ವಿರೋಧಿಗಳ ಮೇಲೆ ಹನಿಟ್ರ್ಯಾಪ್ ಮತ್ತು ಎಚ್‌ಐವಿ ಸೋಂಕಿತ ರಕ್ತ ಇಂಜೆಕ್ಟ್ ಮಾಡಲು ಸಂಚು ಹೂಡಿದ್ದ ಪ್ರಕರಣದಲ್ಲಿ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಹಾಲಿ ವಿಪಕ್ಷ ನಾಯಕ ಆರ್ ಅಶೋಕ್‌ಗೆ ಎಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್ ಮಾಡಲು ಮುನಿರತ್ನ ಸಂಚು ಹೂಡಿದ್ದರು. ಈ ಸಂಚಿನಲ್ಲಿ ಓರ್ವ ಪೊಲೀಸ್ ಇನ್ಸ್‌ಪೆಕ್ಟರ್ ಕೂಡ ಭಾಗಿಯಾಗಿದ್ದಾರೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ತಮ್ಮ ವಿರುದ್ಧ ಸಂಚು ಹೂಡಿದ್ದನ್ನು ತಿಳಿದ ಆರ್ ಅಶೋಕ್, ದೇಶವನ್ನೇ ತೊರೆಯಲು ನಿರ್ಧರಿಸಿದ್ದರು ಎಂದು ವರದಿಯಾಗಿದೆ.
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ, ಹೆಬ್ಬಗೋಡಿಯಲ್ಲಿ ಎಸ್‌ಐ ಆಗಿ ಕರ್ತವ್ಯದಲ್ಲಿದ್ದ ಅಯ್ಯನರೆಡ್ಡಿ ಅವರನ್ನು ಗುರುವಾರ ಸಂಜೆ ಬಂಧಿಸಿದೆ. ಅಲ್ಲದೇ, ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡಿದೆ.
2020ರ ಜುಲೈನಲ್ಲಿ ಆರ್ ಅಶೋಕ್‌ಗೆ ಏಡ್ಸ್ ರಕ್ತ ಇಂಜೆಕ್ಟ್ ಮಾಡಲು ಮುನಿರತ್ನ ಸಂಚು ರೂಪಿಸಿದ್ದರು. ತಮ್ಮ ಹುಟ್ಟುಹಬ್ಬದ ಸಮಯದಲ್ಲಿ, ತಮ್ಮ ಸಮ್ಮುಖದಲ್ಲಿಯೇ ಅಶೋಕ್‌ಗೆ ಎಚ್‌ಐವಿ ರಕ್ತ ಇಂಜೆಕ್ಟ್ ಮಾಡಬೇಕೆಂದು ಯುವಕರ ಮನವೊಲಿಸಲು ಮುನಿರತ್ನ ಯತ್ನಿಸಿದ್ದರು ಎಂದು ಮಾಜಿ ಕೌನ್ಸಿಲರ್, ಮುನಿರತ್ನ ಅವರ ಸಹಚರ ವೇಲು ನಾಯ್ಕರ್ ಎಸ್‌ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ.
ಆದರೆ, ಯುವಕರಿಗೆ ಈ ಅಪರಾಧದಲ್ಲಿ ಸಿಕ್ಕಿಕೊಳ್ಳಬೇಡಿ ಎಂದು ಬುದ್ಧಿವಾದ ಹೇಳಿದ್ದರಿಂದ ಆ ಸಂಚು ಕೈಗೂಡಲಿಲ್ಲ ಎಂದೂ ವೇಲು ಹೇಳಿದ್ದಾರೆಂದು ಎಸ್‌ಐಟಿ ವಿವರಿಸಿದೆ. ಅಲ್ಲದೆ, ಸಂಚಿನಲ್ಲಿ ಭಾಗಿಯಾಗಿದ್ದ ಯುವಕರನ್ನು ಎಸ್‌ಐಟಿ ಪತ್ತೆ ಹಚ್ಚಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಅವರ ಹೇಳಿಕೆ ದಾಖಲಿಸಿದೆ.
‘ಆರ್ ಅಶೋಕ್‌ಗೆ ಇಂಜೆಕ್ಟ್ ಮಾಡಲು ಎಸ್‌ಐ ಅಯ್ಯನ್ ರೆಡ್ಡಿ ಮತ್ತು ಮುನಿರತ್ನ ಮನವೊಲಿಸಲು ಪ್ರಯತ್ನಿಸಿದ್ದರು’ ಎಂದು ಆ ಯುವಕ ಒಪ್ಪಿಕೊಂಡಿದ್ದಾನೆ. ಯುವಕನ ಹೇಳಿಕೆ ಬೆನ್ನಲ್ಲೇ, ಎಸ್‌ಐ ಅಯ್ಯನ್ ರೆಡ್ಡಿಯನ್ನು ಎಸ್‌ಐಟಿ ಬಂಧಿಸಿದೆ.
ಒಕ್ಕಲಿಗ ನಾಯಕರೊಬ್ಬರ ಮೇಲೆ ಹನಿಟ್ರ್ಯಾಪ್ ಮತ್ತು ಎಚ್‌ಐವಿ ಸೋಂಕಿತ ರಕ್ತ ಇಂಜೆಕ್ಟ್ ಮಾಡಲು ಮುನಿರತ್ನ ಸಂಚು ಹೆಣೆದಿದ್ದರೆಂದು ಈ ಹಿಂದೆಯೇ ಬಹಿರಂಗವಾಗಿತ್ತು. ಬಳಿಕ, ಆರ್ ಅಶೋಕ್ ವಿರುದ್ಧವೇ ಈ ಸಂಚು ರೂಪಿಸಲಾಗಿತ್ತೆಂದೂ ವರದಿಯಾಗಿತ್ತು. ಈ ವರದಿಯಿಂದ ಆಘಾತಕ್ಕೊಳಗಾಗಿದ್ದ ಆರ್ ಅಶೋಕ್ ದೇಶವನ್ನೇ ತೊರೆಯಲು ನಿರ್ಧರಿಸಿದ್ದರು. ಈ ಎಲ್ಲಾ ಬೆಳವಣಿಗೆಯ ನಡುವೆ ಕೇಂದ್ರ ಸಚಿವ ವಿ ಸೋಮಣ್ಣ ಜೊತೆ ಮಾತನಾಡಿದ್ದ ಆರ್ ಅಶೋಕ್ ಇತ್ತೀಚೆಗೆ ಸಾರ್ವಜನಿಕ ಸ್ಥಳವೊಂದರಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುನಿರತ್ನ ಏಡ್ಸ್ ಟ್ರಾಪ್ : ಮೂರು ದಿನ ನಿದ್ದೆ ಮಾಡಿಲ್ಲ. ದೇಶ ಬಿಟ್ಟು ಹೋಗೋಣ ಅಂದ್ರು ಮಕ್ಳು. pic.twitter.com/bsFeXclkG4
— 👑Che_ಕೃಷ್ಣ🇮🇳💛❤️ (@ChekrishnaCk) November 10, 2024
“ಏಡ್ಸ್ ರೋಗಿಯ ರಕ್ತವನ್ನು ನನಗೆ ಇಂಜೆಕ್ಟ್ ಮಾಡಲು ಪ್ಲಾನ್ ಮಾಡಲಾಗಿತ್ತು ಎಂಬ ವಿಚಾರ ಕೇಳಿಯೇ ನನಗೆ ಮೂರು ದಿನ ನಿದ್ದೆ ಬಂದಿಲ್ಲ ಅಣ್ಣ. ರಕ್ತ ಕೊಟ್ಟ ಏಡ್ಸ್ ರೋಗಿ ಆ ಹೆಣ್ಣುಮಗಳು ಪೊಲೀಸರ ಮುಂದೆ ನಿಜ ಒಪ್ಪಿಕೊಂಡಿದ್ದಾಳೆ. ಇತರ ಆರೋಪಿಗಳೂ ಸಂಚಿನ ಬಗ್ಗೆ ಹೇಳಿಕೆ ನೀಡಿದ್ದಾರೆ. ಇಂತಹ ರಕ್ತ ಇಂಜೆಕ್ಟ್ ಮಾಡಿದರೆ, ಇಡೀ ವಂಶವೇ ಸರ್ವನಾಶವಾಗುತ್ತದೆ. ಇದೆಲ್ಲ ನೆನಸಿಕೊಂಡು ನನಗೆ ಭಯವಾಗುತ್ತದೆ. ಈ ದೇಶವೇ ಬೇಡ, ದೇಶ ಬಿಟ್ಟು ಹೋಗಿ ಬಿಡಬೇಕೆಂದು ನಿರ್ಧರಿಸುವ ಪರಿಸ್ಥಿತಿ ಎದುರಾಗಿತ್ತು. ಮಕ್ಕಳು ಕೂಡ ಇದೆ ಸಲಹೆ ನನಗೆ ನೀಡಿದ್ದರು” ಎಂದು ಸೋಮಣ್ಣ ಜೊತೆಗೆ ವಿಚಾರವನ್ನು ಹಂಚಿಕೊಳ್ಳುತ್ತಾ, ಆರ್ ಅಶೋಕ್ ಆತಂಕ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಆರ್ ಅಶೋಕ್ ಅವರ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.