ನವದೆಹಲಿಯಲ್ಲಿ ಶನಿವಾರ ನಡೆಯಲಿರುವ ಜಿ20 ಶೃಂಗಸಭೆಯ ಔತಣಕೂಟಕ್ಕೆ ರಾಜ್ಯಸಭೆಯ ವಿಪಕ್ಷ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ತಮಿಳುನಾಡಿನ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಅಧ್ಯಕ್ಷ ಕುಮಾರ ಮಂಗಳಂ, “ಅಯೋಧ್ಯೆಯ ರಾಮಮಂದಿರದ ಭೂಮಿಪೂಜೆಗೆ ಅಂದಿನ ರಾಷ್ಟ್ರಪತಿ ಕೋವಿಂದ್‌ಗೆ ಆಹ್ವಾನ ನೀಡಿರಲಿಲ್ಲ. ನೂತನ ಸಂಸತ್ತಿನ ಉದ್ಘಾಟನಾ ಸಮಾರಂಭಕ್ಕೆ ಹಾಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನವಿಲ್ಲ. ಈಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಿ20 ಪ್ರತಿನಿಧಿಗಳ ಔತಣಕೂಟಕ್ಕೆ ಆಹ್ವಾನ ನೀಡಿಲ್ಲ. ಮೋದಿ ಇದ್ದರೆ ಮನು ಇರುತ್ತಾನೆ. ಜಾತಿ ಕಾರಣಕ್ಕಾಗಿಯೇ ಇವರಿಗೆಲ್ಲ ಆಹ್ವಾನ ನೀಡಿಲ್ಲ” ಎಂದು ಕಿಡಿಕಾರಿದ್ದಾರೆ.
ದಲಿತ ನಾಯಕ ಖರ್ಗೆ ಅವರನ್ನು ಉನ್ನತ ಮಟ್ಟದ ಕಾರ್ಯಕ್ರಮಕ್ಕೆ ಆಹ್ವಾನಿಸದಿದ್ದಕ್ಕಾಗಿ ಕುಮಾರ ಮಂಗಳಂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, “ಪ್ರಧಾನಿ ಮೋದಿ ಅವರು ಪ್ರಾಚೀನ ಹಿಂದೂ ಋಷಿ ಮಹರ್ಷಿ ಮನುವಿನ ಪರಂಪರೆಯನ್ನು ಎತ್ತಿಹಿಡಿಯುತ್ತಿದ್ದಾರೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಪ ಚುನಾವಣೆ 2023 ಫಲಿತಾಂಶ: ಇಂಡಿಯಾ 4, ಬಿಜೆಪಿ 3 ಕ್ಷೇತ್ರಗಳಲ್ಲಿ ಜಯ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್‌ನಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿ, ‘ಔತಣಕೂಟಕ್ಕೆ ಖರ್ಗೆ ಅವರನ್ನು ಆಹ್ವಾನಿಸಲಾಗಿಲ್ಲ. ಭಾರತದ ಜನಸಂಖ್ಯೆಯ ಶೇ 60 ಪ್ರತಿಶತದಷ್ಟು ಜನಸಂಖ್ಯೆಯ ನಾಯಕತ್ವ ವಹಿಸಿರುವ ಪ್ರಮುಖ ನಾಯಕರಿಗೆ ಸರಕಾರ ಗೌರವಿಸುವುದಿಲ್ಲ. ಸರಕಾರದ ಕ್ರಮವು ಅದರ ಚಿಂತನೆಯ ಬಗ್ಗೆ ಹೇಳುತ್ತದೆ. ಜನರು ಇದರ ಹಿಂದೆ ಯಾವ ರೀತಿಯ ಆಲೋಚನೆ ಇದೆ ಎಂಬುದರ ಕುರಿತು ಯೋಚಿಸಬೇಕು”ಎಂದರು.
“ರಾಹುಲ್ ಗಾಂಧಿಯವರು ಪ್ರಸ್ತುತ ಬೆಲ್ಜಿಯಂ, ಫ್ರಾನ್ಸ್ ಮತ್ತು ನಾರ್ವೆ ಯುರೋಪಿಯನ್ ತ್ರಿರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಗುರುವಾರ ಬ್ರಸೆಲ್ಸ್‌ನಲ್ಲಿ ಯುರೋಪಿಯನ್ ಪಾರ್ಲಿಮೆಂಟ್ (ಎಂಇಪಿ) ಕೆಲವು ಸದಸ್ಯರೊಂದಿಗೆ ಸಭೆಗಳನ್ನು ನಡೆಸಿದ್ದಾರೆ.