- 23 ದಿನ ನಡೆಯಲಿರುವ ಉಭಯ ಸದನಗಳ ಮುಂಗಾರು ಅಧಿವೇಶನ
- ಕೆಲವು ದಿನಗಳ ನಂತರ ಹೊಸ ಸಂಸತ್ತು ಭವನಕ್ಕೆ ಅಧಿವೇಶನ ಸ್ಥಳಾಂತರ
ಇದೇ ಜುಲೈ 20 ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಆಗಸ್ಟ್ 11 ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶನಿವಾರ (ಜುಲೈ 1) ಹೇಳಿದ್ದಾರೆ.
ಸಂಸತ್ತಿನ ಉಭಯ ಸದನಗಳಲ್ಲಿ ಗುಣಮಟ್ಟದ ಚರ್ಚೆಗೆ ಎಲ್ಲ ಪಕ್ಷಗಳು ಕೊಡುಗೆ ನೀಡುವಂತೆ ಪ್ರಲ್ಹಾದ್ ಜೋಶಿ ಅವರು ಒತ್ತಾಯಿಸಿದ್ದಾರೆ.
ಹೊಸ ಸಂಸತ್ತಿನ ಕಟ್ಟಡದ ಉಭಯ ಸದನಗಳಾದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಈ ಬಾರಿಯ ಮುಂಗಾರು ಅಧಿವೇಶನ ಜರುಗಲಿದ್ದು ಪ್ರಮುಖ ವಿಷಯಗಳು ಚರ್ಚೆಯಾಗಲಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಈ ಕುರಿತು ಟ್ವೀಟ್ ಮಾಡಿದ್ದು, “ಸಂಸತ್ತಿನ ಮುಂಗಾರು ಅಧಿವೇಶನವು ಜುಲೈ 20ರಿಂದ ಪ್ರಾರಂಭವಾಗಿ ಆಗಸ್ಟ್ 11ರವರೆಗೆ ನಡೆಯಲಿದೆ. ಈ ಅಧಿವೇಶನದಲ್ಲಿ ಶಾಸಕಾಂಗ ವ್ಯವಹಾರ ಮತ್ತು ಇತರ ವಿಷಯಗಳ ಕುರಿತು ಗುಣಮಟ್ಟದ ಚರ್ಚೆಗಳಿಗೆ ಕೊಡುಗೆ ನೀಡಲು ಎಲ್ಲ ಪಕ್ಷಗಳನ್ನು ಒತ್ತಾಯಿಸುತ್ತೇನೆ” ಎಂದು ಹೇಳಿದ್ದಾರೆ.
ಮುಂಗಾರು ಅಧಿವೇಶನ ಒಟ್ಟು 23 ದಿನಗಳ ಕಾಲ ನಡೆಯಲಿದ್ದು 17 ಕಲಾಪಗಳು ಇರಲಿವೆ ಎಂದು ಪ್ರಲ್ಹಾದ್ ಜೋಶಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಹಳೆಯ ಸಂಸತ್ತು ಭವನದ ಕಟ್ಟಡದಲ್ಲಿ ಅಧಿವೇಶನ ಆರಂಭವಾಗುತ್ತದೆ. ಕೆಲವು ದಿನಗಳ ನಂತರ ಕಲಾಪವು ನೂತನ ಸಂಸತ್ತು ಭವನದ ಕಟ್ಟಡಕ್ಕೆ ಸ್ಥಳಾಂತರವಾಗುತ್ತದೆ ಎಂದು ಸಂಸದೀಯ ಮೂಲಗಳು ಹೇಳಿವೆ.
ನೂತನ ಸಂಸತ್ತು ಭವನ ಉದ್ಘಾಟನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಸಂಸತ್ತಿನ ಅಧಿವೇಶನದ ಕಲಾಪಗಳು ಇಲ್ಲಿ ನಡೆಯಲಿವೆ. ಈ ಹಿನ್ನೆಲೆ ಈ ಬಾರಿ ಅಧಿವೇಶನವು ವಿಶೇಷವಾಗಿದೆ ಎನ್ನಲಾಗಿದೆ. ಕಳೆದ ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ತು ಭವನವನ್ನು ಉದ್ಘಾಟಿಸಿದ್ದರು.
ನೂತನ ಸಂಸತ್ತು ಭವನ ಕಟ್ಟಡದಲ್ಲಿ ಬಹುತೇಕ ಎಲ್ಲ ರಾಜಕೀಯ ಪಕ್ಷಗಳಿಗೆ ಕಚೇರಿಗಳನ್ನು ಗುರುತಿಸಲಾಗಿದೆ. ಅಲ್ಲದೆ ಹಳೆಯ ಸಂಸತ್ತು ಕಟ್ಟಡದಿಂದ ಪ್ರಮುಖ ಇಲಾಖೆಗಳನ್ನು ಹೊಸ ಸಂಸತ್ತು ಭವನಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ.
ಮುಂಗಾರು ಅಧಿವೇಶನದ ಕಲಾಪಗಳಲ್ಲಿ ಈ ಬಾರಿ ಏಕರೂಪದ ನಾಗರಿಕ ಸಂಹಿತೆಯು ಭಾರೀ ಚರ್ಚೆಗೆ ಒಳಪಡಲಿದೆ ಎನ್ನಲಾಗಿದೆ.
ಅಧಿವೇಶನದಲ್ಲಿ, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ (ತಿದ್ದುಪಡಿ) ಸುಗ್ರೀವಾಜ್ಞೆಗೆ ಬದಲಿಯಾಗಿ ಕೇಂದ್ರ ಸರ್ಕಾರ ಮಸೂದೆಯನ್ನು ತರುವ ಸಾಧ್ಯತೆಯಿದೆ. ಸುಗ್ರೀವಾಜ್ಞೆಯು ಸುಪ್ರೀಂ ಕೋರ್ಟ್ ತೀರ್ಪನ್ನು ಪರಿಣಾಮಕಾರಿಯಾಗಿ ರದ್ದುಗೊಳಿಸಿತ್ತು.
ಈ ಸುದ್ದಿ ಓದಿದ್ದೀರಾ? ದೆಹಲಿ ಸುಗ್ರಿವಾಜ್ಞೆ: ಕೇಂದ್ರದ ವಿರುದ್ಧ ಸುಪ್ರೀಂನಲ್ಲಿ ಪ್ರಶ್ನಿಸಲು ಮುಂದಾದ ಎಎಪಿ ಸರ್ಕಾರ
ದೆಹಲಿ ಸರ್ಕಾರಕ್ಕೆ ಆಡಳಿತ ಸೇವೆಗಳ ವಿಷಯಗಳ ಮೇಲೆ ಹೆಚ್ಚಿನ ಶಾಸಕಾಂಗ ಮತ್ತು ಆಡಳಿತಾತ್ಮಕ ನಿಯಂತ್ರಣವನ್ನು ನೀಡಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಮುಂಗಾರು ಅಧಿವೇಶನ ಮಣಿಪುರದಲ್ಲಿನ ಪ್ರಕ್ಷುಬ್ಧ ವಾತಾವರಣ ಕೂಡಾ ಪ್ರತಿಪಕ್ಷಗಳಿಗೆ ಚರ್ಚೆಯ ವಿಷಯವಾಗುವ ಸಾಧ್ಯತೆ ಇದೆ.