ಸಂಸದ ಅನಂತ ಕುಮಾರ್ ಹೆಗಡೆ ಅವರ ಫೋಟೋ ಬಳಸಿ ಬಿಜೆಪಿಗೆ ವೋಟ್ ಹಾಕುವಂತೆ ಪೋಸ್ಟ್ ಮಾಡಿರುವ ಸಿದ್ದಾಪುರದ ಬಿಜೆಪಿ ಕಾರ್ಯಕರ್ತ ಎ ಜೆ ನಾಯ್ಕ ವಿರುದ್ಧ ಸಂಸದ ಅನಂತ ಕುಮಾರ್ ಹೆಗಡೆ ಅವರು ಸ್ವತಃ ಅವರು ತಮ್ಮ ಆಪ್ತ ಸುರೇಶ್ ಶೆಟ್ಟಿ ಮೂಲಕ ದೂರು ದಾಖಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸಂಸದರ ಭಾವಚಿತ್ರ ಬಳಸಿ ಸಂಸದರೇ ಹೇಳಿದ್ದಾರೆ ಎನ್ನುವ ರೀತಿಯಲ್ಲಿ ಪೋಸ್ಟ್ ಹಾಕಿದ ಹಿನ್ನೆಲೆ ದೂರು ನೀಡಲಾಗಿದೆ. ಸಂಸದರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಪತ್ರಕರ್ತ ರಾಜೀವ್ ಹೆಗ್ಡೆ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದು, “ಕರ್ನಾಟಕದಲ್ಲಿ ಈ ವ್ಯಕ್ತಿಯಷ್ಟು ಇನ್ಯಾರಿಗೂ ಅವಕಾಶ ಸಿಗಲಿಲ್ಲ. ಆರು ಬಾರಿ ಉತ್ತರ ಕನ್ನಡದ ಸಂಸದರಾಗಲು ಬಿಜೆಪಿ ಅವಕಾಶ ಮಾಡಿಕೊಟ್ಟಿದೆ. ಒಮ್ಮೆ ಕೇಂದ್ರ ಸಚಿವರನ್ನಾಗಿ ಮಾಡಿದೆ. ಆದರೆ ಈ ಬಾರಿ ತನಗೆ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬಾರದು” ಎಂದಿದ್ದಾರೆ.
ಮುಂದುವರಿದು, “ಯಾವುದೋ ಒಬ್ಬ ಕಾರ್ಯಕರ್ತನು ಇವರ ಚಿತ್ರ ಬಳಸಿ ಬಿಜೆಪಿಗೆ ಮತ ಕೇಳಿದ್ದು ಅಪರಾಧವಂತೆ? ಅಷ್ಟಕ್ಕೂ ಆ ಕಾರ್ಯಕರ್ತ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಎಲ್ಲಿಯೂ ಹೇಳಿಲ್ಲ. ಹಾಗಿದ್ದರೆ ಇಷ್ಟು ವರ್ಷ ಬಿಜೆಪಿಯಿಂದ ಗೆದ್ದು ಎಲ್ಲವನ್ನೂ ಅನುಭವಿಸಿ, ಈಗ ಮನೆಯಲ್ಲಿ ಕೂರುವುದು ಕೂಡ ಅಪರಾಧವಲ್ಲವೇ? ಸ್ವಾರ್ಥ, ಆಸೆಗೂ ಮಿತಿ ಇರಬೇಕು. ವೈಯಕ್ತಿಕವಾಗಿ ಅನಂತ್‌ಕುಮಾರ್ ಹೆಗಡೆ ಅವರ ಮೇಲೆ ನನಗೆ ಗೌರವವಿದೆ. ಆದರೆ, ಪ್ರತಿಯೊಂದಕ್ಕೂ ಒಂದು ಮಿತಿ ಇರಬೇಕು. ವ್ಯವಸ್ಥೆಗಿಂತ ತಾನೇ ದೊಡ್ಡವ ಎನ್ನುವ ಭ್ರಮೆ ಎಂದಿಗೂ ಇರಬಾರದು” ಎಂದು ಹೇಳಿದ್ದಾರೆ.
ಮೋದಿ ಪರಿವಾರದ ಸದಸ್ಯ ಎಂದು ಸ್ವಯಂ ಘೋಷಿಸಿಕೊಂಡಿರುವ ಪ್ರಕಾಶ್ ಶೇಷರಾಘವಾಚಾರ್ ಅವರು ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿ “ಇವರೆಲ್ಲ ನಮ್ಮ ನಾಯಕರು ಎಂದು ಕರೆದ ನಾವು, ನಮಗೆ ನಾವು ತಗೊಂಡು ಹೊಡೆದುಕೊಳ್ಳಬೇಕು. ಕನಿಷ್ಠ ಕೃತಜ್ಞತೆಯ ಇಲ್ಲದ ವ್ಯಕ್ತಿ” ಎಂದು ಬೇಸರ ಹೊರಹಾಕಿದ್ದಾರೆ.
ಮಂಜುನಾಥ್ ಹೆಗ್ಡೆ ಎಂಬುವರು ಈ ಬೆಳವಣಿಗೆಯನ್ನು ಸಮರ್ಥಿಸಿ, “ಅನಂತಕುಮಾರ ಹೆಗಡೆಯ ಅವಶ್ಯಕತೆ ಇಲ್ಲ ಎಂದಾದಲ್ಲಿ ಅವರ ಹೆಸರು ಪೋಟೋ ಬಳಕೆ ಯಾಕೆ? ಇದು ಮೊದಲ ಬಾರಿಯೇನಲ್ಲ. ಹಿಂದಿನ ಯಾವುದೋ ಪೋಟೋ ಬಳಸಿ ಜೋಡೆತ್ತು ಅಂತ ಪೋಟೋ ಹಾಕಿ ತಿರುಗಾಡಿಸಿದ್ರು. ಒಬ್ಬರು ಬೇಡ ಅಂತಾದಲ್ಲಿ ಸಂಪೂರ್ಣ ಬೇಡ ಅಷ್ಟೇ. ದ್ವಂದ್ವ ಇರಬಾರದು ಒಂದು ರಾಷ್ಟ್ರೀಯ ಪಕ್ಷಕ್ಕೆ & ಬೆಂಬಲಿಗರಿಗೆ. ಇನ್ನು ಲಾಭ ಮಾಡಿಕೊಂಡಿದ್ದು ಅನಂತಕುಮಾರ ಹೆಗಡೆಯೋ ಅಥವಾ ಪಕ್ಷವೋ? ಚರ್ಚೆಯಾಗಲಿ” ಎಂದಿದ್ದಾರೆ.
ದೂರಿನಲ್ಲೇನಿದೆ?
ಎ.ಜಿ ನಾಯ್ಕ, ಸಿದ್ದಾಪುರ ಇವರು ಮೇ 6ರಂದು ಮಧ್ಯಾಹ್ನ 2-20 ಗಂಟೆಗೆ ಬಿಜೆಪಿ ಉತ್ತರ ಕನ್ನಡ ಲೋಕಸಭಾ 2024 ಎಂಬ ವಾಟ್ಸ್ ಆಫ್ ಗ್ರೂಪಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ನನ್ನ ಬಂಧು ಬಾಂಧವರೇ, ಮುನ್ನುಗ್ಗಿ ಮುನ್ನುಗ್ಗಿ, ಯಾವುದಕ್ಕೂ ಹೆದರಬೇಡಿ, ಎಲ್ಲಿಯೂ ನಿಲ್ಲಬೇಡಿ. ದೇಶವನ್ನು ಉಳಿಸುವ ಹಾಗೂ ದೇಶದೊಂದಿಗೆ ನಿಲ್ಲುವ ಸದಾವಕಾಶ ನಮ್ಮೆಲ್ಲರಿಗೂ ಮತ್ತೊಮ್ಮೆ ಒದಗಿ ಬಂದಿದೆ. 2014 ಹಾಗೂ 2019ರಲ್ಲಿ, ಹೇಗೆ ನಾವುಗಳೆಲ್ಲ ದೇಶ ವಿರೋಧಿ ಶಕ್ತಿಯ ವಿರುದ್ಧ ಸೆಟೆದು ನಿಂತೆವೋ ಅದೇ ರೀತಿಯಾಗಿ ಮತ್ತೊಮ್ಮೆ ದೇಶ ವಿರೋಧಿ ಶಕ್ತಿಗಳ ವಿರುದ್ಧ ನಿಲ್ಲುವ ಕಾಲ ಬಂದಿದೆ.
ನಾವೆಲ್ಲರೂ ಪ್ರಧಾನ ಸೇವಕ ನರೇಂದ್ರ ಮೋದಿಯವರ ಬೆನ್ನಿಗೆ ನಿಂತು ಮತ್ತೊಮ್ಮೆ ಅವರನ್ನು ಆಯ್ಕೆ ಮಾಡಲೇ ಬೇಕಾಗಿದೆ. ಇದು ನಮಗೋಸ್ಕರ ಅಲ್ಪವಾದರೂ ನಮ್ಮ ಭವಿಷ್ಯದ ನಾಳೆಗಾಗಿ ಭವಿಷ್ಯದ ಭಾರತಕ್ಕಾಗಿ ಇದೇ ಮೇ 07ರಂದು ನಡೆಯುವ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ಧ್ವಜವನ್ನು ಹಾರಿಸಬೇಕಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಬಾಹುಗಳಿಗೆ ಶಕ್ತಿ ನೀಡುವ ಕೆಲಸವಾಗಬೇಕಿದೆ ಎಂದು ಬರೆದು ಅದಕ್ಕೆ ಸಂಸದ ಅನಂತ ಕುಮಾರ್ ಹೆಗಡೆಯವರ ಭಾವಚಿತ್ರವನ್ನು ಅಳವಡಿಸಿ ಅನಂತಕುಮಾರ ಹೆಗಡೆಯವರೇ ಹೇಳಿಕೆ ನೀಡಿದ ರೀತಿಯಲ್ಲಿ ಸುದ್ದಿ ಹಾಕಿದ್ದಾರೆ.
ಹೀಗಾಗಿ ಉದ್ದೇಶಪೂರ್ವಕವಾಗಿ ಅನಂತ ಕುಮಾರ್ ಹೆಸರು ದುರುಪಯೋಗ ಪಡಿಸಿಕೊಂಡು ಗೌರವ ಘನತೆಗೆ ಚ್ಯುತಿ ಬರುವ ಹಾಗೇ ಮಾಡಿದ್ದಾರೆ ಎಂದು ಆರೋಪಿಸಿ ಅನಂತ ಕುಮಾರ್ ಹೆಗಡೆ ಸೂಚನೆ ಮೇರೆಗೆ ಅವರ ಬೆಂಬಲಿಗರು ದೂರು ನೀಡಿದ್ದಾರೆ.
