ನಾನು ಮುಸ್ಲಿಮರನ್ನು ಉಲ್ಲೇಖಿಸಿ ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂಬ ಪದಗಳನ್ನು ಹೇಳಿಲ್ಲ. ನಾನು ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡಿಲ್ಲ. ಪ್ರತಿ ಬಡ ಕುಟುಂಬಗಳ ಬಗ್ಗೆ ಮಾತನಾಡಿದ್ದೇನೆ ಎಂದು ಪ್ರಧಾನಿ ಮೋದಿ ತಮ್ಮ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ, ರಾಜಸ್ಥಾನದ ಬನ್ಸ್‌ವಾರದಲ್ಲಿ ಮಾತನಾಡಿದ್ದ ಮೋದಿ, “ಕಾಂಗ್ರೆಸ್ ʼನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ದೇಶದ ಸಂಪತ್ತನ್ನು ಹಂಚುತ್ತದೆ” ಎಂದು ಹೇಳಿದ್ದರು. ಅವರ ಹೇಳಿಕೆ, ದ್ವೇಷದಿಂದ ಕೂಡಿದ್ದು, ಕೋಮು ದ್ವೇಷವನ್ನು ಪ್ರಚೋದಿಸುತ್ತದೆ ಎಂದು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ, ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. “ಮುಸ್ಲಿಮರ ಮೇಲಿನ ಪ್ರೀತಿಯನ್ನು ನಾನು ಮಾರಾಟ ಮಾಡುವುದಿಲ್ಲ. ನಾನು ವೋಟ್ ಬ್ಯಾಂಕ್‌ಗಾಗಿ ಕೆಲಸ ಮಾಡುವುದಿಲ್ಲ. ನಾನು ʼಸಬ್ಕಾ ಸಾಥ್, ಸಬ್ಕಾ ವಿಕಾಸ್ʼಅನ್ನು ನಂಬುತ್ತೇನೆ” ಎಂದು ನ್ಯೂಸ್‌೧೮ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
“ನನಗೆ ಆಘಾತವಾಗಿದೆ. ಹೆಚ್ಚು ಮಕ್ಕಳಿರುವವರ ಬಗ್ಗೆ ಮಾತನಾಡುವಾಗ, ನಾನು ಮುಸ್ಲಿಮರ ಬಗ್ಗೆ ಹೇಳುತ್ತಿದ್ದೇನೆಂದು ಯಾರು ಹೇಳಿದರು? ಬಡ ಕುಟುಂಬಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಬಡತನ ಇರುವಲ್ಲಿ, ಹೆಚ್ಚು ಮಕ್ಕಳಿರುತ್ತಾರೆ. ಅವರು ತಮ್ಮ ಸಾಮಾಜಿಕ ಪರಿಸ್ಥಿತಿಯನ್ನು ಲೆಕ್ಕಿಸದೆ ಮಕ್ಕಳನ್ನು ಹೊಂದುತ್ತಾರೆ. ಸರ್ಕಾರ ತಮ್ಮ ಮಕ್ಕಳ ಕಾಳಜಿವಹಿಸಬೇಕೆಂದು ಬಯಸುತ್ತಾರೆ” ಎಂದು ಹೇಳಿದ್ದಾರೆ.
ತಾವು ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನಲ್ಲಿ ನಡೆದ ಗೋಧ್ರಾ ನಂತರದ ಗಲಭೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, “2002ರ ಗೋಧ್ರಾ ಗಲಭೆ ನಂತರ ತಮ್ಮ ವಿರೋಧಿಗಳು ಮುಸ್ಲಿಮರ ಮನಸ್ಸಿನಲ್ಲಿ ತಮ್ಮ ಪ್ರಾಮುಖ್ಯತೆಗೆ ಕಳಂಕ ತಂದಿದ್ದಾರೆ” ಎಂದು ಹೇಳಿದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರು ತಮಗೆ ಮತ ಹಾಕುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, “ದೇಶದ ಜನತೆ ನನಗೆ ಮತ ಹಾಕುತ್ತಾರೆ. ನಾನು ಹಿಂದು-ಮುಸ್ಲಿಮರು ಎಂದು ವಿಭಜಿಸುವ ದಿನ, ನಾನು ಸಾರ್ವಜನಿಕ ಜೀವನದಲ್ಲಿರುವ ಅರ್ಹತೆ ಕಳೆದುಕೊಳ್ಳುತ್ತೇನೆ. ನಾನು ಹಿಂದು-ಮುಸ್ಲಿಂ ಎಂದು ವರ್ಗೀಕರಿಸುವುದಿಲ್ಲ. ಇದು ನನ್ನ ಪ್ರತಿಜ್ಞೆ” ಎಂದರು.
ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪ್ರಧಾನಿ ಮೋದಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ವಾರಣಾಸಿಯಲ್ಲಿ ಏಳನೇ ಹಂತದ ಮತದಾನ ಜೂನ್ 1 ರಂದು ನಡೆಯಲಿದೆ. ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದೆ.