ಮುಡಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ನೀಡಿದ್ದ ಇ.ಡಿ ಸಮನ್ಸ್ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮುಡಾ ಹಗರಣದಲ್ಲಿ ಎ2 ಆರೋಪಿಯಾಗಿರುವ ಪಾರ್ವತಿ ಸಿದ್ದರಾಮಯ್ಯ ಮತ್ತು ಮುಡಾದಿಂದ ಕಡತಗಳನ್ನು ತೆಗೆದುಕೊಂಡು ಹೋಗಿರುವ ಆರೋಪದ ಮೇಲೆ ಸಚಿವ ಬೈರತಿ ಸುರೇಶ್ ಅವರಿಗೆ ಸೋಮವಾರ ಮತ್ತು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಇ.ಡಿ ನೋಟಿಸ್ ನೀಡಿತ್ತು.
ಇ.ಡಿ ನೋಟಿಸ್ ನೀಡುತ್ತಿದ್ದಂತೆ ಪಾರ್ವತಿ ಸಿದ್ದರಾಮಯ್ಯ ಮತ್ತು ಬೈರತಿ ಸುರೇಶ್ ಹೈಕೋರ್ಟ್ನ ಧಾರವಾಡ ಏಕಸದಸ್ಯ ಪೀಠಕ್ಕೆ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಎರಡು ಅರ್ಜಿ ವಿಚಾರಣೆ ನಡೆಸಿ, ಮುಂದಿನ ವಿಚಾರಣೆವರೆಗೆ ಅಂದರೆ ಫೆಬ್ರವರಿ 10ರ ವರೆಗೆ ಇ.ಡಿ ಸಮನ್ಸ್ಗೆ ತಡೆಯಾಜ್ಞೆ ನೀಡಿದರು.
ಸಿಎಂ ಪತ್ನಿ ಪಾರ್ವತಿ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದು, “14 ಸೈಟ್ ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪವಿದೆ. ಅಪರಾಧದಿಂದ ಗಳಿಸಿದ ಹಣವಿಲ್ಲದಿದ್ದರೂ ತನಿಖೆ ನಡೆಸುತ್ತಿದೆ. ಹೀಗಾಗಿ ತನಿಖೆಗೆ ತಡೆ ನೀಡುವಂತೆ” ಕೋರ್ಟ್ಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮುಡಾ ಪ್ರಕರಣ ಸಿಬಿಐ ತನಿಖೆಗೆ ಮನವಿ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಸಚಿವ ಬೈರತಿ ಸುರೇಶ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, “ಬೈರತಿ ಸುರೇಶ್ ಯಾವುದೇ ಅನುಸೂಚಿತ ಕೇಸ್‌ನ ಆರೋಪಿಯಲ್ಲ. ಆರೋಪಿಯಲ್ಲದಿದ್ದರೂ ಇ.ಡಿಯಿಂದ ಸಮನ್ಸ್ ಜಾರಿಗೊಳಿಸಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದೇ ಮಾದರಿಯ ಮತ್ತೊಂದು ಕೇಸ್‌ನಲ್ಲಿ ಸಮನ್ಸ್ ರದ್ದುಪಡಿಸಲಾಗಿದೆ. ಡಾ.ನಟೇಶ್‌ಗೆ ಇ.ಡಿ ನೀಡಿದ್ದ ಸಮನ್ಸ್‌ನ್ನು ಹೈಕೋರ್ಟ್ ರದ್ದುಪಡಿಸಿದೆ. ಹೀಗಾಗಿ ಮುಂದಿನ ವಿಚಾರಣೆವರೆಗೂ ಇ.ಡಿಯಿಂದ ರಕ್ಷಣೆ ಒದಗಿಸಬೇಕು” ಎಂದು ಮನವಿ ಮಾಡಿದರು.
ಸಿಎಂ ಪ್ರಕರಣದ ವಿಚಾರಣೆ ನಡೆಯುವಾಗ ಇದರಲ್ಲೇಕೆ ಮುಂದುವರಿಯುತ್ತೀರಾ? ಅಪರಾಧದಿಂದ ಗಳಿಸಿದ ಸಂಪತ್ತು ಈಗಿಲ್ಲವಲ್ಲ. ಇ.ಡಿ ತನಿಖೆಯಿಂದ ಹೈಕೋರ್ಟ್ ಕಾಯ್ದಿರಿಸಿರುವ ಕೇಸ್‌ಗೆ ಹಾನಿಯಾಗಬಾರದು. ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸುವಂತಿಲ್ಲವೆಂದು ಆದೇಶ ನೀಡಿದ್ದೇನೆ. ಈಗ ಇ.ಡಿ ತನಿಖೆಗೆ ಅವಕಾಶ ನೀಡುವುದು ಹೇಗೆ? ಈಗಲೇ ತನಿಖೆ ನಡೆಸಬೇಕಾದ ತುರ್ತು ಅಗತ್ಯವೇನಿದೆ” ಎಂದು ನ್ಯಾ. ಎಂ.ನಾಗಪ್ರಸನ್ನ ಪ್ರಶ್ನಿಸಿದರು.
“ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಹಾಜರುಪಡಿಸಿ ಎಂದಷ್ಟೇ ಹೇಳಿದ್ದೇವೆ. ಇದರಿಂದ ಹೈಕೋರ್ಟ್ ಮುಂದಿರುವ ಕೇಸ್‌ಗೆ ಅಡ್ಡಿಯಾಗುವುದಿಲ್ಲ” ಎಂದು ಇ.ಡಿ ಪರ ಎಎಸ್‌ಜಿ ಅರವಿಂದ್ ಕಾಮತ್ ಸ್ಪಷ್ಟಪಡಿಸಿದರು.
“ಸಿಬಿಐ ತನಿಖೆಗೆ ಒಪ್ಪಿಸುವ ಬಗ್ಗೆ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ. ಲೋಕಾಯುಕ್ತ ಪೊಲೀಸರ ತನಿಖೆಯ ವರದಿ ಸಲ್ಲಿಕೆ ಮುಂದೂಡಿದ್ದೇವೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಅಂತಿಮ ವರದಿ ಸಲ್ಲಿಕೆ ಮುಂದೂಡಿದ್ದೇವೆ. ಇಡಿ ನಡೆಸುತ್ತಿರುವ ತನಿಖೆ ಲೋಕಾಯುಕ್ತ ಪೊಲೀಸ್ ಎಫ್‌ಐಆರ್ ಆಧರಿಸಿದೆ. ಹೀಗಾಗಿ ಇಡಿ ಸಮನ್ಸ್ ನಿಂದ ಹೈಕೋರ್ಟ್ ಕಾಯ್ದಿರಿಸುವ ಕೇಸ್ ಮೇಲೆ ಪರಿಣಾಮವಾಗಬಹುದು. ಡಾ. ನಟೇಶ್ ಪ್ರಕರಣದಲ್ಲಿ ಹೈಕೋರ್ಟ್ ಇಡಿ ಸಮನ್ಸ್ ರದ್ದುಪಡಿಸಿದೆ. ಇಡಿ ಹೇಳಿಕೆ ದಾಖಲಿಸಿಕೊಳ್ಳುತ್ತಿದೆ ಅಷ್ಟೇ ಎಂದು ಇಡಿ ಪರ ವಕೀಲರು ಹೇಳಿದ್ದಾರೆ. ಆದ್ರೆ, ಇ.ಡಿ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ” ನ್ಯಾಯಾಧೀಶರು ತಿಳಿಸಿ ವಿಚಾರಣೆ ಮುಂದೂಡಿದರು.