ಮಧ್ಯಪ್ರದೇಶದ ಧಾರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಕಾಂಗ್ರೆಸ್ ಪಕ್ಷ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ವಿಜಯವನ್ನು ಸಾಧಿಸಲಿದೆ. ಈ ದಿನ(ಜೂನ್ 4)ಕ್ಕೆ ಕೇವಲ ಒಂದು ತಿಂಗಳು ಉಳಿದಿದೆ. ಇಂದು ಮೂರನೇ ಹಂತದ ಮತದಾನ ನಡೆಯುತ್ತಿದೆ. ಮೊದಲ ಹಂತದಲ್ಲಿ ಪ್ರತಿಪಕ್ಷಗಳು ಸೋಲನುಭವಿಸಿದವು. ಎರಡನೇ ಹಂತದಲ್ಲಿ ವಿರೋಧ ಪಕ್ಷಗಳನ್ನು ಸೋಲಿಸಲಾಯಿತು. ಇಂದು ಮೂರನೇ ಹಂತದ ಮತದಾನದ ನಂತರ, ಪ್ರತಿಪಕ್ಷಗಳ ಸೂರ್ಯ ಮುಳುಗುವುದು ಖಚಿತ. ಏಕೆಂದರೆ ಇಡೀ ದೇಶವೇ ಫಿರ್ ಏಕ್ ಬಾರ್, ಮೋದಿ ಸರ್ಕಾರ್ ಎಂದು ನಿರ್ಧರಿಸಿದೆ” ಎಂದು ಭ್ರಮೆಯ ಸುಳ್ಳುಗಳನ್ನು ಹೇಳುತ್ತಿದ್ದಾರೆ.
ಮಧ್ಯಪ್ರದೇಶದಲ್ಲಿ ಕೃಷಿ ಸಾಲ ಮನ್ನಾ ಮಾಡುವ ಭರವಸೆಯನ್ನು ಬಿಜೆಪಿ ಈಡೇರಿಸಿಲ್ಲ. ಇಲ್ಲಿಯ ‘ಡಬಲ್ ಎಂಜಿನ್’ ಸರ್ಕಾರ ಪಶು ಆಹಾರವನ್ನು ಪಡಿತರವಾಗಿ ವಿತರಿಸುತ್ತಿದೆ. ಎಫ್‌ಆರ್‌ಎ ಅಡಿಯಲ್ಲಿ ಆದಿವಾಸಿಗಳಿಗೆ ಅವರ ಹಕ್ಕುಗಳನ್ನು ನೀಡಲು ಸಂಸದರು ವಿಫಲರಾಗಿದ್ದಾರೆ. ಆದರೂ ಕೂಡಾ ಮೋದಿ ದೇಶಾದ್ಯಂತ ವಿಪಕ್ಷಗಳ ಮೇಲೆ ದ್ವೇಷ ಉಂಟುಮಾಡುವಂತಹ ಭಾಷಣಗಳನ್ನು ಮಾಡುತ್ತಾ ಸುಳ್ಳಿನ ಮಳೆಯನ್ನೇ ಸುರಿಸುತ್ತಿದ್ದಾರೆ. ಭಂಡತನ ಮೆರೆಯುತ್ತಿದ್ದಾರೆ.
“ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನ ಭಾರತದ ಪ್ರಗತಿಗೆ ಮಹತ್ವದ ಕೊಡುಗೆಗಳನ್ನು ನೀಡಿದೆ. ಸಂವಿಧಾನ ರಚನೆಯಲ್ಲಿ ಬಾಬಾ ಸಾಹೇಬ್ ಅವರ ಪಾತ್ರವನ್ನು ಕಡಿಮೆ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಅಲ್ಲದೆ ತಮ್ಮ ಲಾಭಕ್ಕಾಗಿ ಇತಿಹಾಸವನ್ನು ತಿರುಚುತ್ತಿದ್ದಾರೆ” ಎಂದು ಹೊಸ ಸುಳ್ಳುಗಳನ್ನು ಸೃಷ್ಟಿಮಾಡುತ್ತಿದ್ದಾರೆ.
“ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟದ ಪಿತೂರಿಗಳನ್ನು ತಡೆಯಲು ಮೋದಿಗೆ 400 ಸ್ಥಾನಗಳು ಬೇಕಾಗುತ್ತವೆ. ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರಳಿ ತರಲು ಕಾಂಗ್ರೆಸ್‌ಗೆ ಸಾಧ್ಯವಾಗದಂತೆ ತಡೆಯಲು ಹಾಗೂ ಅಯೋಧ್ಯೆಯಲ್ಲಿ ರಾಮ ಮಂದಿರದ ಬಾಗಿಲನ್ನು ಮುಚ್ಚದಂತೆ ತಡೆಯಲು ಮೋದಿಗೆ 400 ಸ್ಥಾನಗಳ ಅಗತ್ಯವಿದೆ” ಎಂದು ವಿಪಕ್ಷದ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ.
ಈ ಹಿಂದೆ ಬಿಜೆಪಿ ನಾಯಕರು, ʼಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರದು ಯಾವುದೇ ಪಾತ್ರವಿಲ್ಲʼ. ಸಂವಿಧಾನವನ್ನು ಬದಲಿಸಲೇ ನಾವು ಅಧಿಕಾರಕ್ಕೆ ಬಂದಿದ್ದೇವೆಂದು ಉದ್ದುದ್ದ ಭಾಷಣ ಬಿಗಿಯುತ್ತಿದ್ದಾಗ ನಮ್ಮ ಪ್ರಧಾನಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಉಸಿರೆತ್ತಲಿಲ್ಲ. ಮಾದರಿ ನೀತಿ ಸಂಹಿತೆ ಆರಂಭಕ್ಕೂ ಮೊದಲು ರಾಜಸ್ಥಾನದ ನಾಗೌರ್‌ನಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ಮಾತನಾಡಿ, ʼಸಂವಿಧಾನವನ್ನು ಬದಲಾಯಿಸಲು ನಮಗೆ ಉಭಯ ಸದನಗಳಲ್ಲಿ ಅತ್ಯಧಿಕ ಬಹುಮತ ಬೇಕುʼ ಎಂದಿದ್ದರು. ʼಲೋಕಸಭೆ ಚುನಾವಣೆಯಲ್ಲಿ 400 ಸ್ಥಾನ ಪಡೆದರೆ ಸಂವಿಧಾನ ಬದಲಿಸುತ್ತೇವೆʼ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಕೂಡ ಹೇಳಿದ್ದರು. ಇಂತಹ ಸಂದರ್ಭದಲ್ಲಿ ತುಟಿ ಬಿಚ್ಚದ ಮೋದಿ ಇದೀಗ ಬಹುಸಂಖ್ಯಾತರ ಮತಕ್ಕಾಗಿ ಮುಗಿ ಬಿದ್ದಿದ್ದಾರೆ. ಅಂಬೇಡ್ಕರ್ ಹೆಸರು ಮತ್ತು ಫೋಟೋಗಳನ್ನು ಜಾಹೀರಾತು ನೀಡುವ ಮೂಲಕ ಚುನಾವಣಾ ವ್ಯಾಪಾರ ಮಾಡುತ್ತಿದ್ದಾರೆ.
“ಬಡವರು ಮತ್ತು ಅಂಚಿನಲ್ಲಿರುವ ಸಮುದಾಯಗಳ ಕಲ್ಯಾಣವೇ ನಮ್ಮ ಬದ್ಧತೆಯಾಗಿದೆ. ಭಾರತವನ್ನು ಸಮೃದ್ಧಗೊಳಿಸುವ ಧ್ಯೇಯದಲ್ಲಿ ಮೋದಿ ಇದ್ದಾರೆ. ಆದಿವಾಸಿ ಮಗಳನ್ನು ರಾಷ್ಟ್ರಪತಿಯನ್ನಾಗಿ ಮಾಡಲು, ಸಂಸತ್‌ನಲ್ಲಿ ಮಹಿಳಾ ಮೀಸಲಾತಿಗೆ 400 ಸ್ಥಾನಗಳ ಅಗತ್ಯವಿದೆ” ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ.
ಇದನ್ನೂ ಓದಿದ್ದೀರಾ? ಮೋದಿಯ ಇಂದಿನ ಸುಳ್ಳುಗಳು | ಒಡಿಶಾದಲ್ಲಿ ಮೋದಿ ಡಬಲ್ ಎಂಜಿನ್ ಸರ್ಕಾರ ರಚಿಸುತ್ತಾರೆಯೇ?
“ಬಿಜೆಪಿ ಕೇಂದ್ರ ಬಜೆಟ್‌ನಲ್ಲಿ ಆದಿವಾಸಿಗಳಿಗೆ 2017ರ ನೀತಿ ಆಯೋಗ ನಿಗದಿಪಡಿಸಿದ ಶೇ.8.2ರ ಗುರಿಗಿಂತ ಕಡಿಮೆಯಾಗಿದೆ. ಮಧ್ಯಪ್ರದೇಶದಲ್ಲಿ ಬುಡಕಟ್ಟು ಕಲ್ಯಾಣಕ್ಕಾಗಿ 3 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ನೀಡಿದ್ದ ಚುನಾವಣಾ ಭರವಸೆ ಈವರೆಗೆ ಈಡೇರಿಲ್ಲ.
“ಝಾಬುವಾದಲ್ಲಿ ಪ್ರಧಾನಿಯವರ ರ್ಯಾಲಿಯ ನಂತರ, ಬಿಜೆಪಿ ಕಾರ್ಯಕರ್ತರು ಬೆತುಲ್‌ನಲ್ಲಿ ಆದಿವಾಸಿ ಯುವಕನನ್ನು ಕ್ರೂರವಾಗಿ ಥಳಿಸುತ್ತಿರುವುದು ಕಂಡುಬಂದಿದೆ. ಕಳೆದ ವರ್ಷ, ಬಿಜೆಪಿ ನಾಯಕರೊಬ್ಬರು ಆದಿವಾಸಿ ವ್ಯಕ್ತಿಯ ಮೇಲೆ ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸುವ ಆತಂಕಕಾರಿ ವೀಡಿಯೊ ಕೂಡಾ ವೈರಲ್ ಆಗಿತ್ತು. ಮೋದಿ ಕಾ ಪರಿವಾರದಲ್ಲಿ ಆದಿವಾಸಿ ಸಮುದಾಯಕ್ಕೆ ಯಾವುದೇ ಸ್ಥಾನವಿಲ್ಲ ಎಂಬುದು ಸ್ಪಷ್ಟವಾಗಿದೆ. ಇಂತಹುವುಗಳನ್ನು ಖಂಡಿಸದ ಮೋದಿ. ವೋಟ್ ಬ್ಯಾಂಕ್‌ಗಾಗಿ ಅಂಚಿನಲ್ಲಿರುವ ಸಮುದಾಯಗಳ ಧ್ಯೇಯದ ಬದ್ಧತೆಯ ಬಗ್ಗೆ ನಾಚಿಕೆ ಇಲ್ಲದೆ ಮಾತನಾಡುತ್ತಿದ್ದಾರೆ.