ಮೋದಿಯ ಇಂದಿನ ಸುಳ್ಳುಗಳು | ಒಡಿಶಾದಲ್ಲಿ ಮೋದಿ ಡಬಲ್‌ ಎಂಜಿನ್‌ ಸರ್ಕಾರ ರಚಿಸುತ್ತಾರೆಯೇ?

Date:

Advertisements

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಒಡಿಶಾದ ಬೆರ್‌ಹಾಂಪುರದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ “ಇಂದು, ನಮ್ಮ ರಾಮ್ ಲಲ್ಲಾನನ್ನು ಭವ್ಯವಾದ ರಾಮ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದು ನಿಮ್ಮ ಒಂದು ಮತದಿಂದ ಅದು ಸಾಧ್ಯವಾಗಿದೆ. ಇಂತಹ ಕ್ಷಣಕ್ಕಾಗಿ 500 ವರ್ಷಗಳವರೆಗೆ ಕಾಯಬೇಕಾಯಿತು” ಎಂದು ಸಾಂಸ್ಕೃತಿಕ ಯಜಮನಿ ಭಾಷಣಗಳಿಂದ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ದೇಶದಲ್ಲಿ ಮೋದಿ ಆಡಳಿತದ ಹತ್ತು ವರ್ಷದಲ್ಲಿ ಭ್ರಷ್ಟಾಚಾರ, ಅತ್ಯಾಚಾರ, ಬೆಲೆ ಏರಿಕೆ, ಬಡತನ, ನಿರುದ್ಯೋಗ, ಕಾನೂನು ಅವ್ಯವಸ್ಥೆಗಳಂತಹ ಸಮಸ್ಯೆಗಳು ಸೇರಿದಂತೆ ಅಂಧಕಾರ ಆವರಿಸುತ್ತಿದ್ದು,  ಸರ್ವಾಧಿಕಾರ ತಲೆಯೆತ್ತುವತ್ತ ಸಾಗಿದೆ. ಇಂತಹ ಸಮಸ್ಯೆಗಳಿಗೆ ಸ್ಪಂದಿಸದ ಮೋದಿ ರಾಮ್ ಲಲ್ಲಾನನ್ನು ಮುಂದೆ ತಂದು, ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿದ್ದಾರೆ.

“ಈ ಬಾರಿ ಒಡಿಶಾದಲ್ಲಿ ಎರಡು ಸಮಾರಂಭಗಳು ಏಕಕಾಲದಲ್ಲಿ ನಡೆಯುತ್ತಿವೆ. ಒಂದು ಸಮಾರಂಭವು ದೇಶದಲ್ಲಿ ಬಲವಾದ ಸರ್ಕಾರವನ್ನು ರಚಿಸುವುದು ಮತ್ತು ಇನ್ನೊಂದು ಸಮಾರಂಭವೆಂದರೆ ಒಡಿಶಾದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ರಚಿಸುವುದು. ಮತ್ತು ಒಡಿಶಾದಲ್ಲಿ ಮೊದಲ ಬಾರಿಗೆ ಡಬಲ್ ಎಂಜಿನ್ ಸರ್ಕಾರವಾದ ನಿಮ್ಮ ಉತ್ಸಾಹದಲ್ಲಿ ಅದೇ ಭಾವನೆ, ಅದೇ ಉತ್ಸಾಹವನ್ನು ನಾನು ನೋಡುತ್ತಿದ್ದೇನೆ” ಎಂದು ಪ್ರಧಾನಿ ಹೇಳಿದ್ದಾರೆ.

Advertisements

ಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಸರ್ಕಾರವಿದ್ದಾಗ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ. ಅಭಿವೃದ್ಧಿಗೆ ಮಾಡಬೇಕಿದ್ದ ವೆಚ್ಚಗಳು ಬಹುಶಃ ಕಾಮಗಾರಿಗೆ ಚಾಲನೆ ನೀಡಲು ಮೋದಿ ಆಗಮನಕ್ಕೆ ಹೆಚ್ಚು ವೆಚ್ಚವಾಗಿರಬಹುದು. ಬಿಜೆಪಿ ಸರ್ಕಾರವಿದ್ದಾಗ ಇದ್ದ ಡಬಲ್‌ ಎಂಜಿನ್‌ ಸರ್ಕಾರದ ಯಾವುದೇ ಯೋಜನೆಗಳು ಈವರೆಗೆ ಪೂರ್ಣಗೊಂಡಿಲ್ಲ. ಪೂರ್ಣವಾಗಿದ್ದಲ್ಲಿ ಕಾರ್ಯರೂಪದಲ್ಲಿಲ್ಲ. ಇದು ಮೋದಿಯ ಡಬಲ್‌ ಎಂಜಿನ್‌ ಸರ್ಕಾರದ ಸಾಧನೆ.

ಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಸರ್ಕಾರದ ಭ್ರಷ್ಟಾಚಾರದಿಂದಾಗಿ ಇಬ್ಬರು ಮುಖ್ಯಮಂತ್ರಿಗಳು ಆಡಳಿತ ನಡೆಸಿದರು. ಕೇಂದ್ರದಿಂದ ಆಗಬೇಕಾದಂತಹ ಯಾವುದೇ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ನಡೆಯಲಿಲ್ಲ. ರಾಯಚೂರು ಜಿಲ್ಲೆಗೆ ಏಮ್ಸ್‌ ನೀಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಯಿತು, ಏಮ್ಸ್‌ ಮಂಜೂರು ಮಾಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಹಲವು ಬಾರಿ ಪತ್ರ ಬರೆದೂ ಕೂಡ ಆಗಿದೆ. ಹೈದರಾಬಾದ್ ಕರ್ನಾಟಕದ ಸಚಿವರು, ಸಂಸದರು ಮತ್ತು ಶಾಸಕರ ನಿಯೋಗ ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವೀಯ ಅವರಿಗೆ ಮನವಿ ಕೂಡ ಮಾಡಿದ್ದಾರೆ. ಸಂಘ- ಸಂಸ್ಥೆಗಳು ಬೆಂಬಲ ನೀಡಿದ್ದು, ಏಮ್ಸ್‌ ಮಂಜೂರಾಗುವ ತನಕ ಹೋರಾಟ ನಿಲ್ಲಿಸುವುದಿಲ್ಲವೆಂದು ಹೇಳಿದ್ದರು. ಆದರೂ ಕೂಡಾ ಕರ್ನಾಟಕದಲ್ಲಿ ಈವರೆಗೂ ಏಮ್ಸ್ ಸ್ಥಾಪನೆಯಾಗಿಲ್ಲ. ಇದೇ ಮೋದಿಜಿ ಡಬಲ್‌ ಎಂಜಿನ್‌ ಸರ್ಕಾರದ ಸಾಧನೆ.

“ಒಡಿಶಾದಲ್ಲಿ ಕಾಂಗ್ರೆಸ್ ಪಕ್ಷವು ಸುಮಾರು 50 ವರ್ಷಗಳ ಕಾಲ ಆಡಳಿತ ನಡೆಸಿತು, ನಂತರ 25 ವರ್ಷಗಳ ಬಿಜೆಡಿ ಸರ್ಕಾರವನ್ನು ಆಳಿತು. ಆದರೆ ಏನಾಯಿತು? ಒಡಿಶಾದಲ್ಲಿ ನೀರು, ಫಲವತ್ತಾದ ಭೂಮಿ, ಭೂಮಿಯ ಕೆಳಗೆ ಖನಿಜಗಳ ನಿಧಿ ಇದೆ. ಇಷ್ಟು ಉದ್ದವಾದ ಕರಾವಳಿ ಇದ್ದು, ಬೆರ್‌ಹಾಂಪುರದಂತಹ ವ್ಯಾಪಾರ ಕೇಂದ್ರಗಳಿವೆ. ಇದು ಸಿಲ್ಕ್ ಸಿಟಿ ಮತ್ತು ಆಹಾರ ರಾಜಧಾನಿಯೂ ಹೌದು. ಇಲ್ಲಿ, ಇತಿಹಾಸ, ಸಂಸ್ಕೃತಿಯ ಪರಂಪರೆಯೂ ಇದೆ. ಅಂತಹ ಶ್ರೀಮಂತಿಕೆಯ ಹೊರತಾಗಿಯೂ ಒಡಿಶಾದ ಜನರು ಬಡವರಾಗಿಯೇ ಉಳಿದಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಡಿ ಎರಡೂ ಪಕ್ಷಗಳ ನಾಯಕರು ರಾಜ್ಯವನ್ನು ಲೂಟಿ ಮಾಡಿದ್ದಾರೆ” ಎಂದು ಬಂಡಲ್‌ ಬಿಡುತ್ತಾ ಮತದಾರರ ತಲೆಯನ್ನು ಪ್ರಧಾನಿ ಮೋದಿ ಸವರುತ್ತಿದ್ದಾರೆ.

“ಬಿಜೆಡಿ ರಾಜ್ಯವನ್ನು ಹೊರಗಿನವರಿಗೆ ಮಾರಾಟ ಮಾಡಿದೆ. ಅರಣ್ಯ ಭೂಮಿ ಮತ್ತು ಬೆಲೆಬಾಳುವ ಭೂಮಿಯನ್ನು ಬಿಜೆಪಿಗೆ ಉಡುಗೊರೆಯಾಗಿ ನೀಡಿದೆ. ಪಿಪಿಪಿ (ಖಾಸಗಿ-ಸಾರ್ವಜನಿಕ ಸಹಭಾಗಿತ್ವ)ಯಂತೆ, ಪಾಂಡಿಯನ್-ಪ್ರಧಾನ್ ಆಯೋಗ(ಪಿಪಿಸಿ) ರಾಜ್ಯವನ್ನು ನಡೆಸುತ್ತಿದೆ. ಬಿಜೆಪಿಯ ಭ್ರಷ್ಟಾಚಾರ ಹೆಚ್ಚಳವಾಗಿದ್ದು, ನಿರುದ್ಯೋಗ, ಬೆಲೆ ಏರಿಕೆ, ಕಾನೂನು ಸುವ್ಯವಸ್ಥೆ ಸಮಸ್ಯೆಗಳು ತಲೆದೋರಿವೆ” ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

“ಬಿಜೆಡಿ ಮತ್ತು ಬಿಜೆಪಿ ಸಹೋದರರಂತೆ ರಾಜ್ಯದ ಖನಿಜ ಸಂಪನ್ಮೂಲಗಳನ್ನು ಲೂಟಿ ಮಾಡುತ್ತಿವೆ. ಬಿಜೆಪಿ ಏನು ಸೂಚನೆ ನೀಡುತ್ತಿದೆಯೋ ಅದನ್ನು ಬಿಜೆಡಿ ಮಾಡುತ್ತಿದೆ. ಅಶ್ವಿನಿ ವೈಷ್ಣವ್ ಅವರನ್ನು ಆಯ್ಕೆ ಮಾಡಲು ಬಿಜೆಡಿ ಮತ್ತೆ ಬಿಜೆಪಿಗೆ ಒಂದು ರಾಜ್ಯಸಭಾ ಸ್ಥಾನವನ್ನು ನೀಡಿದೆ” ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಆರೋಪಿಸಿದ್ದರು.

ಅದರೆ, ಬಿಜೆಪಿಯೊಂದಿಗಿನ ಮೈತ್ರಿಗೆ ಬಿಜೆಡಿ ಒಪ್ಪದ ಕಾರಣ ಸುಳ್ಳಿನ ಸರದಾರ ಎಂದೆನಿಸಿಕೊಂಡಿರುವ ಪ್ರಧಾನಿಯವರು‌ ಮತಬ್ಯಾಂಕ್‌ಗಾಗಿ ಬಿಜೆಡಿ-ಕಾಂಗ್ರೆಸ್ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಒಡಿಶಾ ಜನರಲ್ಲಿ ಹೊಸ ಭರವಸೆಗಳ ಆಮಿಷ ಒಡ್ಡುತ್ತಿದ್ದಾರೆಯೇ ಹೊರತು ಮೋದಿಜಿ ದೇಶ ಲೂಟಿ ಮಾಡಿರುವ ಕುರಿತು ಎಲ್ಲಿಯೂ ಬಾಯಿ ಬಿಡುವುದೇ ಇಲ್ಲ. ಕಾಂಗ್ರೆಸ್‌ ಕಾಲದಲ್ಲಿ ಕಟ್ಟಿದ ಸಂಸ್ಥೆಗಳನ್ನೆಲ್ಲ ಮಾರಾಟ ಮಾಡುತ್ತಿರುವುದೇ ಇವರ ಸಾಧನೆ.

“ಆಯುಷ್ಮಾನ್ ಭಾರತ್ ಯೋಜನೆಯು ದೇಶಾದ್ಯಂತ 6 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನವನ್ನು ನೀಡಿದ್ದರೂ, ಬಿಜೆಡಿಯ ನಿರ್ಲಕ್ಷ್ಯದಿಂದಾಗಿ ಒಡಿಶಾದ ಜನರು ವಂಚಿತರಾಗಿದ್ದಾರೆ. ಒಡಿಶಾದಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ 5 ಲಕ್ಷ ರೂ.ಗಳ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಅಂತಹ ಪ್ರಯೋಜನಗಳು ಜನರಿಗೆ ತಲುಪುವುದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಗತ್ಯವಿದೆ” ಎಂದು ಹೇಳಿದರು.

ಒಡಿಶಾದಲ್ಲಿ ಬಿಜು ಸ್ವಾಸ್ಥ್ಯ ಕಲ್ಯಾಣ್ ಯೋಜನೆ ಇದ್ದು, ಇದು ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ರಾಜ್ಯದ ಆರ್ಥಿಕವಾಗಿ ದುರ್ಬಲ ಕುಟುಂಬಗಳನ್ನು ಕೇಂದ್ರೀಕರಿಸುತ್ತದೆ. ಉಪಕೇಂದ್ರಗಳಿಂದ ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳವರೆಗೆ ಎಲ್ಲ ಸರ್ಕಾರಿ ಸೌಲಭ್ಯಗಳಲ್ಲಿನ ಆರೋಗ್ಯ ಸೇವೆಗಳ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತದೆ ಎಂಬುದಾಗಿ ಅಲ್ಲಿಯ ಸರ್ಕಾರ ತಿಳಿಸಿದೆ.

ರಾಜ್ಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಗೊತ್ತುಪಡಿಸಿದ ಖಾಸಗಿ ಆಸ್ಪತ್ರೆಗಳಲ್ಲಿನ ಆರೋಗ್ಯ ವೆಚ್ಚಗಳನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಈ ವ್ಯಾಪ್ತಿಯು ವಾರ್ಷಿಕವಾಗಿ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ಗಳವರೆಗೆ ವಿಸ್ತರಿಸುತ್ತದೆ. ಪ್ರಾಥಮಿಕ ಮಿತಿಯನ್ನು ತಲುಪಿದ ಬಳಿಕ ಮಹಿಳಾ ಸದಸ್ಯರಿಗೆ ಹೆಚ್ಚುವರಿ 5 ಲಕ್ಷ ರೂ.ಗೆ ಹಂಚಿಕೆ ಮಾಡಲಾಗುತ್ತದೆ. ಬಿಎಸ್‌ಕೆವೈ ಸ್ಥಾಪನೆಯಾದಾಗಿನಿಂದ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಹೊಸ ಹಂತವನ್ನು ಪ್ರಾರಂಭಿಸಿದ್ದು, ಮಾಸಿಕ 45 ಲಕ್ಷಕ್ಕೂ ಹೆಚ್ಚು ನಗದುರಹಿತ ಚಿಕಿತ್ಸೆಗೆ ಅನುಕೂಲ ಮಾಡಿಕೊಟ್ಟಿದೆ ಎನ್ನಲಾಗಿದೆ.

“ಒಡಿಶಾದಲ್ಲಿ ಜನಿಸಿದ ಮಗಳನ್ನು ದೇಶದ ಅತ್ಯುನ್ನತ‌ ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಹೆಮ್ಮೆಯಿಂದ ನೇಮಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಡಿಶಾದ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತಲೇ ಇದ್ದಾರೆ. ಇದಲ್ಲದೆ, ನಿಮ್ಮ ಪ್ರತಿನಿಧಿ ಕೂಡ ದೆಹಲಿಯಲ್ಲಿದ್ದಾರೆ. ಒಡಿಯಾ ಸಂಸ್ಕೃತಿಯಲ್ಲಿ ಬೇರೂರಿರುವ ಬಿಜೆಪಿ ಮುಖ್ಯಮಂತ್ರಿ ಒಡಿಶಾವನ್ನು ಮುನ್ನಡೆಸಿದಾಗ, ನಿಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲಾಗುತ್ತದೆ. ಒಡಿಶಾದ ಜನರು ಸೂರತ್ ಅನ್ನು ಹೇಗೆ ಪರಿವರ್ತಿಸಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ಆದ್ದರಿಂದ, ಒಡಿಶಾದ ಅಭಿವೃದ್ಧಿ ಮುಂದುವರಿಯುತ್ತದೆ” ಎಂದು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ.

ಹೆಸರಿಗೆ ಮಾತ್ರ ಮಹಿಳೆಯರಿಗೆ, ತಳಸಮುದಾಯದವರಿಗೆ ಅತ್ಯುನ್ನತ ಹುದ್ದೆ ನೀಡುತ್ತೇವೆಂದು ಬಡಾಯಿ ಕೊಚ್ಚಿಕೊಳ್ಳುವ ಪ್ರಧಾನಿ ಮೋದಿ, ದೇಶದ ಮೊದಲ ಪ್ರಜೆ ಎನಿಸಿಕೊಳ್ಳುವ ರಾಷ್ಟ್ರಪತಿಗಳನ್ನು ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸುವುದಿಲ್ಲ. ಅತ್ಯುನ್ನತ ಹುದ್ದೆಯ ಸ್ಥಾನದಲ್ಲಿದ್ದರೂ ಕೂಡಾ ಜಾತಿ, ಲಿಂಗಗಳ ಆಧಾರದ ಮೇಲೆ ರಾಷ್ಟ್ರಪತಿ ಹುದ್ದೆಯನ್ನು ಹತ್ತಿಕ್ಕಲಾಗುತ್ತಿದೆ. ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸೇರಿದಂತೆ ದ್ರೌಪದಿ ಮುರ್ಮು ಅವರನ್ನೂ ಕೂಡಾ ಯಾವುದೇ ಧಾರ್ಮಿಕ ಆಚರಣೆಗಳಿಗೆ ಆಹ್ವಾನಿಸಿಲ್ಲ. ಇದು ಮೋದಿ ಹೆಮ್ಮೆ. ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ದೇಶದ ನೂತನ ಸಂಸತ್ ಭವನವಾಗಿರುವ ಸೆಂಟ್ರಲ್ ವಿಸ್ಟಾದ ಉದ್ಘಾಟನೆಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನವೇ ಇರಲಿಲ್ಲ ಎಂಬುದು ವಾಸ್ತವ.

ಜೊತೆಗೆ, ರಾಮಮಂದಿರದ ಉದ್ಘಾಟನೆಗೆ ರಾಷ್ಟ್ರಪತಿಯವರ ಅಡಿಯಲ್ಲಿ ಕಾರ್ಯನಿರ್ವಹಿಸುವ ಉತ್ತರ ಪ್ರದೇಶದ ರಾಜ್ಯಪಾಲರಿಗೆ ಆಹ್ವಾನವಿತ್ತಾದರೂ, ದ್ರೌಪದಿ ಮುರ್ಮು ಅವರಿಗೆ ಆಹ್ವಾನವೇ ಇರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

“ತ್ರಿಪುರಾ, ಉತ್ತರ ಪ್ರದೇಶ, ಅಸ್ಸಾಂ ಮತ್ತು ಛತ್ತೀಸ್‌ಗಢದಂತಹ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರಕ್ಕೆ ಮರಳಿದ ನಂತರ ಅಭಿವೃದ್ಧಿಯನ್ನು ವೇಗಗೊಳಿಸಿವೆ. ಮೋದಿಯವರ ಭರವಸೆಯು ಉತ್ತಮ ಆಡಳಿತಕ್ಕೆ ಪಕ್ಷದ ಬದ್ಧತೆಯನ್ನು ಒತ್ತಿ ಹೇಳುತ್ತದೆ” ಎಂದು ಅವರು ಹೇಳಿದರು.

ಈಗಾಗಲೇ ಡಬಲ್‌ ಎಂಜಿನ್‌ ಸರ್ಕಾರವಿದ್ದ ಕರ್ನಾಟಕದ ಅಭಿವೃದ್ಧಿಯ ಕುರಿತು ತಿಳಿಸಲಾಗಿದೆ. ಅಂತೆಯೇ ಇತರೆ ರಾಜ್ಯಗಳ ಡಬಲ್‌ ಎಂಜಿನ್‌ ಸರ್ಕಾರದ ಪರಿಸ್ಥಿತಿಯೂ ಕೂಡಾ ಸರ್ವೇ ಸಾಮಾನ್ಯವಾಗಿರುತ್ತದೆ.

“ಒಡಿಶಾದ ಸಾಗರ ಸಾಮರ್ಥ್ಯವನ್ನು ಮತ್ತಷ್ಟು ಬಳಸಿಕೊಳ್ಳುವ ನಿಟ್ಟಿನಲ್ಲಿ ಮೋದಿ ಕೆಲಸ ಮಾಡುತ್ತಿದ್ದಾರೆ. ದೋಣಿಗಳ ಆಧುನೀಕರಣಕ್ಕೆ ನಾವು ಸಬ್ಸಿಡಿ ನೀಡಿದ್ದೇವೆ ಮತ್ತು ಮೀನುಗಾರರಿಗೆ ಹೊಸ ಉತ್ಪಾದನೆ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಸಹ ಶಕ್ತಗೊಳಿಸಿದ್ದೇವೆ. ಸಾಗರಮಾಲಾ ಯೋಜನೆಗೆ ಒಡಿಶಾ ಕೂಡ ದೊಡ್ಡ ಫಲಾನುಭವಿಯಾಗಿದೆ. ಈಗ, ಒಡಿಶಾ ಬಿಜೆಪಿ ಒಡಿಶಾವನ್ನು ದೇಶದ ಅಗ್ರ ಮೂರು ಪ್ರವಾಸೋದ್ಯಮ ರಾಜ್ಯಗಳಲ್ಲಿ ಸೇರಿಸಲು ನಿರ್ಧರಿಸಿದೆ. ಇದು ಇಲ್ಲಿನ ಯುವಜನರಿಗೆಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ” ಎಂದು ಬುರುಡೆ ಬಿಡುತ್ತಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ ವಿರುದ್ಧ ಮುಸುಕಿನ ಗುದ್ದಾಟ ನಡೆಸಿದ ಮೋದಿ, ವಿರೋಧ ಪಕ್ಷದ ನಾಯಕರು ಮಾಂಸಾಹಾರ ಸೇವಿಸುವ ಮೂಲಕ ದೇಶದ ಜನರಲ್ಲಿ “ಮೊಘಲ್ ಮನಸ್ಥಿತಿ” ಪ್ರದರ್ಶಿಸುತ್ತಿದ್ದಾರೆ. ಹಿಂದೂಗಳನ್ನು “ಗೇಲಿ” ಮಾಡುತ್ತಿದ್ದಾರೆ. ಪವಿತ್ರವಾದ ಶ್ರಾವಣ ತಿಂಗಳಲ್ಲಿ ಮಾಂಸಾಹಾರ ಸೇವಿಸುವ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗುತ್ತಿದೆ” ಎಂದು ಇದೇ ಮೋದಿ ಆರೋಪಿಸಿದ್ದರು.

ಇದೀಗ, ಮತಯಾಚನೆಗಾಗಿ ಮೀನುಗಾರರ ಅಭಿವೃದ್ಧಿ ಕುರಿತು ನರಿ ಉಪಾಯ ಮಾಡುತ್ತಿದ್ದಾರೆ. ಆಹಾರ ಸೇವನೆಗೆ ಧಾರ್ಮಿಕ ಮಾಸಗಳನ್ನು ಗುರುತಿಸುವ ಮೋದಿ, ಮೀನುಗಾರರ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ ಹೇಳಿರುವ ಎರಡು ತಿಂಗಳುಗಳು ಮೀನುಗಾರರು ವ್ಯಾಪಾರ ಮಾಡದೆ, ಉಪವಾಸ ಸಾಯಬೇಕೇ? ಹೀಗೆ ಮಾಡುವುದಾದರೆ, ಯಾವ ಸಂಪತ್ತಿಗೆ ಮೀನುಗಾರರ ಅಭಿವೃದ್ಧಿ ಎಂದೇಳಿಕೊಳ್ಳಬೇಕು?

ಇದನ್ನೂ ಓದಿದ್ದೀರಾ? ಮೋದಿಯ ಇಂದಿನ ಸುಳ್ಳುಗಳು | ಮುಂದಿನ 25 ವರ್ಷದಲ್ಲಿ ಅಭಿವೃದ್ಧಿಯೇ? ಅಧಃಪತನವೇ?

ಈ ಹಿಂದೆಯೇ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಬುರುಡೆ ಬಿಟ್ಟಿದ್ದ ಮೋದಿ, ಇದೀಗ ಮತ್ತೊಮ್ಮೆ ಉದ್ಯೋಗ ಸೃಷ್ಟಿಯ ಕುರಿತು ಮಾತನಾಡುತ್ತಿದ್ದಾರೆ.

ಖಾಯಂ ಉದ್ಯೋಗ ನೀಡದ ಮೋದಿ ಎಲ್ಲ ವಲಯಗಳಲ್ಲಿಯೂ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ಅಗ್ನಿವೀರ್‌ನಂತಹ ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಯುವಜನರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಹೀಗಿರುವಾಗ ಒಡಿಶಾದಲ್ಲಿ ನಿಜವಾಗಿಯೂ ಉದ್ಯೋಗ ಸೃಷ್ಟಿ ಮಾಡುವರಾ ಮೋದಿ?. ಈವರೆಗೆ ರೈತರ ಸಾಲ ಮನ್ನಾ ಮಾಡಲಿಲ್ಲ. ಅವರ ಬೆಳೆಗಳಿಗೆ ಬೆಂಬಲ ಬೆಲೆ ಕೊಡಲಿಲ್ಲ. ಹೀಗಿರುವಾಗ ಮೋದಿಗೆ ರೈತರ ಫಲವತ್ತಾದ ಭೂಮಿಯ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಅನ್ನೋದು ನಮ್ಮ ಪ್ರಶ್ನೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X