ಈ ವರ್ಷದ ಮೂರು ತಿಂಗಳಲ್ಲೇ ಐದನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಭೇಟಿ ನೀಡಿದ್ದಾರೆ. ಮಂಗಳವಾರ ಕೇರಳದ ಪಾಲಕ್ಕಾಡ್‌ನಲ್ಲಿ ಮೋದಿ ಮುಂದಿನ ಲೋಕಸಭೆ ಚುನಾವಣೆಯ ರೋಡ್‌ಶೋ ನಡೆಸಿದ್ದಾರೆ. ಆದರೆ ಅಭ್ಯರ್ಥಿ ಇಲ್ಲದೆಯೇ ರೋಡ್‌ಶೋ ನಡೆಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಪ್ರಧಾನಿ ಮೋದಿ ಚಾಪರ್ ಮೂಲಕ ಪಾಲಕ್ಕಾಡ್‌ಗೆ ತಲುಪಿದ್ದು, ಅರ್ಧ ಗಂಟೆಗಳ ಕಾಲ ಬಿಜೆಪಿ ಕಾರ್ಯಕರ್ತರೊಂದಿಗೆ ರೋಡ್‌ಶೋ ನಡೆಸಿದ್ದಾರೆ. ಪಾಲಕ್ಕಾಡ್‌ನ ಬಿಜೆಪಿ ಅಭ್ಯರ್ಥಿಯಾದ ಸಿ ಕೃಷ್ಣಕುಮಾರ್, ಪೊನ್ನಾನಿ ಅಭ್ಯರ್ಥಿ ನಿವೇದಿತಾ ಸುಬ್ರಮನಿಯನ್, ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಕೂಡ ರೋಡ್‌ಶೋನಲ್ಲಿ ಭಾಗಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಜಾತ್ಯತೀತತೆ ಭಾರತದ ಆತ್ಮ, ಒಂದು ಧರ್ಮದ ಪ್ರಚಾರ ಸಲ್ಲ: ಕೇರಳ ಸಿಎಂ
ಆದರೆ ರೋಡ್‌ಶೋ ಈಗ ವಿವಾದಕ್ಕೆ ಕಾರಣವಾಗಿದೆ. ಅದಕ್ಕೆ ಕಾರಣ ಬಿಜೆಪಿ ಮುಸ್ಲಿಂ ಅಭ್ಯರ್ಥಿಗೆ ಆಮಂತ್ರಣವೇ ನೀಡದೆ ಇರುವುದು! ಬಿಜೆಪಿ ಎನ್‌ಡಿಎಯ ಮುಸ್ಲಿಂ ಅಭ್ಯರ್ಥಿಯನ್ನು ಈ ರೋಡ್‌ಶೋಗೆ ಆಮಂತ್ರಿಸಿಲ್ಲ ಎಂದು ಎಲ್‌ಡಿಎಫ್ ಆರೋಪಿಸಿದೆ.
The enthusiasm in Palakkad is indicative of the strong support for NDA in Kerala. Here are some glimpses from the roadshow. pic.twitter.com/qbvSDVkrZK
— Narendra Modi (@narendramodi) March 19, 2024
ಬಿಜೆಪಿಯ ಮಲ್ಲಪ್ಪುರಂ ಅಭ್ಯರ್ಥಿ ಎಂ ಅಬ್ದುಲ್ ಸಲಾಮ್ ರೋಡ್‌ಶೋನಲ್ಲಿ ಕಾಣಿಸಿಕೊಳ್ಳದ ವಿಚಾರದಲ್ಲಿ ಸಿಪಿಐಎಂ ಕೇಂದ್ರ ಸಮಿತಿ ಸದಸ್ಯ ಎ ಕೆ ಬಾಲನ್ ಬಿಜೆಪಿಯನ್ನು ಟೀಕಿಸಿದ್ದಾರೆ. ಮುಸ್ಲಿಂ ಎಂಬ ಕಾರಣಕ್ಕೆ “ಅಬ್ದುಲ್ ಸಲಾಮ್‌ರಿಗೆ ಈ ರೋಡ್‌ಶೋಗೆ ಆಮಂತ್ರಣವೇ ನೀಡಿಲ್ಲ” ಎಂದು ಆರೋಪಿಸಿದ್ದಾರೆ.
ಆದರೆ ಅಭ್ಯರ್ಥಿ ಸಲಾಮ್ ಮಾತ್ರ ಇಲ್ಲಿ ಯಾವುದೇ ತಾರಮತ್ಯವಿಲ್ಲ ಎಂದಿದ್ದಾರೆ. “ನಾನು ಮೋದಿಯನ್ನು ಭೇಟಿಯಾಗಲು ಪಾಲಕ್ಕಾಡ್‌ಗೆ ಹೋದೆ. ಮಲ್ಲಪ್ಪುರಂನಲ್ಲಿ ಚುನಾವಣಾ ಪ್ರಚಾರಕ್ಕೆ ಮೋದಿ ಅವರನ್ನು ಆಮಂತ್ರಿಸಿದೆ. ರೋಡ್‌ಶೋನಲ್ಲಿ ಭಾಗಿಯಾಗುವ ಆಸೆ ನನಗಿತ್ತು. ಆದರೆ ನನಗೆ ಆಮಂತ್ರಣವನ್ನು ನೀಡಲಾಗಿಲ್ಲ. ಇತರೆ ಇಬ್ಬರು ಅಭ್ಯರ್ಥಿಗಳನ್ನು ಆಮಂತ್ರಿಸಲಾಗಿದೆ” ಎಂದು ಹೇಳಿದರು.