- ಭ್ರಷ್ಟಾಚಾರದ ಆಧಾರ ಸ್ತಂಭವೇ ಬಿಜೆಪಿಯಾಗಿದೆ: ಕಿಡಿ
- ‘ಸಿಕ್ಕ ಹಣಕ್ಕೂ ಕಾಂಗ್ರೆಸ್ ಸರ್ಕಾರಕ್ಕೂ ಸಂಬಂಧವಿಲ್ಲ’
ಭ್ರಷ್ಟಾಚಾರದ ಆಧಾರ ಸ್ತಂಭವೇ ಬಿಜೆಪಿಯಾಗಿದೆ. ಹೀಗಾಗಿಯೇ ರಾಜ್ಯದ ಜನತೆ ಅವರನ್ನು ತಿರಸ್ಕರಿಸಿದ್ದಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡ ಹಣ ಬಿಜೆಪಿ ನಾಯಕರಿಗೆ ಸೇರಿದೆ. ಈ ಹಣಕ್ಕೂ ಕಾಂಗ್ರೆಸ್ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಇಂಗ್ಲಿಷ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ 42 ಕೋಟಿ ರುಪಾಯಿಗಳನ್ನು ವಶಕ್ಕೆ ಪಡೆದಿದ್ದು, ಈ ಐಟಿ ದಾಳಿ ಪ್ರಕರಣ ಸಂಬಂಧ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
“ಬಿಜೆಪಿ ನಾಯಕರೂ ಕೂಡ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಆರಂಭವಾಗಲಿ. ಸತ್ಯಾಸತ್ಯತೆ ಹೊರಬರಲಿದೆ. ನಮಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ ದಾಳಿಯ ವೇಳೆ ಐಟಿ ಅಧಿಕಾರಿಗಳು ಸಾಕಷ್ಟು ಪುಸ್ತಕಗಳು ಮತ್ತು ಡೈರಿಗಳನ್ನು ಪತ್ತೆ ಮಾಡಿದ್ದಾರೆ. ತನಿಖೆಯ ಸಂದರ್ಭದಲ್ಲಿ ಸತ್ಯಗಳು ಹೊರಬರುತ್ತವೆ” ಎಂದರು.
ತಮ್ಮನ್ನು ಮತ್ತು ಸಿದ್ದರಾಮಯ್ಯ ಅವರನ್ನು ಕಲೆಕ್ಷನ್ ಮಾಸ್ಟರ್ಸ್ ಎಂಬ ಬಿಜೆಪಿ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಭ್ರಷ್ಟಾಚಾರದ ಆಧಾರಸ್ತಂಭವೇ ಬಿಜೆಪಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಕಚೇರಿಯಿಂದ ಹೈಕಮಾಂಡ್‌ಗೆ 2,000 ಕೋಟಿ ಹಣ ಹೋಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಬಿಜೆಪಿ ಸರ್ಕಾರ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಹೇಳಿಕೆ ನೀಡಿ ಎಂದು ಶಾಸಕರು ಮತ್ತು ಮಾಜಿ ಸಚಿವರಿಗೆ ನಾನು ಕೇಳಬೇಕೇ?” ಎಂದು ವ್ಯಂಗ್ಯವಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎರಡು ದೇಶಗಳ ಸ್ಥಾಪನೆ- ಇಸ್ರೇಲ್ ಪ್ಯಾಲೆಸ್ತೀನಿ ಕದನಕ್ಕೆ ಕಾಯಂ ಪರಿಹಾರ
55 ಕಡೆಗಳಲ್ಲಿ ದಾಳಿ
“ಕರ್ನಾಟಕ ಮತ್ತು ಕೆಲವು ಇತರ ರಾಜ್ಯಗಳಲ್ಲಿ ಸರ್ಕಾರಿ ಗುತ್ತಿಗೆದಾರರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯು (ಐಟಿ ಇಲಾಖೆ) 94 ಕೋಟಿ ರೂ. ನಗದು, 8 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು ಮತ್ತು ವಿದೇಶಿ ನಿರ್ಮಿತ 30 ಐಷಾರಾಮಿ ವಾಚ್‌ಗಳನ್ನು ವಶಪಡಿಸಿಕೊಂಡಿದೆ.
ಅಕ್ಟೋಬರ್ 12ರಂದು ಐಟಿ ಅಧಿಕಾರಿಗಳು ವಿವಿಧ ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆಸಿದರು ಮತ್ತು ಶೋಧ ಕಾರ್ಯ ಪ್ರಾರಂಭಿಸಿದರು. ಬೆಂಗಳೂರು ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ದೆಹಲಿಯ ಕೆಲವು ನಗರಗಳಲ್ಲಿ ಇಲಾಖೆಯು ಒಟ್ಟು 55 ಕಡೆಗಳಲ್ಲಿ ದಾಳಿ ನಡೆಸಿದೆ.
ಶೋಧದ ಸಮಯದಲ್ಲಿ, ಖಾಸಗಿ ಉದ್ಯೋಗಿ ಬಳಿ ವಿದೇಶಿ ನಿರ್ಮಿತ ಸುಮಾರು 30 ಐಷಾರಾಮಿ ಕೈಗಡಿಯಾರಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.