“ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೇನು ಮಾಡಿಲ್ಲ ಎಂದು ಹೇಳಿದರೂ ಆರೋಪ ಇರುವ ಕಾರಣ ರಾಜೀನಾಮೆ ನೀಡುವುದು ಉತ್ತಮ” ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಈ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾಧ್ಯಮದೊಂದಿಗೆ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿಗಳು, “ಮುಡಾ ಪ್ರಕರಣದಲ್ಲಿ ತಾನೇನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳುತ್ತಾರೆ. ಆದರೆ ಹೈಕೋರ್ಟ್ ಈ ಆರೋಪಕ್ಕೆ ಸಂಬಂಧಿಸಿದ ಪುರಾವೆಯಿದೆ ಎಂದು ಹೇಳಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ, ಅದು ತಪ್ಪು ಕಲ್ಪನೆ : ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
“ಪ್ರಕರಣ ಅಂತ್ಯವಾದ ಬಳಿಕವಷ್ಟೇ ನಮಗೆ ತನಿಖಾ ಸಂಸ್ಥೆ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದು ತಿಳಿಯುತ್ತದೆ. ಆದರೆ ಸದ್ಯ ಆರೋಪ ಗಂಭೀರವಾಗಿದೆ. ಆದ್ದರಿಂದ ಸೂಕ್ತವಾದ ತೀರ್ಮಾನವನ್ನು ಕೈಗೊಳ್ಳಬೇಕಾಗುತ್ತದೆ” ಎಂದು ತಿಳಿಸಿದ್ದಾರೆ.
“ಸಿದ್ದರಾಮಯ್ಯ ಅವರಿಗೆ ಕಾನೂನು ಹೋರಾಟ ನಡೆಸಲು ಅವಕಾಶವಿದೆ. ಆದರೆ ಸಾರ್ವಜನಿಕರ ದೃಷ್ಟಿಯಿಂದ ರಾಜೀನಾಮೆ ನೀಡುವುದೇ ಉತ್ತಮ ನಿರ್ಧಾರ” ಎಂದು ಹೇಳಿದ್ದಾರೆ.
