ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮವಾಗಿ ನಿವೇಶನಗಳನ್ನು ಪಡೆದಿರುವ ಆರೋಪಕ್ಕೆ ಗುರಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಭಾವಮೈದುನ ಬಿ ಎಂ ಮಲ್ಲಿಕಾರ್ಜುನ ಹಾಗೂ ವಿವಾದ ಭೂಮಿಯ ಮಾಲೀಕ ಜೆ ದೇವರಾಜು ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಮೈಸೂರು ಲೋಕಾಯುಕ್ತ ಪೊಲೀಸರು ಆರೋಪ ಮುಕ್ತಗೊಳಿಸಿದ್ದಾರೆ.
ಆರೋಪಕ್ಕೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಿ ಸಿದ್ಧಪಡಿಸಲಾಗಿರುವ ಒಟ್ಟು 27 ಸಂಪುಟಗಳ ವರದಿಯು ಎಲ್ಲ ದಸ್ತಾವೇಜುಗಳೂ ಸೇರಿದಂತೆ ಒಟ್ಟು 11 ಸಾವಿರ ಪುಟಗಳನ್ನು ಒಳಗೊಂಡಿದೆ. ಈ ಕಂತೆಯನ್ನು ತನಿಖಾಧಿಕಾರಿ ಹಾಗೂ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರು ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರಿಗೆ ಫೆ.20ರಂದು ಸಲ್ಲಿಸಿದ್ದಾರೆ.
ವಿಚಾರಣೆ ನಡೆಸಿದ ಲೋಕಾಯುಕ್ತ ತನಿಖಾಧಿಕಾರಿಗಳು ಪ್ರಕರಣದ ನಾಲ್ವರು ಆರೋಪಿಗಳಾದ ಸಿದ್ದರಾಮಯ್ಯ (ಎ-1 ಆರೋಪಿ), ಪಾರ್ವತಿ (ಎ-2 ಆರೋಪಿ), ಮಲ್ಲಿಕಾರ್ಜುನ ಸ್ವಾಮಿ (ಎ-3 ಆರೋಪಿ) ಹಾಗೂ ದೇವರಾಜು (ಎ-4 ಆರೋಪಿ) ವಿರುದ್ಧದ ಆರೋಪಗಳನ್ನು ಸಾಬೀತು ಮಾಡುವಂತಹ ಸಾಕ್ಷ್ಯಗಳು ತನಿಖೆ ವೇಳೆ ಪತ್ತೆಯಾಗಿಲ್ಲ. ಇದು ಸಿವಿಲ್ ಸ್ವರೂಪದ ಪ್ರಕರಣವಾಗಿದೆ. ಕಾನೂನಿನ ತಪ್ಪು ತಿಳಿವಳಿಕೆಯಿಂದ ಆಗಿರುವಂತಹದ್ದಾಗಿದೆ. ತನಿಖೆ ನಡೆಸಲು ಮತ್ತು ಕ್ರಮ ತೆಗೆದುಕೊಳ್ಳಲು ತಕ್ಕುದಾದ ಪ್ರಕರಣವಾಗಿರುವುದಿಲ್ಲ.ಇದರಡಿಯಲ್ಲಿ ತನಿಖೆ ನಡೆಸದೆ ವಜಾ ಮಾಡಿದ ಮೊಕದ್ದಮೆಗಳು ಬರುತ್ತವೆ ಎಂದು ಐದು ಕಾರಣಗಳನ್ನು ನೀಡಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಡಾ ಪ್ರಕರಣ ಮುಂದೇನು – ಸಿಎಂ ಕುಟುಂಬಕ್ಕೆ ನ್ಯಾಯಾಲಯ ಕ್ಲೀನ್ಚಿಟ್ ನೀಡುತ್ತಾ?
ʼʼಮೈಸೂರು ತಾಲ್ಲೂಕಿನ ಕೆಸರೆ ಗ್ರಾಮದ 3.16 ಎಕರೆ ಜಮೀನಿಗೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮುಡಾ ಅಕ್ರಮವಾಗಿ ಬದಲಿ 14 ನಿವೇಶನಗಳನ್ನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಸಿದ್ದರಾಮಯ್ಯ ಪ್ರಭಾವ ಬೀರಿದ್ದು, ತನಿಖೆ ನಡೆಸಬೇಕು” ಎಂದು ಕೋರಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಆಗಸ್ಟ್ 8, 2024ರಂದು ಜನಪ್ರತಿನಿಧಿಗಳ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ದೂರಿನಲ್ಲಿ ಸ್ನೇಹಮಯಿ ಕೃಷ್ಣ ಕೋರಿದ್ದರು.
ಪೊಲೀಸ್ ಕೈಪಿಡಿ1963ರ ಪ್ರಕಾರ ಮೂರು ರೀತಿಯಲ್ಲಿ ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕೆ ವರದಿ ನೀಡುತ್ತವೆ. ಮೊದಲನೆಯದ್ದು 'ಎ-ರಿಪೋರ್ಟ್' ಇಲ್ಲಿ ಆರೋಪಗಳನ್ನು ಉಲ್ಲೇಖಿಸಿ ವರದಿ ನೀಡಲಾಗುತ್ತದೆ. ಇದನ್ನು ಚಾರ್ಜ್ಶೀಟ್ ಅಂತಲೂ ಕರೆಯಲಾಗುತ್ತದೆ. ಪ್ರಕರಣ ತನಿಖೆಗೆ ಯೋಗ್ಯವಾಗಿಲ್ಲ ಅಥವಾ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದಾಗ 'ಬಿ-ರಿಪೋರ್ಟ್' (ಸುಳ್ಳು ಪ್ರಕರಣ) ಎಂದು ವರದಿ ಸಿದ್ಧವಾಗುತ್ತದೆ. ಇನ್ನೊಂದು 'ಸಿ - ರಿಪೋರ್ಟ್' ಇದೆ. ಉದಾ: ಒಂದು ಬೈಕ್ ಕಳ್ಳತನ ಆಗುತ್ತದೆ. ಈ ಬಗ್ಗೆ ದೂರು ದಾಖಲಾಗುತ್ತದೆ, ನಂತರ ಎಫ್ಐಆರ್ ಆಗುತ್ತದೆ, ತದನಂತರ ತನಿಖೆ ನಡೆಯುತ್ತದೆ, ಕೊನೆಗೆ ಬೈಕ್ ಆರೋಪಿ ಮತ್ತು ಬೈಕ್ ಸಿಗುವುದೇ ಇಲ್ಲ. ಆಗ 'ಸಿ-ರಿಪೋರ್ಟ್' ಹಾಕಲಾಗುತ್ತದೆ. ಅಂದರೆ ನಾಪತ್ತೆ ಪ್ರಕರಣ ಎಂದು ನಮೂದಿಸಿ ಪ್ರಕರಣ ಕ್ಲೋಸ್ ಮಾಡಲು ತಿಳಿಸಲಾಗುತ್ತದೆ.