- ಕೆಲವು ದಿನಗಳ ಹಿಂದೆ ಔರಂಗಜೇಬನ ಬಗ್ಗೆ ಹೇಳಿಕೆ ನೀಡಿದ್ದ ದೇವೇಂದ್ರ ಫಡ್ನವಿಸ್
- ಜೂನ್ 8ರಂದು ಕೊಲ್ಹಾಪುರದಲ್ಲಿ ಔರಂಗಜೇಬ್ ಉಲ್ಲೇಖಿಸಿ ಯುವಕರು ಆಕ್ಷೇಪಾರ್ಹ ಪೋಸ್ಟ್
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮೊಘಲ್ ರಾಜ ಔರಂಗಜೇಬ್‌ನ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಭಾರತದಲ್ಲಿರುವ ಯಾವುದೇ ಮುಸ್ಲಿಮರು ಔರಂಗಜೇಬನ ವಂಶಸ್ಥರಲ್ಲ, ದೇಶದ ರಾಷ್ಟ್ರೀಯವಾದಿ ಮುಸ್ಲಿಮರಾಗಿದ್ದಾರೆ ಎಂದು ಫಡ್ನವಿಸ್ ಹೇಳಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ಒಂಬತ್ತು ವರ್ಷ ಆಡಳಿತ ಪೂರೈಸಿದ ಸ್ಮರಣಾರ್ಥ ಬಿಜೆಪಿ ಅಕೋಲಾದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾವೇಶದಲ್ಲಿ ದೇವೇಂದ್ರ ಫಡ್ನವಿಸ್ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಛತ್ರಪತಿ ಸಾಂಬಾಜಿ ನಗರದಲ್ಲಿರುವ ಔರಂಗಜೇಬನ ಸ್ಮಾರಕಕ್ಕೆ ವಂಚಿತ ಬಹುಜನ ಅಘಾಡಿ (ವಿಬಿಎ) ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರು ಭೇಟಿ ನೀಡಿದ ನಂತರ ದೇವೇಂದ್ರ ಫಡ್ನವಿಸ್ ಅವರು ಔರಂಗಜೇಬನ ಕುರಿತು ಮಾತನಾಡಿದ್ದಾರೆ.
ದೇವೇಂದ್ರ ಫಡ್ನವಿಸ್ ಅವರು ಕೆಲವು ದಿನಗಳ ಹಿಂದೆ ಕಾರ್ಯಕ್ರಮದಲ್ಲಿ ‘ಔರಂಗಜೇಬನ ಉತ್ತರಾಧಿಕಾರಿಗಳು’ ಎಂದು ಹೇಳಿಕೆ ನೀಡಿದ್ದರು. ಇದರಿಂದ ಭಾರೀ ವಿವಾದ ಉಂಟಾಗಿತ್ತು.
“ನಮ್ಮೆಲ್ಲರಿಗೂ ಛತ್ರಪತಿ ಶಿವಾಜಿ ಮಹಾರಾಜರು ಮಾತ್ರ ರಾಜ. ಮುಸ್ಲಿಮರು ಸಹ ಶಿವಾಜಿ ಅವರನ್ನು ಗೌರವಿಸುತ್ತಾರೆ. ಔರಂಗಜೇಬ್ ಮತ್ತು ಅವನ ವಂಶದವರು ಹೊರಗಿನಿಂದ ವಲಸೆ ಬಂದವರಾಗಿದ್ದಾರೆ. ರಾಷ್ಟ್ರೀಯ ವಿಚಾರಗಳನ್ನು ಹೊಂದಿರುವ ಭಾರತದ ಮುಸ್ಲಿಮರು ಔರಂಗಜೇಬ್‌ನನ್ನು ಎಂದಿಗೂ ಒಪ್ಪುವುದಿಲ್ಲ” ಎಂದು ಫಡ್ನವಿಸ್ ಪ್ರತಿಪಾದಿಸಿದರು.
ದೇವೇಂದ್ರ ಫಡ್ನವಿಸ್ ಅವರು ಕಳೆದ ವಾರ ಔರಂಗಜೇಬ್ ಕುರಿತ ಪೋಸ್ಟರ್ ಹಂಚಿಕೆ ಕುರಿತು ಮಾತನಾಡಿದ್ದರು.
“ಇದ್ದಕ್ಕಿದ್ದಂತೆ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಔರಂಗಜೇಬನ ಮಕ್ಕಳು ಹುಟ್ಟಿಕೊಂಡಿದ್ದಾರೆ. ಔರಂಗಜೇಬ್ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಇದರಿಂದ ಉದ್ವಿಗ್ನತೆ ಉಂಟಾಗಿದೆ” ಎಂದು ಫಡ್ನವಿಸ್ ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಕೊಲೆ ಆರೋಪಿಯನ್ನು ಅಟ್ಟಾಡಿಸಿ ಹತ್ಯೆ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಜೂನ್ 8ರಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕೆಲವು ಯುವಕರು ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಉಲ್ಲೇಖಿಸಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ್ದರು. ಘಟನೆ ಬಳಿಕ ಕೊಲ್ಹಾಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಫಡ್ನವಿಸ್ ಅವರ ವಿರುದ್ಧ ಕೆಲವರು ಕಿಡಿಕಾರಿದ್ದರು.