ಚಾಮರಾಜನಗರ ಸಂಸದ ಸುನೀಲ್ ಬೋಸ್ ಅವರು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಬಿ.ಕೆ ಸವಿತಾ ಅವರ ಹಣೆಗೆ ದೇವಸ್ಥಾನದಲ್ಲಿ ಕುಂಕುಮ ಇಟ್ಟಿದ್ದು, ಇದೀಗ ಆ ಬೊಟ್ಟು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಿರುವ ಸಂಸದ ಬೋಸ್, ‘ಯಾರು ಯಾರಿಗಾದರೂ ಬೊಟ್ಟು ಇಡಬಹುದು. ತಪ್ಪೇನಿದೆ’ ಎಂದಿದ್ದಾರೆ.
ಶುಕ್ರವಾರ ಸಂಸದ ಸುನೀಲ್ ಬೋಸ್ ಮತ್ತು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ, ದೇವಾಲಯದಲ್ಲಿ ಸವಿತಾ ಅವರ ಹಣೆಗೆ ಸುನೀಲ್ ಬೋಸ್ ಕುಂಕುಮ ಇಟ್ಟಿದ್ದಾರೆ. ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಕೆಲವು ಮಾಧ್ಯಮಗಳು ಇದೇ ವಿಚಾರವಾಗಿ ಸುನೀಲ್ ಬೋಸ್ ಅವರ ಬೆನ್ನುಬಿದ್ದಿವೆ.
ಸುನೀಲ್ ಬೋಸ್ ಅವರು ಲೋಕಸಭಾ ಚುನಾವಣೆ ಸಮಯದಲ್ಲಿ ತಮಗೆ ಮದುವೆ ಆಗಿಲ್ಲವೆಂದು ಹೇಳಿಕೊಂಡಿದ್ದರು. ಆಗ, ಬಿಜೆಪಿಗರು ಸುನೀಲ್ ಬೋಸ್ ಮತ್ತು ಸವಿತಾ ಅವರು ಜೊತೆಗಿರುವ ಫೋಟೋವನ್ನು ನೀಡಿ, ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಅವರಿಬ್ಬರು ಮದುವೆಯಾಗಿದ್ದು, ವಿಷಯವನ್ನು ಮುಚ್ಚಿಟ್ಟು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದ್ದರು. ಈಗ, ವೈರಲ್ ಆಗುತ್ತಿರುವ ಫೋಟೋವನ್ನು ಮುಂದಿಟ್ಟುಕೊಂಡು ಮದುವೆಯ ಬಗ್ಗೆ ಬಹಿರಂಗ ಪಡಿಸಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ.