ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಗೆ (ಕೇಂದ್ರ ತನಿಖಾ ದಳಕ್ಕೆ) ವಹಿಸಲು ಧಾರವಾಡದ ಹೈಕೋರ್ಟ್ ಪೀಠ ನೀರಾಕರಿಸಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಕರಣದಲ್ಲಿ ಬಿಗ್ ರಿಲೀಪ್ ಸಿಕ್ಕಂತಾಗಿದೆ.
ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆಯನ್ನು ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಆದೇಶವನ್ನು ಕಾಯ್ದಿರಿಸಿತ್ತು. ಶುಕ್ರವಾರ ಈ ಕುರಿತು ಆದೇಶ ನೀಡಿದ್ದು, ಲೋಕಾಯುಕ್ತವೇ ತನಿಖೆ ಮುಂದುವರಿಸಲಿ ಎಂದು ಹೈಕೋರ್ಟ್ ಹೇಳುವ ಮೂಲಕ ಸ್ನೇಹಮಯಿ ಕೃಷ್ಣ ಅವರ ಅರ್ಜಿಯನ್ನು ವಜಾಗೊಳಿಸಿದೆ.
ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಪರವಾಗಿ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಮಣೀಂದ್ರ್ ಸಿಂಗ್, ರಾಜ್ಯ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಸಿದ್ದರಾಮಯ್ಯ ಪತ್ನಿ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದ್ದರು.
ಪ್ರಕರಣ ಸಂಬಂಧ ಅರ್ಜಿದಾರರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಮುಡಾದಿಂದ ನಿವೇಶನಗಳನ್ನು ಅಕ್ರಮವಾಗಿ ಪಡೆದಿರುವ ಆರೋಪವಿದೆ. ಈಗಾಗಲೇ ಪ್ರಕರಣದ ತನಿಖೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ವಹಿಸಿದೆ. ಆದರೆ, ಸಿದ್ದರಾಮಯ್ಯ ರಾಜ್ಯದ ಹಾಲಿ ಮುಖ್ಯಮಂತ್ರಿ ಆಗಿದ್ದು, ರಾಜ್ಯ ಸರ್ಕಾರದ ಇಲಾಖೆಗಳ ಮೇಲೆ ಅದರಲ್ಲೂ ಮುಖ್ಯವಾಗಿ ಲೋಕಾಯುಕ್ತ ಮತ್ತು ಪೊಲೀಸ್ ಪ್ರಾಧಿಕಾರಗಳಂತಹ ತನಿಖಾ ಸಂಸ್ಥೆಗಳ ಮೇಲೆ ಭಾರೀ ಪ್ರಭಾವ ಬೀರುವ ಸಾಧ್ಯತೆಯಿದೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಸ್ನೇಹಮಯಿ ಕೃಷ್ಣ ಕೋರಿದ್ದರು.
ಸುಪ್ರೀಂಕೋರ್ಟ್‌ಗೆ ಅರ್ಜಿ: ವಕೀಲ ಲಕ್ಷ್ಮಣ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುತ್ತಿಕೊಂಡ ಮುಡಾ ಪ್ರಕರಣ ಸಿಬಿಐಗೆ ಸಲ್ಲಿಸಬೇಕು ಎಂಬ ಅರ್ಜಿಯನ್ನು ಹೈ ಕೋರ್ಟ್ ವಜಾಗೊಳಿಸಿದರೂ, ನಾವು ಸುಪ್ರೀಂಕೋರ್ಟ್‌ಗೆ ಹೋಗುತ್ತೇವೆ ಎಂದು ಸ್ನೇಹಮಯಿ ಕೃಷ್ಣ ಪರ ತಂಡದ ವಕೀಲ ಲಕ್ಷ್ಮಣ್ ಸಿ. ಕುಲಕರ್ಣಿ ಹೇಳಿದರು.
ಧಾರವಾಡ ಹೈಕೋರ್ಟ್ ನಲ್ಲಿ ಶುಕ್ರವಾರ (ಫೆ.07) ಈ ಪ್ರಕರಣ ತೀರ್ಪು ಹೊರಬಿದ್ದ ನಂತರ ಮಾದ್ಯಮಗಳ ಜೊತೆಗೆ ಮಾತನಾಡಿದ ಅವರು, “ಸಿದ್ದರಾಮಯ್ಯ ಪ್ರಕರಣವನ್ನು ನ್ಯಾಯಾಲಯವು ಸಿಬಿಐಗೆ ವಹಿಸುವ ಭರವಸೆ ಇತ್ತು. ಆದರೆ ಯಾವ ಆಧಾರದ ಮೇಲೆ ಅರ್ಜಿ ವಜಾ ಆಗಿದೆ ಎಂಬುದನ್ನು ತೀರ್ಪಿನ ಪ್ರತಿ ನಮ್ಮ ಕೈ ಸೇರಿದ ನಂತರ ಗೊತ್ತಾಗುತ್ತದೆ” ಎಂದರು.