ಮಹಿಳೆಯರ ರಕ್ಷಣೆಗಾಗಿ ‘ಬೇಟಿ ಬಚೋವೋ – ಬೇಟಿ ಪಡಾವೋ’ ಎಂಬ ಘೋಷಣೆಯನ್ನು ಮೊಳಗಿಸಿದ್ದ ಪ್ರಧಾನಿ ಮೋದಿ ಅವರು ಭಾನುವಾರ ಕರ್ನಾಟಕಕ್ಕೆ ಬರಲಿದ್ದಾರೆ. ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಬೃಹತ್ ಚುನಾವಣಾ ರ್‍ಯಾಲಿ ನಡೆಸಲಿದ್ದಾರೆ. ಇದೇ ಸಮಯದಲ್ಲಿ ಅವರು ಹಾಸನದ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಮಾತನಾಡುತ್ತಾರೆಯೇ ಎಂಬ ಪ್ರಶ್ನೆ ದೇಶಾದ್ಯಂತ ವ್ಯಕ್ತವಾಗಿದೆ.
ಹಾಸನದಲ್ಲಿ ಸುಮಾರು 2,900 ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ಗಳನ್ನು ಎಸೆಯಾಗಿದ್ದರು. ಆ ವಿಡಿಯೋಗಳಲ್ಲಿರುವುದು ಸಂಸದ ಪ್ರಜ್ವಲ್ ರೇವಣ್ಣ ಎಂದು ಹೇಳಲಾಗುತ್ತಿದೆ. ವಿಡಿಯೋದಲ್ಲಿ ಕಾಮುಕ ಯುವ ನಾಯಕ ನೂರಾರು ಹೆಣ್ಣು ಮಕ್ಕಳನ್ನು ಪುಸಲಾಯಿಸಿ, ಆಮಿಷವೊಡ್ಡಿ, ಬೆದರಿಸಿ ತನ್ನ ಕಾಮವಾಂಚೆ ತೀರಿಸಿಕೊಂಡಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದೆ.
ಕೃತ್ಯ ಎಸಗಿರುವ ಕಾಮುಕ ಸಂಸದ ಪ್ರಜ್ವಲ್ ರೇವಣ್ಣ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಆತ ದೇಶಬಿಟ್ಟು ಪರಾರಿಯಾಗಿದ್ದಾನೆ. ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ಬಿಜೆಪಿ-ಜೆಡಿಎಸ್‌ನ ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಲ್ಲದೆ, ಮೈಸೂರಿನಲ್ಲಿ ನಡೆದ ರ್‍ಯಾಲಿಯಲ್ಲಿ ಮೋದಿ ಅವರು ಪ್ರಜ್ವಲ್‌ಗೆ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದ್ದರು.
ಮೋದಿ ಮತ ಯಾಚನೆ ಮಾಡಿದ್ದ ಪ್ರಜ್ವಲ್, ಈಗ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ತನ್ನ ಕೃತ್ಯವನ್ನು ತಾನೇ ವಿಡಿಯೋ ಮಾಡಿಟ್ಟುಕೊಂಡಿದ್ದಾನೆ. ಈಗ ಆತನ ವಿಕೃತ ಕಾಮವಾಂಚೆ ಬಯಲಾಗಿದೆ. ಆದರೂ, ಬಿಜೆಪಿ ಈವರೆಗೆ ಕೃತ್ಯವನ್ನು ಖಂಡಿಸಿಲ್ಲ. ಬಿಜೆಪಿಯ ಯಾವುದೇ ನಾಯಕ ಕೃತ್ಯದ ಬಗ್ಗೆ ಒಂದೇ ಒಂದು ಹೇಳಿಕೆಯನ್ನೂ ನೀಡಿಲ್ಲ.
ಈಗ ಸ್ವತಃ ಪ್ರಧಾನಿ ಮೋದಿ ಅವರೇ ಕರ್ನಾಟಕಕ್ಕೆ ಬರುತ್ತಿದ್ದಾರೆ. ಸ್ತ್ರೀ ಶಕ್ತಿ ಬಗ್ಗೆ ಮಾತನಾಡುವ, ಬೇಟಿ ಬಚಾವೋ – ಬೇಟಿ ಪಡಾವೋ ಎನ್ನುವ ಮೋದಿ ಅವರು ಇಂತಹದೊಂದು ಮಹಾ ಕೃತ್ಯದ ಬಗ್ಗೆ ಮಾತನಾಡದಿದ್ದರೆ, ಪ್ರಧಾನಿಯಾಗಿ ಅವರಿಗೆ ಶ್ರೇಯಸ್ಸಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದ ಜವಬ್ದಾರಿ ಹೊತ್ತಿರುವ ಮೋದಿ ಅವರು ಕೃತ್ಯದ ಬಗ್ಗೆ ಮಾತನಾಡಬೇಕು. ವಿಕೃತ ಕಾಮುಕನಿಗೆ ಶಿಕ್ಷೆ ವಿಧಿಸುವ ಹಾಗೂ ಸಂತ್ರಸ್ತ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸುವ ಭರವಸೆ ನೀಡಬೇಕೆಂದು ಹಲವರು ಆಗ್ರಹಿಸಿದ್ದಾರೆ.
ಆದರೆ, ತಮ್ಮದೇ ಎನ್‌ಡಿಎ ಅಭ್ಯರ್ಥಿಯೇ ಇಂತಹ ವಿಕೃತ ಕೃತ್ಯ ನಡೆಸಿದ್ದಾರೆ ಎನ್ನಲಾಗುತ್ತಿರುವ ಸಮಯದಲ್ಲಿ, ಮೋದಿ ಅವರು ಕೃತ್ಯದ ಬಗ್ಗೆ ಮಾತನಾಡುವರೇ ಎಂಬುದು ಅನುಮಾನ ಹುಟ್ಟಿಸಿದೆ.