- ಪಂಢರಪುರದಲ್ಲಿ ಶರದ್ ಪವಾರ್ ಕರ್ನಾಟಕ ಚುನಾವಣೆ ಬಗ್ಗೆ ಮಾತು
- ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಪ್ರಚಾರವನ್ನು ಲೇವಡಿ ಮಾಡಿದ್ದಾರೆ.
“ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಧಾರ್ಮಿಕ ಘೋಷಣೆಗಳನ್ನು ಮಾಡುತ್ತಿರುವುದು ನನಗೆ ಅಚ್ಚರಿ ಉಂಟು ಮಾಡಿದೆ” ಎಂದು ಪವಾರ್ ಟೀಕಿಸಿದ್ದಾರೆ.
ಮಹಾರಾಷ್ಟ್ರದ ಪಂಢರಪುರದಲ್ಲಿ ಭಾನುವಾರ (ಮೇ 7) ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಶರದ್ ಪವಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಹೀಗೆ ಹೇಳಿದರು.
ಚುನಾವಣೆಯಲ್ಲಿ ಧರ್ಮ ಅಥವಾ ಧಾರ್ಮಿಕ ವಿಷಯವನ್ನು ಕೈಗೆತ್ತಿಕೊಂಡಾಗ ಅದು ವಿಭಿನ್ನ ರೀತಿಯ ವಾತಾವರನ ಸೃಷ್ಟಿಸುತ್ತದೆ. ಅದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಶರದ್ ಪವಾರ್ ಹೇಳಿದರು.
“ಚುನಾವಣೆಗೆ ಸ್ಪರ್ಧಿಸುವ ವೇಳೆ ನಾವು ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಜಾತ್ಯತೀತೆಯ ರಕ್ಷಣೆಗೆ ಪ್ರಮಾಣವಚನ ಸ್ವೀಕರಿಸುತ್ತೇವೆ. ಆದ್ದರಿಂದ ಧರ್ಮ ಅಥವಾ ಧಾರ್ಮಿಕ ವಿಚಾರ ಕೈಗೆತ್ತಿಕೊಳ್ಳುವುದು ಸಮಂಜಸವಲ್ಲ” ಎಂದು ಪವಾರ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಬಿಜೆಪಿ ನಾಯಕ ದೀಪಕ್ ಜೋಶಿ ಕಾಂಗ್ರೆಸ್ ಸೇರ್ಪಡೆ
“ಮೋದಿ ಅವರ ಧಾರ್ಮಿಕ ಘೋಷಣೆಗಳು ಫಲಿಸುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರ ಪಡೆಯುತ್ತದೆ” ಎಂದು ಶರದ್ ಪವಾರ್ ಸುದ್ದಿಗಾರರಿಗೆ ತಿಳಿಸಿದರು.
ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ನಡೆಯಲಿದೆ. 13ಕ್ಕೆ ಫಲಿತಾಂಶ ಹೊರಬೀಳಲಿದೆ.