ಲೋಕಸಭೆ ಚುನಾವಣೆಯ ಜನಾದೇಶವು ಪ್ರಧಾನಿ ನರೇಂದ್ರ ಮೋದಿಯವರಿಗೆ ‘ನೈತಿಕ, ರಾಜಕೀಯ ಮತ್ತು ವೈಯಕ್ತಿಕ’ ಸೋಲನ್ನು ಕೊಟ್ಟಿದೆ. ಈಗ ಅವರ ‘ಕರುಣಾಜನಕ’ ಚುನಾವಣಾ ಕಾರ್ಯಕ್ಷಮತೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಗಳನ್ನು ನಡೆಯುತ್ತಿವೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಮಂಗಳವಾರ ಪ್ರಕಟವಾದ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ 240 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಬಹುಮತ ಪಡೆಯುವಲ್ಲಿ ವಿಫಲವಾಗಿದ್ದು, ಎನ್‌ಡಿಎ ಮೈತ್ರಿಪಕ್ಷಗಳ ನೆರವಿನಿಂದ ಸರ್ಕಾರ ರಚನೆಗೆ ಮುಂದಾಗಿದೆ. ಬಿಜೆಪಿಯೂ ಸೇರಿದಂತೆ ಎನ್‌ಡಿಎ ಮಿತ್ರಪಕ್ಷಗಳು 543 ಸ್ಥಾನಗಳ ಪೈಕಿ 293 ಸ್ಥಾನಗಳನ್ನು ಗೆದ್ದಿದ್ದರೆ, ಇಂಡಿಯಾ ಮೈತ್ರಿಕೂಟ 233 ಸ್ಥಾನಗಳನ್ನು ಗೆದ್ದಿದೆ.
ಬಿಜೆಪಿ ಅಗತ್ಯ ಬಹುಮತ 272 ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾದ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಮೋದಿ ವಿರುದ್ಧ ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದಾರೆ. “ಮೋದಿಯವರಿಗೆ ನೈತಿಕ, ರಾಜಕೀಯ ಮತ್ತು ವೈಯಕ್ತಿಕವಾಗಿ ಜನಾದೇಶವು ಸೋಲು ನೀಡಿದೆ. ಅದರಲ್ಲಿಯೂ, ಸೋಲಿನಲ್ಲಿಯೂ ಮೋದಿಯನ್ನು ಸಮರ್ಥಿಸುವ ಕೆಲಸ ಆರಂಭವಾಗಿದೆ” ಎಂದಿದ್ದಾರೆ.
“ಜವಾಹರಲಾಲ್ ನೆಹರು ನಂತರ ಸತತವಾಗಿ ಮೂರು ಬಾರಿ ಜನಾದೇಶ ಪಡೆದವರು ನರೇಂದ್ರ ಮೋದಿ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ, ಪಕ್ಷವನ್ನು ಕೇವಲ 240 ಸ್ಥಾನಗಳಲ್ಲಿ ಗೆಲ್ಲಿಸುವುದು, ಅದಕ್ಕೆ ತೃಪ್ತಿಪಟ್ಟುಕೊಳ್ಳುವುದು ಹಾಗೂ ‘ಮೂರನೇ ಒಂದು ಭಾಗ’ದಷ್ಟು ಜನಾದೇಶ ಪಡೆದಿರುವುದು ಯಾವ ರೀತಿಯಲ್ಲಿ ನೆಹರು ಅವರಿಗೆ ಸಮನಾಗುತ್ತದೆ ಎಂಬುದನ್ನು ಬಿಜೆಪಿ ವಿವರಿಸಬೇಕು” ಎಂದು ರಮೇಶ್ ಹೇಳಿದ್ದಾರೆ.
The drumbeat to find silver linings in the mandate that has been a moral, political, and personal defeat for Narendra Modi has started.
It is being propagated that Mr. Narendra Modi is the first to receive a mandate thrice in a row after Jawaharlal Nehru.
How leading a party to…
— Jairam Ramesh (@Jairam_Ramesh) June 8, 2024
“ಇನ್ನೊಂದೆಡೆ, ನೆಹರೂ ಅವರು 1952ರಲ್ಲಿ 364 ಸ್ಥಾನಗಳನ್ನು ಪಡೆದಿದ್ದರು. 1957ರಲ್ಲಿ 371 ಸ್ಥಾನಗಳನ್ನು ಮತ್ತು 1962ರಲ್ಲಿ 361 ಸ್ಥಾನಗಳನ್ನು ಗೆದ್ದಿದ್ದರು. ಆ ಮೂಲಕ, ಪ್ರತಿ ಬಾರಿ 2/3ರಷ್ಟು ಬಹುಮತ ಗೆದ್ದಿದ್ದರು. ಆದರೂ, ಅವರು ಸಂಪೂರ್ಣ ಪ್ರಜಾಪ್ರಭುತ್ವವಾದಿಯಾಗಿದ್ದರು. ತಮ್ಮ ನಿರಂತರ ಭಾಗವಹಿಸುವಿಕೆಯೊಂದಿಗೆ ಸಂಸತ್ತನ್ನು ಬಹಳ ಎಚ್ಚರಿಕೆಯಿಂದ ಮುನ್ನಡೆಸಿದರು” ಎಂದು ಎಂದಿದ್ದಾರೆ.
ನೆಹರೂ ನಂತರ ಸತತವಾಗಿ ಮೂರು ಬಾರಿ ಪ್ರಮಾಣ ವಚನ ಸ್ವೀಕರಿಸಿದ ಏಕೈಕ ವ್ಯಕ್ತಿ ಮೋದಿ ಅಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು 1996, 1998 ಮತ್ತು 1999ರಲ್ಲಿ ಮೂರು ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದಕ್ಕೂ ಮುನ್ನ, ಇಂದಿರಾ ಗಾಂಧಿ ಅವರು – 1966, 1967, 1971 ಮತ್ತು 1980ರಲ್ಲಿ – ನಾಲ್ಕು ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ” ಎಂದು ರಮೇಶ್ ವಿವರಿಸಿದ್ದಾರೆ.