಳಿಸಲು, ಎಲ್ಲರಿಗೂ ನ್ಯಾಯ ದೊರಕಿಸಿಕೊಡಲು ಹೋರಾಟ ಮಾಡುತ್ತಿದ್ದಾರೆ. ಒಂದು ಮತವೂ ಸಹ ದುರುಪಯೋಗವಾಗಬಾರದು ಜೊತೆಗೆ ಯಾವುದೇ ರಾಜಕೀಯ ಪಕ್ಷಗಳು ಅಕ್ರಮ ಮಾಡಿಕೊಳ್ಳಬಾರದು ಎಂದು ಈ ಹೋರಾಟ ಮಾಡಿದ್ದಾರೆ” ಎಂದರು.
