ಲೋಕಸಭೆಯಲ್ಲಿ ಬಿಜೆಪಿ ಸಂಸದನಿಂದ ಭಯೋತ್ಪಾದಕ ಎಂದು ನಿಂದನೆಗೊಳಗಾದ ಉತ್ತರ ಪ್ರದೇಶದ ಅಮ್ರೊಹ ಕ್ಷೇತ್ರದ ಬಿಎಸ್‌ಪಿ ಸಂಸದ ದಾನಿಶ್ ಅಲಿ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿದರು.
ಅಲಿ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ” ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆಯುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಾನಿಶ್ ಅಲಿ, “ರಾಹುಲ್ ಗಾಂಧಿ ನನ್ನ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಇಲ್ಲಿಗೆ ಬಂದಿದ್ದಾರೆ. ಅವರು ವಿವಾದಾತ್ಮಕ ಹೇಳಿಕೆಯನ್ನು ಹೃದಯಕ್ಕೆ ತೆಗೆದುಕೊಳ್ಳಬೇಡಿ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಎಂದು ಹೇಳಿದರು. ನಾನು ಒಬ್ಬಂಟಿಯಾಗಿಲ್ಲ ಎಂದು ನನಗೆ ಸಮಾಧಾನವಾಯಿತು”ಎಂದು ಹೇಳಿದರು.
“ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ದಾಳಿ. ಅಮೃತಕಾಲದ ವೇಳೆ ಬೀದಿಗಿಳಿದಿರುವ ದ್ವೇಷದ ಅಂಗಡಿಗಳು ಇದೀಗ ನೂತನ ಸಂಸತ್ತಿನಲ್ಲಿ ಸ್ಥಾಪನೆಯಾಗುತ್ತಿರುವುದು ವಿಷಾದನೀಯ. ಆದರೂ ಲೋಕಸಭೆಯೇ ನಮ್ಮ ರಕ್ಷಕ” ಎಂದು ಬಿಎಸ್‌ಪಿ ಸಂಸದ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ಎಬ್ಬಿಸಿದ ‘ಭಯೋತ್ಪಾದಕ’ ಹೇಳಿಕೆ | ಬಿಜೆಪಿ ಸಂಸದನ ಬಂಧನಕ್ಕೆ ಆಗ್ರಹ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ಸಂಸದ ಇಮ್ರಾನ್ ಪ್ರತಾಪಘರ್ಹಿ ಕೂಡ ರಾಹುಲ್ ಗಾಂಧಿ ಜೊತೆಗಿದ್ದರು.
ಸದನದ ಘನತೆಗೆ ಕಳಂಕ
ರಾಹುಲ್ ಗಾಂಧಿ ಅವರ ಭೇಟಿಯ ಚಿತ್ರಗಳನ್ನು ಹಂಚಿಕೊಂಡಿರುವ ಕಾಂಗ್ರೆಸ್, “ಬಿಜೆಪಿ ಸಂಸದ ರಮೇಶ್ ಬಿಧುರಿಯ ಈ ನಾಚಿಕೆಗೇಡಿನ ಮತ್ತು ಕ್ಷುಲ್ಲಕ ಕ್ರಮವು ಸದನದ ಘನತೆಗೆ ಕಳಂಕ ತಂದಿದೆ. ಪ್ರಜಾಪ್ರಭುತ್ವದ ದೇವಾಲಯದಲ್ಲಿ ಇಂತಹ ದ್ವೇಷದ ಮನಸ್ಥಿತಿಯನ್ನು ಪಕ್ಷವು ಬಲವಾಗಿ ವಿರೋಧಿಸುತ್ತದೆ” ತಿಳಿಸಲಾಗಿದೆ.
ವಿವಾದದ ಬೆನ್ನಲ್ಲೇ ಬಿಜೆಪಿ ಶುಕ್ರವಾರ ಬಿಧುರಿ ಅವರ ಹೇಳಿಕೆಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಏತನ್ಮಧ್ಯೆ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಬಿಧುರಿ ವಿರುದ್ಧ ನಿಯಮಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.