ಹೋಳಿ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರನ್ನು ಪುರಸಭೆಯ ಮುಖ್ಯಸ್ಥರು ಒದ್ದಿರುವ ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಿಜೆಪಿ ನಾಯಕರು ಇದು ‘ಆಶೀರ್ವಾದ’ ಎಂದು ಹೇಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತೆಂಡುಖೇಡ ಪುರಸಭೆಯ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ವಿಷ್ಣು ಶರ್ಮಾ ಹೋಳಿ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಒದ್ದಿದ್ದಾರೆ. ಶರ್ಮಾ ಮುಖಕ್ಕೆ ವ್ಯಕ್ತಿಯೋರ್ವ ಬಣ್ಣ ಹಾಕಿದ್ದು, ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಈ ವೇಳೆ ಬಿಜೆಪಿ ನಾಯಕ ಶರ್ಮಾ ಆ ವ್ಯಕ್ತಿಯ ಭುಜಕ್ಕೆ ಒದ್ದಿದ್ದಾರೆ.
ಇದನ್ನು ಓದಿದ್ದೀರಾ? ಮುಂಬಡ್ತಿ ಸೇರಿ ಇತರೆ ಬೇಡಿಕೆ ಈಡೇರಿಸಲು ಆಗ್ರಹ; ಹೋಳಿ ಆಚರಣೆ ಬಹಿಷ್ಕರಿಸಿದ ರಾಜಸ್ಥಾನ ಪೊಲೀಸರು
ಸದ್ಯ ಈ ವಿಡಿಯೋವನ್ನು ಶರ್ಮಾ ಬೆಂಬಲಿಗರು, ಬಿಜೆಪಿ ನಾಯಕರು ಹಂಚಿಕೊಂಡಿದ್ದಾರೆ. ಶರ್ಮಾ ಒದ್ದಿರುವುದನ್ನು ‘ಆಶೀರ್ವಾದ’ ಎಂದು ಬಣ್ಣಿಸಿದ್ದಾರೆ. ಶರ್ಮಾ ಅವರನ್ನು ಹಾಡಿಹೊಗಳಿದ್ದಾರೆ.
ಇನ್ನು ಬಿಜೆಪಿ ನಾಯಕ ಶರ್ಮಾ ಜನರಿಗೆ ಒದ್ದಿರುವುದು ಇದೇ ಮೊದಲೇನಲ್ಲ. ಕೆಲವು ದಿನಗಳ ಹಿಂದೆ, ಮತ್ತೊಂದು ವಿಡಿಯೋ ವೈರಲ್ ಆಗಿತ್ತು. ಮಾರುಕಟ್ಟೆಯಲ್ಲಿ ಅದೇ ವ್ಯಕ್ತಿಯನ್ನು ಶರ್ಮಾ ಒದ್ದಿದ್ದರು. ಕಾಂಗ್ರೆಸ್ ನಾಯಕರು, ನೆಟ್ಟಿಗರು ಶರ್ಮಾ ವರ್ತನೆಯನ್ನು ಖಂಡಿಸಿದ್ದರು.
ಇದನ್ನು ಓದಿದ್ದೀರಾ? ಬೆಂಗಳೂರು | ಲಾಲ್‌ಬಾಗ್‌ನಲ್ಲಿ ಹೋಳಿ; ಎರಡು ಗುಂಪುಗಳ ನಡುವೆ ಮಾರಾಮಾರಿ
ಇನ್ನು ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಬಿಜೆಪಿ ಯುವ ಘಟಕದ ಸ್ಥಳೀಯ ನಾಯಕ ಉದಿತ್ ಶರ್ಮಾ, “ರಜ್ಜನ್ ಎಂಬ ಅದೇ ವ್ಯಕ್ತಿಯನ್ನು ಮತ್ತೆ ಒದೆಯಲು ಕರೆಯಲಾಯಿತು” ಎಂದು ಹೇಳಿಕೊಂಡಿದ್ದಾರೆ. ಈ ನಡುವೆ ಈ ಹಿಂದೆ ಶರ್ಮಾ ಒದ್ದಿರುವುದನ್ನು ಆಶೀರ್ವಾದ ಎಂದು ಬಿಂಬಿಸಲು ಈಗ ಮತ್ತೆ ವಿಡಿಯೋ ಮಾಡಿ ಬಿಜೆಪಿಗರು ಹಂಚುತ್ತಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಸ್ನೇಹಿ ಪಾಠಕ್, “ನಾನು ವಿಡಿಯೋ ನೋಡಿದ್ದೇನೆ. ಶರ್ಮಾ ಅವರೊಂದಿಗೆ ಮಾತನಾಡುತ್ತೇವೆ, ಅವರ ವಿವರಣೆ ಪಡೆಯುತ್ತೇವೆ. ಈ ವಿಡಿಯೋ ನಿಜವಾಗಿದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು” ಎಂದು ಎನ್‌ಡಿಟಿವಿಗೆ ತಿಳಿಸಿದ್ದಾರೆ.
