ಬಿಜೆಪಿಯ ಮೋದಿ ಗ್ಯಾರಂಟಿಯನ್ನು ಟೀಕೆ ಮಾಡಿರುವ ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, “ಮೋದಿ ಗ್ಯಾರಂಟಿಗೆ ಜಿರೋ ವ್ಯಾರಂಟಿ” ಎಂದಿದ್ದಾರೆ. ಬಿಜೆಪಿಯನ್ನು ‘ಹೊರಗಿನವರು’ ಎಂದಿರುವ ಅಭಿಷೇಕ್, “ಬಿಜೆಪಿಯವರು ಪಶ್ಚಿಮ ಬಂಗಾಳದ ವಿರೋಧಿಗಳು” ಎಂದು ಆರೋಪಿಸಿದರು.
2024ರ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷಗಳು ಬಿಡುಗಡೆ ಮಾಡುತ್ತಿದ್ದು ರಾಜಕೀಯ ಮುಖಂಡರುಗಳು ಪರಸ್ಪರ ವಾಗ್ದಾಳಿಯನ್ನು ಕೂಡಾ ನಡೆಸುತ್ತಿದ್ದಾರೆ. ಭಾನುವಾರ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಜನ ಗರ್ಜನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.
#WATCH | Abhishek Banerjee says, “From this Brigade Public Rally, I would like to tell the BJP – Jan Gan ka garjan, Bengal se virodhi ka visarjan” https://t.co/kpbSbV6ELM pic.twitter.com/1pRkOgLsMu
— ANI (@ANI) March 10, 2024
“ಬಿಜೆಪಿಯವರು ಬರೀ ಚುನಾವಣೆ ಬಂದಾಗ ಮಾತ್ರ ಪಶ್ಚಿಮ ಬಂಗಾಳಕ್ಕೆ ಬರುತ್ತಾರೆ, ಅವರು ಹೊರಗಿನವರು, ಬಂಗಾಳ ವಿರೋಧಿಗಳು” ಎಂದಿರುವ ಬ್ಯಾನರ್ಜಿ, “ರಾಜ್ಯದ ನಿಧಿಯನ್ನು ನೀಡದಿರುವ ಕೇಸರಿ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಬಂಗಾಳದ ಜನರು ಉತ್ತರ ನೀಡುತ್ತಾರೆ” ಎಂದರು.
“ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಪಕ್ಷ ಮಾತ್ರ ನೀಡಿದ ಭರವಸೆಯನ್ನು ಈಡೇರಿಸುತ್ತದೆ. ಬಿಜೆಪಿ ಮತ್ತು ಅದರ ನಾಯಕರುಗಳು ಬಂಗಾಳ ವಿರೋಧಿಗಳು. ಹಾಗಾಗಿ ರಾಜ್ಯಕ್ಕೆ ನೀಡಬೇಕಾದ ಹಣವನ್ನು ನೀಡದೆ ಬಾಕಿ ಉಳಿಸಿದ್ದಾರೆ” ಎಂದು ಆರೋಪಿಸಿದರು. “ಕೇಂದ್ರ ಸರ್ಕಾರವು ನಡೆಸುವ ಇಡಿ ಮತ್ತು ಸಿಬಿಐ ದಾಳಿಗಳು ಯಾವುದೇ ಪರಿಣಾಮ ಬೀರದು” ಎಂದು ಈ ಸಂದರ್ಭದಲ್ಲೇ ಹೇಳಿದರು.
ಟಿಎಂಸಿ ಅಭ್ಯರ್ಥಿಗಳ ಘೋಷಣೆ
ಟಿಎಂಸಿ ಭಾನುವಾರ ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು ಪಟ್ಟಿಯಲ್ಲಿ ಭಾರತ ತಂಡ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಹೆಸರು ಕೂಡಾ ಕಾಣಿಸಿಕೊಂಡಿದೆ. ಯೂಸುಫ್ ಪಠಾಣ್ ಬಹರಂಪುರದಿಂದ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕನಾಗಿರುವ ಅಧೀರ್ ರಂಜನ್ ಚೌಧರಿ ವಿರುದ್ಧ ಸ್ಪರ್ಧಿಸಲಿದ್ದಾರೆ.
ಮಾಜಿ ಸಂಸದೆ ಮಹುವಾ ಮೊಯಿತ್ರಾ ಕೃಷ್ಣನಗರದಿಂದ ಸ್ಪರ್ಧಿಸಿದರೆ, ಮಮತಾ ಬ್ಯಾನರ್ಜಿ ಸೋದರಳಿಯ ಮತ್ತು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಡೈಮಂಡ್ ಹಾರ್ಬರ್‌ನಿಂದ ಸ್ಪರ್ಧಿಸಲಿದ್ದಾರೆ. ನಟ ಶತ್ರುಘ್ನ ಸಿನ್ಹಾ ಅಸನ್ಸೋಲ್‌ನಿಂದ ಕಣಕ್ಕಿಳಿದರೆ, 1983ರಲ್ಲಿ ಭಾರತ ವಿಶ್ವಕಪ್ ಗೆದ್ದ ಕ್ರಿಕೆಟ್ ತಂಡದ ಸದಸ್ಯ ಕೀರ್ತಿ ಅಜಾದ್ ದುರ್ಗಾಪುರ ಬುರ್ದ್ವಾನ್‌ನಿಂದ ಕಣಕ್ಕಿಳಿಯುತ್ತಿದ್ದಾರೆ.