ಮುಸಲ್ಮಾನರಿಗೆ ಕಳೆದ 30 ವರ್ಷದಿಂದ ಮೀಸಲಾತಿ ಜಾರಿಯಲ್ಲಿದೆ. ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಲು ಮುಸಲ್ಮಾನರಿಗಿದ್ದ ಮೀಸಲಾತಿಯನ್ನು ತೆಗೆದು ಹಾಕಿದರು. ಮುಸಲ್ಮಾನರಿಗೆ ನೀಡಿದ ಮೀಸಲಾತಿ ಧರ್ಮಾಧಾರಿತ ಅಲ್ಲ, ಸಂವಿಧಾನದ ಆರ್ಟಿಕಲ್ 15 ಹಾಗೂ 16ನಂತೆ ನೀಡಲಾಗಿದೆ.
ಬಿಹಾರದ ಮುಂಗೇರ್‌ನಲ್ಲಿ ನಿನ್ನೆ ಚುನಾವಣಾ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, “ಕಳೆದ 10 ವರ್ಷಗಳಲ್ಲಿ ಭಾರತದ ವಿಶ್ವಾಸಾರ್ಹತೆ ಹೆಚ್ಚಾಗಿದ್ದು, ಇಂದು ಜಗತ್ತಿನಲ್ಲಿ ಮೊಳಗುತ್ತಿದೆ. ವಿಶ್ವದ ಪ್ರತಿಯೊಂದು ದೇಶದಲ್ಲಿ, ಭಾರತೀಯರು ಹೆಮ್ಮೆಪಡುತ್ತಿದ್ದಾರೆ. ಇಂದು ಭಾರತದ ಗೌರವ ಹೆಚ್ಚುತ್ತಿದೆ. ಭಾರತ ವಿಶ್ವಗುರುವಾಗಿ ಮಾರ್ಪಟ್ಟಿದೆ” ಎಂದು ಮೋದಿ ಹಸಿ ಸುಳ್ಳುಗಳನ್ನು ಹೇಳಿದ್ದಾರೆ.
ಮುಂಗೇರ್‌ನ ಈ ಭೂಮಿ ಸ್ವಾಭಿಮಾನ ಮತ್ತು ಪರಂಪರೆಯ ಭೂಮಿಯಾಗಿದೆ. ಈ ಪ್ರದೇಶದಿಂದ ಭಾರತ ಸಮೃದ್ಧಿಯ ಅವಧಿಯನ್ನು ಕಂಡಿದೆ. ಇದನ್ನು ಕೆಲವೊಮ್ಮೆ ಊಹಿಸುವುದು ಕಷ್ಟ. ಅಂತೆಯೇ ಎನ್‌ಡಿಎ ಸರ್ಕಾರವು ಅದೇ ಸಮೃದ್ಧಿಯನ್ನು ಭಾರತಕ್ಕೆ ಮರಳಿಸಲು ಪ್ರಯತ್ನಿಸುತ್ತಿದೆ ಎಂದು ಮೋದಿ ಭಾಷಣ ಮಾಡಿದ್ದಾರೆ.
ಆದರೆ, ನಮ್ಮ ಪ್ರಧಾನಿ ವಾಸ್ತವವಾಗಿ, ಪ್ರತಿ ಪಕ್ಷಗಳ ನಾಯಕರನ್ನು ಜೈಲಿಗೆ ಕಳುಹಿಸುತ್ತಾರೆ. ಇಂಟರ್ನೆಟ್ ಬಂದ್ ಮಾಡಿಸುತ್ತಾರೆ. ಪೌಷ್ಠಿಕತೆಯ ಸೂಚ್ಯಂಕದಲ್ಲಿ ಭಾರತದ ಸ್ಥಾನ ಎಲ್ಲಿದೆ ಎಂಬುದನ್ನು ನಾವು ನೋಡಿದ್ದೇವೆ. ದೆಹಲಿ ಮುಖ್ಯಮಂತ್ರಿಯನ್ನು ಜೈಲಿಗೆ ಅಟ್ಟಿದ ಬಳಿಕ ಭಾರತದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುತ್ತಿರುವುದನ್ನು ಖಂಡಿಸಿದ ಅಮೇರಿಕ ಕೂಡಾ ಎಚ್ಚರಿಕೆ ನೀಡಿದೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆಯನ್ನೇ ನಡೆಸದೆ ತಮ್ಮ ನಾಯಕನನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಿರುವಂತಹ ಸಂದರ್ಭಗಳು ನಮ್ಮ ಕಣ್ಣ ಮುಂದೆಯೇ ಇವೆ. ಸೂರತ್‌ನಲ್ಲಿ ಮೇ 7 ರಂದು ಮತದಾನದ ದಿನಾಂಕ ನಿಗದಿ ಮಾಡಿದ್ದರೂ ಕೂಡಾ ಭಾರತೀಯ ಜನತಾ ಪಕ್ಷದ ಸಂಸದರಾಗಿ ಮುಖೇಶ್ ದಲಾಲ್ ಏಪ್ರಿಲ್ 22ರಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತ ಎಣಿಕೆ ದಿನಕ್ಕೆ ಆರು ವಾರಗಳ ಮೊದಲೇ ವಿಜೇತರನ್ನಾಗಿ ಘೋಷಿಸಿದ್ದಾರೆ.
“ಇಂದು ನಾವು ದೇಶದಲ್ಲಿ ವಂದೇ ಭಾರತ್, ಅಮೃತ್ ಭಾರತ್ ಮತ್ತು ಬುಲೆಟ್ ರೈಲಿನಂತಹ ಹೊಸ ರೈಲುಗಳನ್ನು ಓಡಿಸುತ್ತಿದ್ದೇವೆ. ಇವು ಕೇವಲ ಆಧುನಿಕ ಸೌಲಭ್ಯಗಳಲ್ಲ. ಇಂದು ನಾವು ಭಾರತದಲ್ಲಿ ಟ್ರ್ಯಾಕ್‌ಗಳಿಂದ ಹಿಡಿದು ರೈಲು ಎಂಜಿನ್‌ಗಳು ಮತ್ತು ಬೋಗಿಗಳವರೆಗೆ ಎಲ್ಲವನ್ನೂ ತಯಾರಿಸುತ್ತಿದ್ದೇವೆ. ಅಷ್ಟೇ ಅಲ್ಲ, ನಾವು ಅದನ್ನು ವಿಶ್ವದ ಇತರ ದೇಶಗಳಿಗೆ ಅಂದರೆ ವಿದೇಶಗಳಿಗೂ ಮಾರಾಟ ಮಾಡುತ್ತಿದ್ದೇವೆ. ಇದು ಮುಂಬರುವ ಸಮಯದಲ್ಲಿ ಬಿಹಾರದ ರೈಲು ಕಾರ್ಖಾನೆಗಳಿಗೆ ಸಾಕಷ್ಟು ಪ್ರಯೋಜನವನ್ನು ನೀಡಲಿದೆ” ಎಂದು ಮತ್ತಷ್ಟು ಸುಳ್ಳುಗಳನ್ನು ಹೇಳಿದ್ದಾರೆ.
ಮೇಲಿನ ಎಲ್ಲ ರೈಲುಗಳೂ ಕೂಡಾ ಮೋದಿ ಬಿಡುತ್ತಿರುವ ‘ಬಂಡಲ್’ ರೈಲುಗಳು. ರೈಲು ಯೋಜನೆಗಳಿಗೆ ಮೂಲ ಸೌಕರ್ಯಗಳನ್ನು ಹೊಂದಿಸಿ ರೈಲು ಸೇವೆ ಒದಗಿಸಲು ಬಹು ವರ್ಷಗಳೇ ಬೇಕಾಗುತ್ತವೆ. ಹಿಂದಿನ ಸರ್ಕಾರಗಳು ಆರಂಭಿಸಿದ್ದ ಕಾಮಗಾರಿಗಳನ್ನು ಮೋದಿ ಪೂರ್ಣಗೊಳಿಸಿ ಎಲ್ಲವನ್ನೂ ನಾನೇ ಮಾಡಿದ್ದೇನೆಂದು ಹೇಳಿಕೊಳ್ಳುತ್ತಿದ್ದಾರೆ. ರೈಲು ಸೇವೆಯನ್ನು ನಿಭಾಯಿಸಲಾಗದ ಮೋದಿ ಖಾಸಗೀಕರಣಗೊಳಿಸಿದ್ದಾರೆ. ಭಾರತೀಯ ರೈಲು ಸೇವೆಗೆ ಪ್ರತ್ಯೇಕವಾಗಿದ್ದ ಬಜೆಟ್ ಅನ್ನು ಪ್ರಮುಖ ಬಜೆಟ್‌ನೊಳಗೆ ವಿಲೀನಗೊಳಿಸಿ ಅದರ ಅಸ್ತಿತ್ವವನ್ನೇ ಗೌಣ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ. ರೈತರ ಮನೆಗಳು ಮತ್ತು ಭೂಮಿಯ ಸಮೀಕ್ಷೆ ನಡೆಸಿ ನಿಮ್ಮ ಮೇಲೆ ಪಾರಂಪರಿಕ ತೆರಿಗೆ ವಿಧಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಪ್ರತಿ ಕುಟುಂಬದ ಎಕ್ಸ್-ರೇಗಳನ್ನು ಹೊರತೆಗೆಯಲಾಗುವುದು. ಅಂದರೆ, ನಿಮ್ಮ ಎಲ್ಲ ಸಂಪತ್ತನ್ನು, ಇಂದು ನಿಮ್ಮ ಬಳಿ ಏನಿದೆಯೋ ಆ ಸಂಪತ್ತು ನೀವು ಸತ್ತಾಗ ನಿಮ್ಮ ಮಕ್ಕಳಿಗೆ ಬರುತ್ತದೆ. ಆದರೆ, ನೀವು ಸತ್ತ ನಂತರ ನಿಮ್ಮ ಸಂಪತ್ತು ಅರ್ಧ ನಿಮ್ಮ ಮಕ್ಕಳಿಗೆ ಸಿಕ್ಕಿದರೆ, ಇನ್ನರ್ಧ ಸಂಪತ್ತು ಸರ್ಕಾರದ ಪಾಲಾಗುತ್ತದೆ ಎಂಬುದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ” ಎಂದು ಜನರಿಗೆ ಹಸಿ ಸುಳ್ಳುಗಳನ್ನು ಹೇಳುವ ಮೂಲಕ ಅವರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಾಗಲಿ, ಕಾಂಗ್ರೆಸ್ ಭಾಷಣದಲ್ಲಾಗಲೀ ಎಲ್ಲೂ ಉಲ್ಲೇಖವಾಗಿಲ್ಲ.
“ನಾವು ತಾಯಂದಿರು ಮತ್ತು ಸಹೋದರಿಯರಿಗೆ ಶೌಚಾಲಯಗಳು, ಅನಿಲ, ವಿದ್ಯುತ್ ಮತ್ತು ನೀರನ್ನು ಒದಗಿಸಿದ್ದೇವೆ. ನಾವು ಉಚಿತ ಪಡಿತರ ಮತ್ತು ಉಚಿತ ಚಿಕಿತ್ಸೆಯನ್ನು ಖಾತರಿಪಡಿಸಿದ್ದೇವೆ. ನಿಮ್ಮ ಧರ್ಮ ಯಾವುದು? ಜಾತಿ ಯಾವುದು? ನೀವು ದೇವಾಲಯಗಳಿಗೆ ಹೋಗುತ್ತೀರಾ ಅಥವಾ ಮಸೀದಿಗಳಿಗೆ ಹೋಗುತ್ತೀರಾ? ಎಂದು ಕೇಳದೆ ಅರ್ಹರಾದ ಪ್ರತಿಯೊಬ್ಬರಿಗೂ ನೀಡಿದ್ದೇವೆ. ಇದು ನಿಜವಾದ ಜಾತ್ಯತೀತತೆ, ಇದು ನಿಜವಾದ ಸಾಮಾಜಿಕ ನ್ಯಾಯ. ತಾಯಂದಿರು ಮತ್ತು ಸಹೋದರಿಯರ ಹೆಸರಿನಲ್ಲಿ ನಾವು ಬಡವರಿಗೆ ಪಕ್ಕಾ ಮನೆಗಳನ್ನು ನಿರ್ಮಿಸಿದ್ದೇವೆ. ಆದರೆ, ಭಾರತ-ಮೈತ್ರಿಕೂಟವು ತನ್ನೆಲ್ಲ ಶಕ್ತಿಯನ್ನು ತುಷ್ಟೀಕರಣಕ್ಕಾಗಿ ಮಾತ್ರ ವಿನಿಯೋಗಿಸುತ್ತಿದೆ” ಎಂದು ಮತ್ತಷ್ಟು ಸುಳ್ಳುಗಳನ್ನು ಹೇಳಿದ್ದಾರೆ.
“ದೇಶಾದ್ಯಂತ ಪ್ರತಿ ಕುಟುಂಬದ ಆದಾಯ ಮತ್ತು ಆಸ್ತಿಯನ್ನು ಸಮೀಕ್ಷೆ ಮಾಡುವುದಾಗಿ ಕಾಂಗ್ರೆಸ್ ಹೇಳಿದೆ. ನೀವು ಕೆಲವು ಸಣ್ಣ ಉಳಿತಾಯಗಳು, ಅಂಗಡಿಗಳು, ಮನೆಗಳನ್ನು ಸಂಪಾದಿಸಿದ್ದೀರಿ. ಅವುಗಳಿಗೆ ನೀವು ಮಾಲೀಕರು, ಅದು ನಿಮ್ಮ ಸಂಪತ್ತು ಅದನ್ನು ಕಾಂಗ್ರಸ್ ಕಿತ್ತುಕೊಳ್ಳಲು ನೋಡುತ್ತಿದೆ” ಎಂದು ಮೋದಿ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಪುಂಗುತ್ತಿದ್ದಾರೆ.
“ರೈತರ ಮನೆಗಳು ಮತ್ತು ಭೂಮಿಯ ಸಮೀಕ್ಷೆ ನಡೆಸಿ ನಿಮ್ಮ ಮೇಲೆ ಪಾರಂಪರಿಕ ತೆರಿಗೆ(Legacy Tax) ವಿಧಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ನಿಮ್ಮ ಸ್ವಂತ ಪರಿಶ್ರಮದಿಂದ ನಿರ್ಮಿಸಲಾದ ನಿಮ್ಮ ಮನೆ, ಹೊಲ, ಕೊಟ್ಟಿಗೆ, ಅಂಗಡಿಯನ್ನು ಈಗ ನೀವು ಹೊಂದಿದ್ದೀರಿ. ಕಾಂಗ್ರೆಸ್ ಸರ್ಕಾರ ರಚನೆಯಾದರೆ, ನೀವು ಹಳ್ಳಿಯಲ್ಲಿ 4 ಕೋಣೆಗಳ ಮನೆಯನ್ನು ಹೊಂದಿದ್ದರೆ, ನಿಮ್ಮ ನಂತರ ನಿಮ್ಮ ಮಗುವಿಗೆ ಕೇವಲ 2 ಕೋಣೆಗಳು ಸಿಗುತ್ತವೆ. ಒಬ್ಬ ರೈತನಿಗೆ 10 ಎಕರೆ ಭೂಮಿ ಇದ್ದರೆ, ಅವರ ಮಕ್ಕಳಿಗೆ ಕೇವಲ 5 ಎಕರೆ ಭೂಮಿ ನೀಡಲಾಗುತ್ತದೆ ಉಳಿದ ಸಂಪತ್ತು ಸರ್ಕಾರದ ಪಾಲಾಗುತ್ತದೆ” ಎಂದು ಮೋದಿ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ.
“ಯುವಜನರಿಗೆ ಗರಿಷ್ಠ ಹೊಸ ಅವಕಾಶಗಳನ್ನು ನೀಡುವುದು ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದು ಎನ್‌ಡಿಎ ಆದ್ಯತೆಯಾಗಿದೆ. ಎನ್‌ಡಿಎ ಸರ್ಕಾರವು ಮುದ್ರಾ ಯೋಜನೆ ಮತ್ತು ಸ್ಟಾರ್ಟ್ ಅಪ್ ಯೋಜನೆಯ ಮೂಲಕ ಯುವಕರಿಗೆ ಲಕ್ಷಾಂತರ ರೂಪಾಯಿಗಳ ನೆರವು ನೀಡುತ್ತಿದೆ. ದೇಶದ ಯುವಕರು ತಮ್ಮದೇ ಆದ ಸ್ಟಾರ್ಟ್ ಅಪ್‌ಗಳನ್ನು ಪ್ರಾರಂಭಿಸಬೇಕು, ತಮ್ಮದೇ ಆದ ಕಂಪನಿಗಳನ್ನು ತೆರೆಯಬೇಕು, ಅವರ ಇಚ್ಛೆಗೆ ಅನುಗುಣವಾಗಿ ಕೆಲಸ ಮಾಡಲು ಪ್ರಾರಂಭಿಸಬೇಕು ಎಂಬುದು ಇದರ ಉದ್ದೇಶವಾಗಿದೆ” ಎಂದು ಸುಳ್ಳು ಭಾಷಣ ಬಿಗಿಯುತ್ತಿರುವ ಮೋದಿ, ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಹತ್ತು ವರ್ಷಗಳೇ ಗತಿಸಿವೆ. ನಿರುದ್ಯೋಗದ ಸಂಖ್ಯೆ ದಿನದಿಂದ ದಿನಕ್ಕೇ ಹೆಚ್ಚುತ್ತಲೇ ಇದೆ.
“ನಮ್ಮ ದೇಶದ ಸಂವಿಧಾನವನ್ನು ಬರೆದ ಬಾಬಾ ಅಂಬೇಡ್ಕರ್ ಅವರಿಗೆ ವಿರುದ್ಧವಾಗಿ, ಅವರ ಯೋಜನೆ ಮತ್ತು ಆಲೋಚನೆಗಳಿಗೆ ವಿರುದ್ಧವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಮಾದರಿ ಸೃಷ್ಟಿಸಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ತರಲು ಪ್ರಯತ್ನಿಸಿ, ಇಲ್ಲಿರುವ ನನ್ನ ಒಬಿಸಿ ಸಮುದಾಯದ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ಕೊಡಲು ಕಾಂಗ್ರೆಸ್ ಹೊರಟಿದೆ” ಎಂದು ಹೇಳಿ ಕೋಮುದ್ವೇಷ ಸೃಷ್ಟಿಸುವ ಸುಳ್ಳುಗಳನ್ನಾಡಿದ್ದಾರೆ.
“ಬಿಹಾರದಲ್ಲಿಯೂ ಕರ್ನಾಟಕದ ಮಾದರಿಯ ಮೀಸಲಾತಿಯನ್ನು ಕಾಂಗ್ರೆಸ್ ಜಾರಿಗೆ ತರಲು ಹೊರಟಿದೆ. ಇಲ್ಲಿ ಯಾದವರು, ಮಂಡಲಗಳು, ಕುರ್ಮಿಗಳು, ಕುಶ್ವಾಹರು, ನಿಷಾದ್ ಅಥವಾ ಅಂತಹ ಎಲ್ಲ ಹಿಂದುಳಿದ ಜಾತಿಗಳಾಗಿರಬಹುದು, ಈಗ ತಮಗೆ ದೊರೆತ ಮೀಸಲಾತಿಯನ್ನು ಕಾಂಗ್ರೆಸ್ ಲೂಟಿ ಮಾಡಿ ಧಮದ ಹೆಸರಿನಲ್ಲಿ ವಿತರಿಸುತ್ತಾರೆ” ಎಂದು ಮೋದಿ ಸುಳ್ಳು ಹೇಳಿದ್ದಾರೆ.
ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ, ಅವಕಾಶ ವಂಚಿತರಾದವರಿಗೆ ಮೀಸಲಾತಿ ಕೊಡಬೇಕೆಂದು ಸಂವಿಧಾನ ಹೇಳಿದೆ. ನರೇಂದ್ರ ಮೋದಿಯವರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ತಿದ್ದುಪಡಿ ಮಾಡಿ ಅವರಿಗೂ 10% ಮೀಸಲಾತಿ ನೀಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚನೆ ಮಾಡಿರುವ ಮೂಲ ಸಂವಿಧಾನದಲ್ಲಿ ಅದು ಇಲ್ಲ. ಆದರೂ ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿ ನೀಡಿದೆ.
ಇದನ್ನೂ ಓದಿದ್ದೀರಾ? ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ; ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಮೋದಿ ಮತಬೇಟೆ
ಹಿಂದುಳಿದ ವರ್ಗಗಳ ಮೀಸಲಾತಿ(ಒಬಿಸಿ) ಪಟ್ಟಿಗೆ ಮುಸ್ಲಿಮರ ಸೇರ್ಪಡೆಯು ಮಂಡಲ್ ವರದಿಯನ್ನು ಆಧರಿಸಿ 30 ವರ್ಷಗಳ ಹಿಂದೆಯೇ ಆಗಿದೆ. ಇದನ್ನು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಕೂಡ ಒಪ್ಪಿಕೊಂಡಿದೆ. ಈ ಸತ್ಯ ಮರೆಮಾಚಿ ನಮ್ಮ ಸರ್ಕಾರದ ವಿರುದ್ಧ ಪತ್ರಿಕೆಗಳಲ್ಲಿ ಬಿಜೆಪಿ ಸುಳ್ಳು ಜಾಹೀರಾತು ನೀಡುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ.
ಮುಸಲ್ಮಾನರಿಗೆ ಕಳೆದ 30 ವರ್ಷದಿಂದ ಮೀಸಲಾತಿ ಜಾರಿಯಲ್ಲಿದೆ. ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಲು ಮುಸಲ್ಮಾನರಿಗಿದ್ದ ಮೀಸಲಾತಿಯನ್ನು ತೆಗೆದು ಹಾಕಿದರು. ಮುಸಲ್ಮಾನರಿಗೆ ನೀಡಿದ ಮೀಸಲಾತಿ ಧರ್ಮಾಧಾರಿತ ಅಲ್ಲ, ಸಂವಿಧಾನದ ಆರ್ಟಿಕಲ್ 15 ಹಾಗೂ 16 ನಂತೆ ನೀಡಲಾಗಿದೆ. ಬಸವರಾಜ ಬೊಮ್ಮಾಯಿಯವರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ, ಮುಸಲ್ಮಾನರಿಗೆ ನೀಡುವ ಮೀಸಲಾತಿಯನ್ನು ಮುಂದುವರೆಸುವುದಾಗಿ ಮುಚ್ಚಳಿಕೆಯನ್ನು ಕೂಡ ಬರೆದುಕೊಟ್ಟರು. ನರೇಂದ್ರ ಮೋದಿಯವರ ಹೇಳಿಕೆ ಹಾಗೂ ಬಿಜೆಪಿ ಪರ ಇರುವ ಜಾಹೀರಾತು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.