ವಕ್ಫ್ ಮಸೂದೆ | ಮುರ್ಶಿದಾಬಾದ್‌ ಕೋಮುಗಲಭೆ: ಊರು ಬಿಡುವುದೊಂದೇ ಜನರಿಗೆ ಕಂಡ ದಾರಿ

Date:

Advertisements
ಯಾವುದೇ ಘಟನೆ ನಡೆದರೂ ಅಲ್ಲಿ ರಾಜಕೀಯದಾಟವಾಡಲು ಯತ್ನಿಸುವ ಬಿಜೆಪಿ ಮುರ್ಶಿದಾಬಾದ್‌ನಲ್ಲಿಯೂ ಈ ಪ್ರಯತ್ನ ಮಾಡಿದೆ, ಬಹುತೇಕ ಯಶಸ್ಸೂ ಕಂಡಂತಿದೆ. ಹಿಂಸಾಚಾರದ ಬೆನ್ನಲ್ಲೇ ಟಿಎಂಸಿ, ಬಿಜೆಪಿ, ಎಸ್‌ಡಿಪಿಐ ರಾಜಕೀಯವು ಬಯಲಾಗುತ್ತಿದೆ. 

ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ, ವಿರೋಧ, ಖಂಡನೆ ವ್ಯಕ್ತವಾಗಿದೆ. ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲಿ ಈ ವಿವಾದಾತ್ಮಕ ಮಸೂದೆಯನ್ನು ಅಂಗೀಕರಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆ ಪೈಕಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಒಬ್ಬರು. ಮಮತಾ ಜನರಿಗೆ ಆಶ್ವಾಸನೆ ನೀಡಿದ ಹೊರತಾಗಿಯೂ ಮುರ್ಶಿದಾಬಾದ್‌ನಲ್ಲಿ ವಕ್ಫ್ ಮಸೂದೆ ವಿರುದ್ಧವಾಗಿ ಪ್ರತಿಭಟನೆ ನಡೆದಿದೆ, ಅದು ಹಿಂಸಾಚಾರಕ್ಕೆ ತಿರುಗಿದೆ, ಮೂವರ ಪ್ರಾಣ ಬಲಿ ತೆಗೆದುಕೊಂಡಿದೆ. ಬಳಿಕ ನಿಷೇದಾಜ್ಞೆ ಹೇರಲಾಗಿದೆ, ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ.

ಈ ಹಿಂಸಾಚಾರವು ಈಗಾಗಲೇ ಕೋಮು ಬಣ್ಣ ಬಳಿದುಕೊಂಡಿದೆ. ಹಿಂದೂ ಮುಸ್ಲಿಮರ ದ್ವೇಷಕ್ಕೆ ಬಿಜೆಪಿ, ಎಸ್‌ಡಿಪಿಐ ಕಿಚ್ಚು ಹಚ್ಚಿದೆ. ಈ ಹಗೆ ಎಂಬ ಬೆಂಕಿಯ ಕೆನ್ನಾಲಿಗೆ ವಿಸ್ತಾರವಾಗಿ ಹರಡುವ ಆತಂಕ ಸೃಷ್ಟಿಯಾಗುತ್ತಿದ್ದಂತೆ ಅದೆಷ್ಟೋ ಜನರು ತಮ್ಮ ಮನೆ, ಆಸ್ತಿ ತೊರೆದು ಬೇರೆ ಪ್ರದೇಶಕ್ಕೆ ಹೋಗಿದ್ದಾರೆ. ಹಿಂಸೆಯ ಕಾವು ಹಬ್ಬಿ ಅತಿಯಾಗುತ್ತಿದ್ದಂತೆ, ಪರಿಸ್ಥಿತಿ ತಣ್ಣಗಾಗಿಸಲು ಸರ್ಕಾರ ಹೆಣಗಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರಾಜಕೀಯ ನಾಟಕಕ್ಕೆ ಮತ್ತೆ ಚಾಲನೆ ಸಿಕ್ಕಿದೆ.

ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆ ಜಾರಿ ಮಾಡಲ್ಲ: ಮಮತಾ ಬ್ಯಾನರ್ಜಿ

Advertisements

ಊರು ತೊರೆದು ಹೋಗುತ್ತಿರುವ ಜನರು

ಕಳೆದ 24 ಗಂಟೆಗಳಿಂದ ಗಂಗಾ ನದಿಯಲ್ಲಿ ದೋಣಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಮುರ್ಶಿದಾಬಾದ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಆತಂಕಗೊಂಡ ಜನರು ದುಲಿಆನ್‌ನಿಂದ ಗಂಗಾ ನದಿಯನ್ನು ದೋಣಿ ಮೂಲಕ ಕ್ರಮಿಸಿ ಬಂದು ಮಾಲ್ಡಾದ ಪರ್ಲಾಪುರ ಪ್ರೌಢಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ದುಲಿಆನ್ ಮತ್ತು ಪರ್ಲಾಪುರ ನಡುವೆ ಸುಮಾರು 15 ಕಿಲೋ ಮೀಟರ್ ಅಂತರವಿದೆ.

ಮಾಲ್ಡಾ ಜಿಲ್ಲಾಧಿಕಾರಿ ನಿತಿನ್ ಸಿಂಘಾನಿಯಾ ಹೇಳುವಂತೆ ಮುರ್ಶಿದಾಬಾದ್‌ನಿಂದ ಈವರೆಗೆ ಸುಮಾರು 170 ಮಂದಿ ಮಾಲ್ಡಾ ತಲುಪಿದ್ದಾರೆ. ಈ ಪೈಕಿ 120 ಜನರು ಪರ್ಲಾಪುರ ಪ್ರೌಢಶಾಲೆಯಲ್ಲಿ ನೆಲೆಸಿದ್ದಾರೆ. ಇತರರು ತಮ್ಮ ಸ್ನೇಹಿತರ, ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾರೆ. ಜಿಲ್ಲಾಡಳಿತವು ಈ ಸಂತ್ರಸ್ತರಿಗೆ ಆಹಾರ ಮತ್ತು ಬಟ್ಟೆ ನೀಡಿದೆ. ಅಗತ್ಯ ಔಷಧಿಗಳನ್ನೂ ನೀಡಿದೆ.

“ತಮ್ಮ ರಕ್ಷಣೆ ಖಚಿತಪಡಿಸುವವರೆಗೂ ನಾವು ಮನೆಗೆ ಹಿಂದಿರುಗುವುದಿಲ್ಲ” ಎನ್ನುತ್ತಾರೆ ಈ ಸಂತ್ರಸ್ತರು. ಈ ನಡುವೆ ಪೊಲೀಸರು ನಿಷ್ಕ್ರಿಯವಾಗಿರುವುದು ಈ ಹಿಂಸಾಚಾರಕ್ಕೆ ಕಾರಣ ಎಂಬುದು ಹಲವು ಮಂದಿಯ, ವಿಶೇಷವಾಗಿ ಮಹಿಳೆಯರ ಆರೋಪ. “ನಾವು ಬದುಕುಳಿದಿರುವುದೇ ಹೆಚ್ಚು” ಎಂದು ಹೇಳಿರುವ ಜನರು ಮಾಧ್ಯಮಗಳಿಗೆ ತಮ್ಮ ಗುರುತು ಬಹಿರಂಗಪಡಿಸಿಲ್ಲ.

ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಹಿಂಸಾಚಾರಕ್ಕೆ ತಿರುಗಿದ ವಕ್ಫ್ ವಿರುದ್ಧದ ಪ್ರತಿಭಟನೆ; ಮೂವರ ಸಾವು

ಟೆಲಿಗ್ರಾಫ್ ಜೊತೆ ಮಾತನಾಡಿರುವ 43 ವರ್ಷದ ಮಹಿಳೆಯೊಬ್ಬರು, “ನನ್ನ ಇಬ್ಬರು ಮಕ್ಕಳೊಂದಿಗೆ ನಾನು ಇಲ್ಲಿಗೆ ಬಂದಿರುವೆ. ಹರಿತವಾದ ಶಸ್ತ್ರಾಸ್ತ್ರದೊಂದಿಗೆ ಗಲಭೆಕೋರರು ಬಂದರು. ನಮ್ಮ ಪಡಿತರವನ್ನು ಹಾಳು ಮಾಡಿದ್ದಾರೆ. ಈ ವೇಳೆ ನನ್ನ ಪತಿ ತಪ್ಪಿಸಿಕೊಂಡು ಓಡಿದ್ದಾರೆ. ಈವರೆಗೂ ಅವರು ಎಲ್ಲಿದ್ದಾರೆ ಎಂಬ ಮಾಹಿತಿಯೇ ನಮಗಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.

ಟಿಎಂಸಿ, ಬಿಜೆಪಿ, ಎಸ್‌ಡಿಪಿಐ ರಾಜಕೀಯ

ಯಾವುದೇ ಘಟನೆ ನಡೆದರೂ ಅಲ್ಲಿ ರಾಜಕೀಯದಾಟವಾಡಲು ಯತ್ನಿಸುವ ಬಿಜೆಪಿ ಮುರ್ಶಿದಾಬಾದ್‌ನಲ್ಲಿಯೂ ಈ ಪ್ರಯತ್ನ ಮಾಡಿದೆ, ಬಹುತೇಕ ಯಶಸ್ಸೂ ಕಂಡಂತಿದೆ. ಹಿಂಸಾಚಾರದ ಬೆನ್ನಲ್ಲೇ ಟಿಎಂಸಿ, ಬಿಜೆಪಿ, ಎಸ್‌ಡಿಪಿಐ ರಾಜಕೀಯವು ಬಯಲಾಗುತ್ತಿದೆ. ಪರಸ್ಪರ ಬೊಟ್ಟು ಮಾಡಿಕೊಳ್ಳುತ್ತಾ ಕೂತಿರುವ ಇವರುಗಳಿಗೆ ಜನರ ಸಂಕಷ್ಟ ಕಾಣುತ್ತಿಲ್ಲ. ಆದರೆ ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಹೇಳುತ್ತಿದೆ ಬಿಎಸ್‌ಎಫ್.

pti photo
ಪಿಟಿಐ ಚಿತ್ರ

ಇವೆಲ್ಲವುದರ ನಡುವೆ ಟಿಎಂಸಿ, ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ಮಗ್ನವಾಗಿದೆ. ಈ ಹಿಂಸಾಚಾರವು ಅತೀ ದೊಡ್ಡ ಪಿತೂರಿ ಎಂಬ ಮಾಹಿತಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಲಭಿಸಿದೆ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಹೇಳಿಕೊಂಡಿದ್ದಾರೆ. “ಕೇಂದ್ರ ಏಜೆನ್ಸಿ ಬಿಎಸ್‌ಎಫ್‌ನ ಕೆಲವರು, ಎರಡು ಮೂರು ರಾಜಕೀಯ ಪಕ್ಷಗಳ ಕೆಲವರು ಈ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ. ಬಿಎಸ್‌ಎಫ್‌ ಸಹಾಯದಿಂದಲೇ ಗಡಿಯಿಂದ ಈ ಕಡೆ ಬಂದು ಹಿಂಸಾಚಾರ ಸೃಷ್ಟಿಸಿ ಹಿಂದಿರುಗಿದ್ದಾರೆ” ಎಂಬುದು ಟಿಎಂಸಿ ನಾಯಕರ ಆರೋಪ. ಈ ಹಿಂಸಾಚಾರ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹಿಂದೂಗಳ ಮೇಲೆ ದಾಳಿ ನಡೆದಿದೆ. ಸುಮಾರು 400ಕ್ಕೂ ಅಧಿಕ ಹಿಂದೂಗಳು ಊರು ಬಿಟ್ಟು ಹೋಗಿದ್ದಾರೆ ಎಂಬುದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪ. ಹಿಂದೂಗಳು ಊರು ಬಿಟ್ಟು ತೆರಳುತ್ತಿದ್ದಾರೆ ಎಂಬ ನಕಲಿ ಚಿತ್ರಗಳೂ ಹರಿದಾಡುತ್ತಿವೆ. ಇವೆಲ್ಲವುದರ ನಡುವೆ ಪೊಲೀಸರು “ಇದು ಪೂರ್ವಯೋಜಿತ ಕೃತ್ಯ, ಎಸ್‌ಡಿಪಿಐ ಕೈವಾಡವಿದೆ” ಎಂದು ಹೇಳಿಕೊಂಡಿದ್ದಾರೆ.

ವಕ್ಫ್ ಮಸೂದೆ ವಿರುದ್ಧವಾಗಿ ಮನೆ-ಮನೆಗೆ ಹೋಗಿ ಪ್ರಚಾರ ಮಾಡಿರುವ ಎಸ್‌ಡಿಪಿಐ ಜನರಲ್ಲಿ ದ್ವೇಷ ಭಾವನೆಯನ್ನು ಹುಟ್ಟಿಸಿದೆ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹೇಳಿದ್ದಾರೆ. ಇಜಾಝ್ ಅಹಮದ್ ಎಂಬ ಪ್ರತಿಭಟನಾಕಾರ ಹಿಂಸಾಚಾರದಲ್ಲಿ ಮೃತಪಟ್ಟಿದ್ದು, ಅವರ ಕುಟುಂಬ ಹೇಳುವ ಪ್ರಕಾರ ಎಸ್‌ಡಿಪಿಐ ಈ ಪ್ರದೇಶದಲ್ಲಿ ಪ್ರಚೋದನಕಾರಿ ಪ್ರಚಾರವನ್ನು ಮಾಡುತ್ತಿತ್ತು.

ಮುರ್ಶಿದಾಬಾದ್‌ನಲ್ಲೀಗ ಪದೇ ಪದೇ ಹಿಂಸಾಚಾರ ನಡೆಯುತ್ತಲೇ ಇದೆ. ಕೆಲವು ಅಪರಿಚಿತರು ಭಾನುವಾರ ಮತ್ತೆ ಹಿಂಸಾಚಾರ ನಡೆಸಲು ಮುಂದಾಗಿದ್ದರು. ಆದರೆ ಅವರನ್ನು ತಡೆಯಲಾಗಿದೆ ಎಂದು ಬಿಎಸ್‌ಎಫ್ ಹೇಳಿದೆ. ಪ್ರಸ್ತುತ ಒಂಬತ್ತು ಬಿಎಸ್‌ಎಫ್ ಪಡೆ, ಎಂಟು ಸಿಆರ್‌ಪಿಎಫ್‌ ಪಡೆಯನ್ನು ಹಿಂಸಾಚಾರ ಪೀಡಿತ ಸುಟಿ, ಶಮ್‌ಸೆರ್‌ಗಂಜ್, ಜಾಂಗೀಪುರದಲ್ಲಿ ನಿಯೋಜಿಸಲಾಗಿದೆ. ಕೋಲ್ಕತ್ತಾ ಹೈಕೋರ್ಟ್‌ನ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಮಮತಾ ಬ್ಯಾನರ್ಜಿ ಸರ್ಕಾರವೂ ಈ ಪ್ರಕರಣದ ತನಿಖೆ ನಡೆಸಲು 23 ಪೊಲೀಸ್ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿದೆ. ಈಗಾಗಲೇ ಹೈಕೋರ್ಟ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಹಿಂಸಾಚಾರದಿಂದ ನೊಂದ ಜೀವಿಗಳ ಪಾಡೇನು?

ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂಸಾಚಾರಕ್ಕೆ ಪ್ರೇರಣೆ ನೀಡುವ ಪಕ್ಷಗಳಿಗೆ ಮುಂದಿನ ಚುನಾವಣೆಗಳು, ತಮ್ಮ ರಾಜಕೀಯ ವಿಸ್ತರಣೆಯಷ್ಟೇ ಕಣ್ಣ ಮುಂದಿರುತ್ತದೆ. ಆದರೆ ಅದರಿಂದಾಗುವ ಹಾನಿ, ನರಬಲಿ, ಜನರಿಗಾಗುವ ಮಾನಸಿಕ ಹಿಂಸೆ ಈ ರಾಜಕಾರಣಿಗಳ ಕಣ್ಣಿಗೆ ರಾಚದು. ಮುರ್ಶಿದಾಬಾದ್ ಹಿಂಸಾಚಾರವೂ ಹೀಗೆಯೇ. ಇದು ಪೂರ್ವಯೋಜಿತವೋ, ಅಲ್ಲವೋ ತನಿಖೆ ಬಳಿಕ ತಿಳಿಯಬೇಕು. ಆದರೆ ಬಡ ಜನರು, ಮಧ್ಯಮ ವರ್ಗದ ವ್ಯಾಪಾರಿಗಳಿಗಾದ ಮಾನಸಿಕ, ಭೌತಿಕ ನಷ್ಟವನ್ನು ತುಂಬುವವರು ಯಾರು?

ಒಂದು ಮನೆ ಕಟ್ಟುವುದು, ಕಾರು-ಬೈಕು ಖರೀದಿಸುವುದು ಈ ದುಬಾರಿ ಯುಗದಲ್ಲಿ ಕಷ್ಟಸಾಧ್ಯ. ಅವೆಲ್ಲವೂ ತಮ್ಮ ಕಣ್ಮುಂದೆಯೇ ಹೊತ್ತಿ ಉರಿದಾಗ ಆಗುವ ಸಂಕಟ ಅನುಭವಿಸಿದವರಿಗಷ್ಟೇ ತಿಳಿಯುವುದು. ಇಲ್ಲಿ ಸಾಮಾಜಿಕ ವಿಚಾರಗಳು ಮಾತ್ರವಲ್ಲ, ಭಾವನೆಗಳೂ ಅಡಗಿವೆ. ಮಾಧ್ಯಮಗಳ ವರದಿ ಪ್ರಕಾರ ಅಧೀರ್ ರವಿದಾಸ್ ಮತ್ತು ಹುಮಯೂನ್ ಮೊಮ್ಮಿನ್ ಎಂಬ ವ್ಯಾಪಾರಿಗಳಿಬ್ಬರು ಈ ಹಿಂಸಾಚಾರದಿಂದಾಗಿ ಸುಮಾರು 5-6 ಲಕ್ಷ ರೂಪಾಯಿ ನಷ್ಟವನ್ನು ಕಂಡಿದ್ದಾರೆ. ಹಿಂಸಾಚಾರದ ನಡುವೆ ಅದೆಷ್ಟೋ ಸಣ್ಣ-ಪುಟ್ಟ ಅಂಗಡಿಗಳನ್ನೂ ಧ್ವಂಸ ಮಾಡಲಾಗಿದೆ, ಲೂಟಿ ನಡೆದಿದೆ. ಸೂಪರ್‌ ಮಾರ್ಕೆಟ್‌ ಒಂದರ ಮೇಲೆ ದಾಳಿ ನಡೆದಿದ್ದು, ಬರೋಬ್ಬರಿ ಎರಡು ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಲೂಟಿ ಮಾಡಲಾಗಿದೆ. ಈ ಹಿಂಸಾಚಾರವನ್ನು ಲೂಟಿಗೆ ಬಳಸಿದಂತಿದೆ. ಈ ಹಿಂದೂ- ಮುಸ್ಲಿಂ ಗಲಭೆಯು ಎಲ್ಲಾ ಧರ್ಮೀಯರ ಬದುಕಿನ ಮೇಲೂ ಪ್ರಭಾವ ಬೀರಿದೆ. ಆರ್ಥಿಕ ನಷ್ಟದೊಂದಿಗೆ ಮಾನಸಿಕ ನೆಮ್ಮದಿಯೂ ದೂರವಾಗಿದೆ ಎನ್ನುತ್ತಾರೆ ಸ್ಥಳೀಯರು.

damage
ಪಿಟಿಐ ಚಿತ್ರ

ನಾವು ಹುಟ್ಟಿ ಬೆಳೆದ ಮನೆಯಲ್ಲೇ ಜೀವಿಸುವುದು ಹಲವು ಮಂದಿ ಆಸೆ. ಆದರೆ ಅವೆಲ್ಲವುದಕ್ಕೂ ಪ್ರಕೃತಿ ವಿಕೋಪಗಳು ಮುಳುವಾಗಬಹುದು. ಎಷ್ಟೇ ಹಾನಿಯಾದರೂ ಇವುಗಳು ಜನರನ್ನು ಒಟ್ಟುಗೂಡಿಸುತ್ತದೆ. ಒಂದಾಗಿ ಬಾಳುವಂತೆ ಮಾಡುತ್ತದೆ. ಜನರು ಪರಸ್ಪರ ಸಹಾಯಹಸ್ತ ಚಾಚುವಂತೆ ಮಾಡುತ್ತದೆ. ಅಂತಹ ಅದೆಷ್ಟೋ ನಿದರ್ಶನಗಳಿವೆ. ಆದರೆ ಇದಕ್ಕೆ ಭಿನ್ನವಾಗಿರುವುದು ಹಿಂಸಾಚಾರ. ಅದರಲ್ಲೂ ಕೋಮು ಹಿಂಸಾಚಾರ. ರಾಜಕೀಯ ಪಕ್ಷಗಳ ಆಟವು ಜನರನ್ನು ಆದಷ್ಟು ದೂರವಾಗಿಸುತ್ತಿವೆ.

ರಾಜಕೀಯದಾಟ, ಆರೋಪ-ಪ್ರತ್ಯಾರೋಪ, ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧದ ಆಕ್ರೋಶ, ಎಲ್ಲಾ ವಿಚಾರದಲ್ಲಿ ನಕಾರಾತ್ಮಕ ಮಧ್ಯಪ್ರವೇಶ, ಕೋಮು ಬಣ್ಣ ಹಚ್ಚಿ ದ್ವೇಷ ಸೃಷ್ಟಿ- ಇವೆಲ್ಲವೂ ಈ ಹಿಂದೆಯೂ ಇತ್ತು, ಇಂದೂ ಇದೆ, ಮುಂದೆಯೂ ಇರುತ್ತದೆ. ಅದರಲ್ಲೂ ಎಲ್ಲಿಯವರೆಗೆ ಕೋಮುವಾದವೇ ರಾಜಕಾರಣಿಗಳ ಅಸ್ತ್ರವಾಗಿರುತ್ತದೋ ಅಲ್ಲಿಯವರೆಗೆ ಸಮಾಜದಲ್ಲಿ ಶಾಂತಿ ನೆಲೆಸದು. ಹಿಂದೂ- ಮುಸ್ಲಿಮರನ್ನು ಒಡೆದು ಪ್ರತ್ಯೇಕ ಧರ್ಮಾಧಾರಿತ ರಾಜಕಾರಣ ನಡೆಯುತ್ತಿದೆ, ಇವು ಸೌಹಾರ್ದ ಭಾರತವನ್ನು ಕಟ್ಟಲು ಬಯಸುತ್ತಿರುವ ಜನರನ್ನು ಸಾಧ್ಯವಾದಷ್ಟು ಕೆಳಕ್ಕೆ ತಳ್ಳುತ್ತಿದೆ. ಆದರೆ ಇವೆಲ್ಲವನ್ನು ಎದುರಿಸಿ ಪುಟಿದೆದ್ದು ಮುನ್ನಡೆಯುವ ಯುವ ಪೀಳಿಗೆ ಬೆಳೆಯುತ್ತಲೇ ಇದೆ, ಮುಂದೆಯೂ ಬೆಳೆಯುತ್ತದೆ ಎಂಬ ಆಶಯ.

Mayuri
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X