ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಗುರುತುಗಳಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಅವರ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದ್ದು, “ಮೋದಿಗೆ ಅವರ ಇತಿಹಾಸ ಗೊತ್ತಿಲ್ಲ. 1940ರ ದಶಕದ ಆರಂಭದಲ್ಲಿ ಮುಸ್ಲಿಂ ಲೀಗ್‌ನೊಂದಿಗೆ ಬಂಗಾಳದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿದ್ದವರು ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರೇ ಹೊರತು, ಬೇರಾರು ಅಲ್ಲ” ಎಂದು ಹೇಳಿದೆ.
ಶನಿವಾರ, ಸಹರಾನ್‌ಪುರದಲ್ಲಿ ಚುನಾವಣಾ ಪ್ರಚಾರದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, “ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಮುದ್ರೆ ಇದೆ. ಆದರೆ ಅದರಲ್ಲಿ ಎಡಪಂಥೀಯರ ಪ್ರಾಬಲ್ಯವಿದೆ” ಎಂದು ಹೇಳಿದ್ದರು.
ಪ್ರಧಾನಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಪ್ರಧಾನಿ ಅವರಿಗೆ ಅವರ ಇತಿಹಾಸ ತಿಳಿದಿಲ್ಲ. ವಾಸ್ತವವಾಗಿ, ಆಗ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದ ಮುಖರ್ಜಿ ಅವರು ಬಂಗಾಳದಲ್ಲಿ ಮುಸ್ಲಿಂ ಲೀಗ್ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಅಲ್ಲಿ ಅವರೇ ಸಮ್ಮಿಶ್ರ ಸರ್ಕಾರ ರಚಿಸಿದ್ದರೇ ಹೊರತು, ಬೇರೆ ಯಾರಿಗೂ ಅಲ್ಲ” ಎಂದಿದ್ದಾರೆ.
“ಹಿಂದೂ ಮಹಾಸಭಾ ಸಿಂಧ್ ಮತ್ತು ಈಶಾನ್ಯ ಪ್ರಾಂತ್ಯದಲ್ಲಿ ಮುಸ್ಲಿಂ ಲೀಗ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಒಡೆದು ಆಳುವ ರಾಜಕಾರಣ ಮಾಡುತ್ತಿರುವುದು ಬಿಜೆಪಿಯೇ ಹೊರತು, ಕಾಂಗ್ರೆಸ್ ಅಲ್ಲ” ಎಂದು ತಿರುಗೇಟು ಕೊಟ್ಟಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಐದು ‘ನ್ಯಾಯ ಗ್ಯಾರಂಟಿ’ಯುಳ್ಳ 25 ಭರವಸೆಗಳ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆ ಬಿಡುಗಡೆಯಾದ ಒಂದು ದಿನದ ನಂತರ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದರು.
ಶಿಷ್ಯವೇತನದ ಹಕ್ಕು, ಎಂಎಸ್‌ಪಿಗೆ ಕಾನೂನು ಖಾತರಿ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿ ವಿಸ್ತರಿಸಲು 50%ರಷ್ಟು ಮಿತಿಯನ್ನು ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿ, ರಾಷ್ಟ್ರವ್ಯಾಪಿ ಜಾತಿ ಗಣತಿ ಹಾಗೂ ಅಗ್ನಿಪಥ್ ಯೋಜನೆ ರದ್ದುಗೊಳಿಸುವುದು ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ.