ಭಾರತದ ಭವಿಷ್ಯದ ವೈದ್ಯರ ಆಯ್ಕೆಯನ್ನು ನಿಯಂತ್ರಿಸುವ ಮೂಲಕ ಮೋದಿ ಆಡಳಿತವು ತನ್ನ ಬಲಪಂಥೀಯ ಹಿಂದು ಅಜೆಂಡಾವನ್ನು ರಾಷ್ಟ್ರದ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲೆ ಹೇರುತ್ತಿದೆ
ರೈಲು ಅಪಘಾತಗಳು ಮತ್ತು ರೈಲುಗಳಲ್ಲಿನ ಜನದಟ್ಟಣೆಯನ್ನು ರೈಲ್ವೇ ಸಚಿವರು ತಡೆಯಲಾಗುತ್ತಿಲ್ಲ. ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಹಗರಣಗಳನ್ನು ಶಿಕ್ಷಣ ಸಚಿವರು ತಡೆಯುತ್ತಿಲ್ಲ. ಭಯೋತ್ಪಾದಕ ದಾಳಿ ಮತ್ತು ಮಣಿಪುರ ಹಿಂಸಾಚಾರ ತಡೆಯಲು ಗೃಹ ಸಚಿವರಿಂದ ಸಾಧ್ಯವಾಗಲಿಲ್ಲ – ಇದು ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರ ಟ್ವೀಟ್.
ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮೊನ್ನೆಯಷ್ಟೇ ಪಶ್ಚಿಮ ಬಂಗಾಳದಲ್ಲಿ ಕಾಂಚನ್‌ಜುಂಗಾ ರೈಲು ಅಪಘಾತವಾಗಿ ಹತ್ತಾರು ಜನರು ಸಾವನ್ನಪ್ಪಿದ್ದಾರೆ. ಮಣಿಪುರದಲ್ಲಿ ಈಗಲೂ ಹಿಂಸಾಚಾರ ನಡೆಯುತ್ತಲೇ ಇದೆ. ಆದರೂ, ಕೇಂದ್ರ ಸರ್ಕಾರದ ಯಾವುದೇ ಸಚಿವರು ಈ ಘಟನೆಗಳ ಬಗ್ಗೆ ಮಾತನಾಡುತ್ತಿಲ್ಲ. ಒಂದು ವರ್ಷದಿಂದ ಜನಾಂಗೀಯ ದ್ವೇಷ ದಳ್ಳುರಿಯಲ್ಲಿ ಬೇಯುತ್ತಿರುವ ಮಣಿಪುರ ಸ್ವತಃ ಪ್ರಧಾನಿ ಮೋದಿ ಕೂಡ ಭೇಟಿ ನೀಡಿಲ್ಲ. ಇತರ ಗಂಭೀರ ಘಟನೆಗಳ ಬಗ್ಗೆಯೂ ಮೋದಿ ಮಾತನಾಡುತ್ತಿಲ್ಲ. ಇದೆಲ್ಲವೂ, ಮೋದಿ ನೇತೃತ್ವದಲ್ಲಿ ಭಾರತ ಎತ್ತ ಸಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಇದನ್ನೇ ಧ್ರುವ್ ರಾಠಿ ಮೂರು ಸಾಲುಗಳಲ್ಲಿ ಚಿಕ್ಕದಾಗಿ ಹೇಳಿದ್ದಾರೆ.
Railway Minister can’t stop rail accidents and overcrowding in trains
Education Minister can’t stop paper leaks and exam scams
Home Minister can’t stop terrorist attacks and Manipur violence
— Dhruv Rathee (@dhruv_rathee) June 18, 2024
ಈಗ, ನೀಟ್ ಅಕ್ರಮ ವ್ಯಾಪಕ ಚರ್ಚೆಯಲ್ಲಿದೆ. ಭಾರತದ ಭವಿಷ್ಯಕ್ಕೆ ನೀಟ್ ಕೊಳ್ಳಿ ಇಡುತ್ತಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರ ನಡೆಸುವ ಭಾರತೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಗ್ರೇಸ್ ಅಂಕಗಳನ್ನು ನೀಡಿರುವ ಒಳಗೊಂಡಿರುವ ಹಗರಣವು ಆಡಳಿತ ವ್ಯವಸ್ಥೆಯ ಗಂಭೀರ ದೋಷವನ್ನು ಬಹಿರಂಗಪಡಿಸಿದೆ. ರಾಷ್ಟ್ರದ ಭವಿಷ್ಯದ ವೈದ್ಯರ ಆಯ್ಕೆಯನ್ನು ನಿಯಂತ್ರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವು ತನ್ನ ಬಲಪಂಥೀಯ ಹಿಂದು ಅಜೆಂಡಾವನ್ನು ರಾಷ್ಟ್ರದ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲೆ ಹೇರುತ್ತಿದೆ ಎಂಬುದನ್ನು ಬಟಾಬಯಲು ಮಾಡಿದೆ.
ಮೇ ತಿಂಗಳಲ್ಲಿ ರಾಷ್ಟ್ರಾದ್ಯಂತ ನಡೆದ ನೀಟ್ ಪರೀಕ್ಷೆಯಲ್ಲಿ ದೇಶದ ವೈದ್ಯಕೀಯ ಕಾಲೇಜುಗಳಲ್ಲಿ 1,00,000 ಸೀಟುಗಳಿಗಾಗಿ 24 ಲಕ್ಷ ಆಕಾಂಕ್ಷಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೂನ್ 4ರಂದು ಲೋಕಸಭಾ ಚುನಾವಣಾ ಫಲಿತಾಂಶದ ದಿನವೇ ಪ್ರಕಟಕವಾದ ನೀಟ್ ಫಲಿತಾಂಶ ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಘಾತ ಉಂಟುಮಾಡಿತ್ತು. ಬರೋಬ್ಬರಿ 67 ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಗಳಿಸಿದ್ದರು. ಅವರಲ್ಲಿ ಹೆಚ್ಚಿನವರು ಒಂದೇ ಕೇಂದ್ರದಲ್ಲಿ ಪರೀಕ್ಷೆಯನ್ನೂ ಬರೆದಿದ್ದರು. ಈವರೆಗಿನ ನೀಟ್ ಇತಿಹಾಸದಲ್ಲಿ ಸಾಮಾನ್ಯವಾಗಿ ಎರಡು ಅಥವಾ ಮೂರಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸಂಪೂರ್ಣ ಅಂಕ ಪಡೆಯಲು ಸಾಧ್ಯವಾಗಿಲ್ಲ.
ನೀಟ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪರೀಕ್ಷೆಯ ಪಾವಿತ್ರ್ಯತೆಗೆ ಪೆಟ್ಟು ಬಿದ್ದಿದೆ ಎಂದು ಹೇಳಿದೆ. ಪರೀಕ್ಷೆ ನಡೆಸುವ ‘ರಾಷ್ಟ್ರೀಯ ಪರೀಕ್ಷಾ ಮಂಡಳಿ’ಗೆ ಉತ್ತರ ನೀಡುವಂತೆ ಸೂಚಿಸಿದೆ. ಯಾವುದೇ ಹಗರಣಗಳು ನಡೆದಿಲ್ಲ. ಅಂತಹ ದುಷ್ಕೃತ್ಯಗಳು ನಡೆದಿದ್ದರೆ ಪರಿಶೀಲಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಖಚಿತವಾಗಿ ಅಕ್ರಮ ನಡೆದಿದೆ ಎಂದು ವಿಪಕ್ಷಗಳು ಪ್ರತಿಪಾದಿಸುತ್ತಿವೆ.
2016ರಲ್ಲಿ ನೀಟ್ ಜಾರಿಗೆ ಬಂದಾಗ ತಮಿಳುನಾಡಿನಂತಹ ಪ್ರಗತಿಪರ ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದವು. ನೀಟ್‌ಗೆ ದಕ್ಷಿಣದ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಭವಿಷ್ಯದ ವೈದ್ಯರನ್ನು ನೀಟ್ ಮೂಲಕ ನಿರ್ಧರಿಸುವ ಕೇಂದ್ರೀಕೃತ ವಿಧಾನವು ಕಡಿಮೆ ಶಿಕ್ಷಣ ಪಡೆದಿರುವ ಅಥವಾ ದುಬಾರಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳನ್ನು ವೈದ್ಯಕೀಯದಿಂದ ದೂರವಿಡುತ್ತದೆ. ಜನಸಾಮಾನ್ಯರ ನಡುವೆ ಸೇವೆ ಸಲ್ಲಿಸಲು ಭಯಸುವ ಗ್ರಾಮೀಣ ಭಾಗದ ಅಭ್ಯರ್ಥಿಗಳಿಂದ ವೈದ್ಯಕೀಯ ವೃತ್ತಿಯನ್ನು ಕಸಿದುಕೊಳ್ಳುತ್ತದೆ. ವೈದ್ಯಕೀಯ ರಂಗವು ಉಳ್ಳವರ ಪಾಲಾಗುತ್ತದೆ ಎಂದು ಸಾರ್ವಜನಿಕ ವಿರೋಧವಿತ್ತು.
ಭಾರತವು ತನ್ನ ಜನಸಂಖ್ಯೆಯಲ್ಲಿ 6% ವೈದ್ಯರನ್ನು ಹೊಂದಿದ್ದರೆ, ತಮಿಳುನಾಡು ತನ್ನ ಜನರಲ್ಲಿ 11% ವೈದ್ಯರನ್ನು ಹೊಂದಿದೆ. ತಮಿಳುನಾಡು ಸರ್ಕಾರವು ವೈದ್ಯಕೀಯ ಕಾಲೇಜುಗಳಿಗೆ ನೇರವಾಗಿ ಹಣವನ್ನು ನೀಡುತ್ತದೆ. ಹೀಗಾಗಿ, ತನ್ನ ಹಿಂದುಳಿದ ವಿದ್ಯಾರ್ಥಿಗಳನ್ನು ಹತಾಶೆಗೆ ದೂಡುವ, ಕೇಂದ್ರ ಸರ್ಕಾರದ ಮೋಸದ ಪರೀಕ್ಷೆಯನ್ನು ಯಾಕೆ ಒಪ್ಪಿಕೊಳ್ಳಬೇಕು. ನೀಟ್ ಬರೆಯಲು ಆಕಾಂಕ್ಷಿಗಳು ತಯಾರಿ, ಕೋಚಿಂಗ್ ಸೇರಿದಂತೆ ನಾನಾ ಕಾರಣಗಳಿಗೆ ವರ್ಷಕ್ಕೆ 10 ಲಕ್ಷ ರೂ. ವ್ಯಯಿಸಬೇಕಾಗಿದೆ. ಪರಿಣಾಮ, ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಮಕ್ಕಳು ಈ ಪರೀಕ್ಷೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ತಮಿಳು ಸರ್ಕಾರ ವಾದಿಸುತ್ತದೆ.
ವೃತ್ತಿಪರ ಶಿಕ್ಷಣದಲ್ಲಿ ಇರುವ ಸೀಮಿತ ಅವಕಾಶಗಳು ಮತ್ತು ತರಬೇತಿ ಪಡೆಯಲು ಬಯಸುವ ಬಹುಸಂಖ್ಯಾತ ಆಕಾಂಕ್ಷಿಗಳ ಬೇಡಿಕೆ-ಪೂರೈಕೆಯನ್ನು ನಿಭಾಯಿಸಲು ಸಾಮಾನ್ಯ ಪರೀಕ್ಷೆಗಳನ್ನು ನಡೆಸಬಹುದು. ಆದರೆ, ನೀಟ್ ಮಾತ್ರವೇ ನಡೆಯಬೇಕೆಂಬುದು ರಾಜಕೀಯ ಯೋಜನೆಯಾಗಿದೆ. ಭಾರತದಲ್ಲಿನ ಖಾಸಗಿ ಅಥವಾ ಕೇಂದ್ರದ ಅಡಿಯಲ್ಲಿರುವ ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯ ಪಠ್ಯಕ್ರಮವನ್ನು ಅನುಸರಿಸುತ್ತವೆ. ಈ ಶಾಲೆಗಳಲ್ಲಿ ಹೆಚ್ಚಾಗಿ ಶ್ರೀಮಂತ ವಿದ್ಯಾರ್ಥಿಗಳಿದ್ದು, ಅವರು ವಿಭಿನ್ನ ರೀತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಆದರೆ, ರಾಜ್ಯ-ಅನುದಾನಿತ ಶಾಲೆಗಳಲ್ಲಿ ಕಡಿಮೆ ಆದಾಯವುಳ್ಳ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಈ ಎರಡೂ ವರ್ಗಕ್ಕೆ ನೀಟ್ ಸಾಮಾನ್ಯವಾಗಿದ್ದು, ಪ್ರಶ್ನೆ ಪತ್ರಿಕೆಗಳು ರಾಷ್ಟ್ರೀಯ ಪಠ್ಯಕ್ರಮದ ಆಧಾರದ ಮೇಲೆ ಸಿದ್ದವಾಗುತ್ತವೆ. ಹೀಗಾಗಿ, ಶ್ರೀಮಂತ ವಿದ್ಯಾರ್ಥಿಗಳು ಮತ್ತು ಕೇಂದ್ರೀಯ ಪ್ರಶ್ನೆಗಳನ್ನು ಎದುರಿಸಿ, ಮುಂದೊಯ್ಯಲು ಸ್ಥಳೀಯ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಹೀಗಾಗಿ, ಪ್ರಾದೇಶಿಕ ಭಾಷೆ, ಪ್ರಾದೇಶಿಕ ಪಠ್ಯಕ್ರಮದ ಮೇಲೆಯೇ ಪ್ರವೇಶ ಪರೀಕ್ಷೆಗಳು ನಡೆಯಬೇಕೆಂದು ತಮಿಳುನಾಡಿನಂತಹ ರಾಜ್ಯಗಳು ಹೇಳುತ್ತವೆ.
28 ರಾಜ್ಯಗಳ ಶಿಕ್ಷಣ ಮಂಡಳಿಗಳು ನೀಡುವ ಶಾಲಾ ಶಿಕ್ಷಣದಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸಗಳಿರುತ್ತವೆ. ಇಂತಹ ವ್ಯತ್ಯಾಸಗಳನ್ನು ಕಡೆಗಣಿಸುವ ಪರೀಕ್ಷೆಯು ಸ್ಥಳೀಯ ಶಿಕ್ಷಣವನ್ನು ದುರ್ಬಲಗೊಳಿಸುತ್ತದೆ. ರಾಜ್ಯ ಪಠ್ಯಕ್ರಮದಿಂದ ದೂರ ಸರಿಯಲು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತದೆ. ಇದೇ ಸಮಯವನ್ನು ಬಳಸಿಕೊಂಡು, ಮೋದಿ ಸರ್ಕಾರ ತನ್ನದೇ ಆದ ಪೌರಾಣಿಕ, ಸುಳ್ಳು ನಿರೂಪಣೆಗಳನ್ನು ತರಗತಿಯೊಳಗೆ ಇತಿಹಾಸವಾಗಿ ತಳ್ಳಲು ಕಸರತ್ತು ನಡೆಸುತ್ತದೆ. ಮೋದಿ ಅವರ ಬಿಜೆಪಿ ಆಡಳಿತದಲ್ಲಿ ಸಿದ್ದವಾಗುವ ಪಠ್ಯಗಳಲ್ಲಿ ಭಾರತದಲ್ಲಿ ಆಡಳಿತ ನಡೆಸಿದ ಮುಸ್ಲಿಮರ ಇತಿಹಾಸದಿಂದ ಕಣ್ಮರೆಯಾಗುತ್ತಿದ್ದಾರೆ. 1948ರಲ್ಲಾದ ಮಹಾತ್ಮ ಗಾಂಧಿ ಹತ್ಯೆಯನ್ನು ಸಮರ್ಥಿಸಿ, ಹಿಂದು ರಾಷ್ಟ್ರೀಯವಾದಿ ಧೋರಣೆಯನ್ನು ಹೇರುವ ಮೂಲಕ, ಗಾಂಧಿ ಹಂತಕ ಗೋಡ್ಸೆಯನ್ನು ಇತಿಹಾಸ ಪುರುಷನಾಗಿ ಮಾಡಲಾಗುತ್ತಿದೆ. 1992ರಲ್ಲಿ ಧ್ವಂಸಗೊಳಿಸಲಾದ 16ನೇ ಶತಮಾನದ ಬಾಬ್ರಿ ಮಸೀದಿಯ ವಿಷಯವನ್ನೇ ಶಾಲಾ ಪಠ್ಯಕ್ರಮದಿಂದ ಕೈಬಿಡಲಾಗಿದೆ.
ಉತ್ತರದ ಹಲವಾರು ರಾಜ್ಯಗಳು ಕೇಂದ್ರ ಸರ್ಕಾರ ರಾಷ್ಟ್ರೀಯ ಪಠ್ಯಗಳನ್ನೇ ಅಳವಡಿಸಿಕೊಳ್ಳಲು ಮುಂದಾಗುತ್ತಿವೆ. ಬಿಜೆಪಿ ನಾಯಕರು, ‘ಒಂದು ರಾಷ್ಟ್ರ – ಒಂದು ಪಠ್ಯಕ್ರಮ’ ಎಂಬ ಪ್ರಾಯೋಗಿಕ ಹಿಪಾಕ್ರಸಿಯನ್ನು ತೇಲಿ ಬಿಡುತ್ತಿದ್ದಾರೆ. ವಿವರಿಸಿ ಹೇಳುವುದಾದರೆ, ಭವಿಷ್ಯದ ವೈದ್ಯರ ಪೂರೈಕೆಯನ್ನು ಯಾರು ನಿಯಂತ್ರಿಸಬೇಕು – ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು – ಎಂಬ ಈ ಸ್ಪರ್ಧೆ ಕೇವಲ ಭೌತಶಾಸ್ತ್ರ, ಜೀವಶಾಸ್ತ್ರ ಅಥವಾ ರಸಾಯನಶಾಸ್ತ್ರದ ವಿಚಾರಕ್ಕೆ ಸೀಮಿತವಾದುದ್ದಲ್ಲ. ಇದು, ಇತಿಹಾಸವನ್ನು ಬದಲಿಸುವ ಹುನ್ನಾರದ ಭಾಗವಾಗಿದೆ.
ಆದರೆ, ‘ಒಂದು ರಾಷ್ಟ್ರ – ಒಂದು ಪಠ್ಯಕ್ರಮ’ ಎಂಬ ವಾದಕ್ಕೆ ದಕ್ಷಿಣ ಭಾರತವು ಸವಾಲಾಗಿ ನಿಂತಿದೆ. ಇಲ್ಲಿನ ರಾಜ್ಯಗಳಲ್ಲಿ ಸ್ಥಳೀಯ ಮಂಡಳಿಗಳು ಪಠ್ಯಪುಸ್ತಕಗಳ ಉಸ್ತುವಾರಿ ವಹಿಸಿಕೊಂಡಿವೆ. ಅದರಲ್ಲೂ, ಆರ್ಥಿಕವಾಗಿ ಹೆಚ್ಚು ಸಮೃದ್ಧವಾಗಿರುವ ತಮಿಳುನಾಡು ತನ್ನ ರಾಜಕೀಯವನ್ನು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಅಲ್ಪಸಂಖ್ಯಾತರನ್ನೂ ಒಳಗೊಂಡು ಭಾಷಾ ‘ಐಡೆಂಟಿಟಿ’ಯ ಸುತ್ತ ತನ್ನ ರಾಜಕೀಯವನ್ನು ಸಂಘಟಿಸುತ್ತಿದೆ. ಅಲ್ಲದೆ, ಹಿಂದುತ್ವ ಸಿದ್ಧಾಂತಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲದ, ಅಧಿಕೃತ ಪರ್ಯಾಯವನ್ನು ಪ್ರಸ್ತುತಪಡಿಸುತ್ತದೆ. ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಮೋದಿ 3ನೇ ಅವಧಿಗೆ ಪ್ರಧಾನಿಯಾಗಿದ್ದಾರೆ. ಆದರೂ, ಬಿಜೆಪಿಯು ತಮಿಳುನಾಡಿನಿಂದ ಒಂದೇ ಒಂದು ಸಂಸದೀಯ ಸ್ಥಾನವನ್ನು ಗೆಲ್ಲಲಾಗಲಿಲ್ಲ.
ಈ ವರದಿ ಓದಿದ್ದೀರಾ?: ಈ ದಿನ ವಿಶೇಷ | ನ್ಯಾಯಾಂಗ ನಿಂದನೆಗೆ ಶಿಕ್ಷೆ ಇದೆ, ಸಂವಿಧಾನ ನಿಂದನೆಗೆ?
ನೀಟ್ ಎಂಬ ರಾಷ್ಟ್ರೀಯ ಪರೀಕ್ಷೆಯು ಈ ರಾಜಕೀಯ ಸ್ವಾಯತ್ತತೆಗೆ ಅಪಾಯಕಾರಿಯಾಗಿದೆ. ನೀಟ್‌ಅನ್ನು ಪರಿಚಯಿಸಿದಾಗಿನಿಂದ, ತಮಿಳುನಾಡಿನ ರಾಜ್ಯ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 14% ಕುಗ್ಗಿದೆ. ತಮಿಳು ಮಾಧ್ಯಮ ಶಾಲೆಗಳೂ ಕುಸಿತ ಕಂಡಿವೆ. ಶಿಕ್ಷಣದ ಮೇಲಿನ ಕೇಂದ್ರ ಸರ್ಕಾರದ ಅತಿಕ್ರಮಣವು ಇತರ ದಕ್ಷಿಣ ರಾಜ್ಯಗಳನ್ನು ಸಹ ಚಿಂತೆಗೀಡು ಮಾಡಿದೆ. ಕೇರಳದಲ್ಲಿ ಇತ್ತೀಚೆಗೆ ಪರಿಚಯಿಸಲಾದ ಲಿಂಗ-ಸಮಾನತೆಯ ಪಠ್ಯಪುಸ್ತಕಗಳು ಪಿತೃಪ್ರಭುತ್ವದ ಸುತ್ತ ಬೇರೂರಿರುವ ವಿಚಾರಗಳನ್ನು ಛಿದ್ರಗೊಳಿಸಲು ಪ್ರಯತ್ನಿಸುತ್ತಿವೆ.
ದಕ್ಷಿಣ ರಾಜ್ಯಗಳಲ್ಲಿ ಹಿಂದಿನ ತಲೆಮಾರಿನ ಭಾರತೀಯರ ಜಾಗತಿಕ ದೃಷ್ಟಿಕೋನ ಮತ್ತು ಜಾತ್ಯತೀತ ಗಣರಾಜ್ಯದ ಆಶಯಗಳೊಂದಿಗೆ ಪಠ್ಯಗಳು ರೂಪುಗೊಳ್ಳುತ್ತಿವೆ. ಆದರೆ, ಕೇಂದ್ರ ಸರ್ಕಾರವು ಆರ್‌ಎಸ್‌ಎಸ್, ಮನುವಾದಿ, ಹಿಂದುತ್ವ ಸಿದ್ಧಾಂತದ ಮೇಲೆ ಪಠ್ಯಗಳನ್ನು ರೂಪಿಸಲು ಯತ್ನಿಸುತ್ತಿದೆ.
ಒಂದೆಡೆ, ನೀಟ್‌ನಂತಹ ರಾಷ್ಟ್ರೀಯ ಪರೀಕ್ಷೆಗಳ ಮೂಲಕ ರಾಷ್ಟ್ರೀಯ ಪಠ್ಯಕ್ರಮದೆಡೆಗೆ ವಿದ್ಯಾರ್ಥಿಗಳು, ಪೋಷಕರನ್ನು ಸೆಳೆಯಲಾಗುತ್ತಿದೆ. ರಾಷ್ಟ್ರೀಯ ಪಠ್ಯಕ್ರಮದ ಎದುರು ರಾಜ್ಯ ಪಠ್ಯಗಳನ್ನು ಕಳಪೆ ಮಾಡಲಾಗುತ್ತಿದೆ. ಮತ್ತೊಂದೆಡೆ, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಅಕ್ರಮಗಳ ಮೂಲಕ ಅನೇಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಕನಸುಗಳನ್ನು ಕೊಲ್ಲಲಾಗುತ್ತಿದೆ. ಇಂತಹ ಸಂದರ್ಭದಲ್ಲಿ, ರಾಜ್ಯಗಳು ತಮ್ಮದೇ ಆದ ಪ್ರವೇಶ ಪರೀಕ್ಷೆಗಳು ಮತ್ತು ಮಾನದಂಡಗಳನ್ನು ಹೊಂದಿಸುವ ಅಧಿಕಾರವನ್ನು ಮರಳಿ ಪಡೆದರೆ, ಬಹುಸಂಖ್ಯಾತರ ಕನಸುಗಳಿವೆ ಜೀವ ಬರುತ್ತದೆ. ಪಠ್ಯ ಕ್ರಮದಲ್ಲಿನ ಸೈದ್ಧಾಂತಿಕ ಹೋರಾಟ ಬಲಗೊಳ್ಳುತ್ತದೆ.
ಏನೇ ಇರಲಿ, ಮೊನ್ನೆ ನಡೆದ ಕಾಂಚನ್‌ಜುಂಗಾ ರೈಲು ಅಪಘಾತ ಕೇಂದ್ರ ಸರ್ಕಾರದ ವೈಫಲ್ಯವನ್ನು ಎತ್ತಿ ತೋರುತ್ತದೆ. ರೈಲು ಅಪಘಾತಗಳು ಮತ್ತು ದುರಂತಗಳನ್ನು ತಡೆಯಲು ‘ಕವಚ’ ಎಂಬ ತಂತ್ರಜ್ಞಾನವನ್ನು ಇದೇ ಮೋದಿ ಸರ್ಕಾರ ಪರಿಚಯಿಸಿತ್ತು. ಆದರೆ, ಈ ತಂತ್ರಜ್ಞಾನವೂ ಮೋದಿ ಅವರು ‘ಜುಮ್ಲಾ’ದಂತಾಗಿದೆ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರವನ್ನು ನಿರ್ವಹಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ರಾಷ್ಟ್ರೀಯ ಪರೀಕ್ಷೆಗಳನ್ನು ನಡೆಸುವಲ್ಲಿ ಅವ್ಯವಹಾರಗಳು ನಡೆದರೂ ಮೌನವಾಗಿದೆ. ಮೋದಿ ಸರ್ಕಾರದಲ್ಲಿ ಪ್ರಧಾನಿಯೂ ಸೇರಿದಂತೆ ಎಲ್ಲ ಸಚಿವರು ನಿರುಪಯುಕ್ತ, ನಿಸ್ಪ್ರಯೋಜಕರಾಗಿದ್ದಾರೆ.