ಬಿಹಾರ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಇರುವಾಗ ರಾಜ್ಯದಲ್ಲಿ ‘ಮಟನ್ ರಾಜಕೀಯ’ ಶುರುವಾಗಿದೆ. ಆಡಳಿತರೂಢ ಜೆಡಿಯು-ಬಿಜೆಪಿ ಮತ್ತು ವಿರೋಧ ಪಕ್ಷ ಆರ್‌ಜೆಡಿ ನಡುವೆ ಮಾಂಸದೂಟದ ವಿಚಾರದಲ್ಲಿಯೇ ವಾಕ್ಸಮರ ನಡೆಯುತ್ತಿದೆ. “ಸನಾತನದ ಬಗ್ಗೆ ಧೀರ್ಘ ಭಾಷಣ ಮಾಡುವವರು, ಪ್ರತಿದಿನ ಮಾಂಸದೂಟ ಮಾಡುತ್ತಾರೆ” ಎಂದು ಎನ್‌ಡಿಎ ವಿರುದ್ಧ ಆರ್‌ಜೆಡಿ ನಾಯಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಪಟನಾದ ವಿಧಾನಸಭೆಯಲ್ಲಿ ನಡೆದ ಎನ್‌ಡಿಎ ಸಭೆಯ ವಿಡಿಯೋವನ್ನು ತೇಜಸ್ವಿ ಯಾದವ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದ ಸ್ಥಳದಲ್ಲಿ ‘ಮಟನ್ ರೋಗಂಜೋಷ್’ ಇರುವುದು ಕಂಡುಬಂದಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಕನ್ವರ್ ಯಾತ್ರೆ: ಮಾಂಸಾಹಾರಿ ರೆಸ್ಟೋರೆಂಟ್‌ಗಳ ಮುಚ್ಚಿಸಿದ ಹಿಂದೂ ಸಂಘಟನೆ, ಆಹಾರ ಹೇರಿಕೆ ವಿರುದ್ಧ ಆಕ್ರೋಶ
ಈ ಹಿಂದೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ತಂದೆ, ಹಿರಿಯ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಶ್ರಾವಣ ಮಾಸದಲ್ಲಿ ಮೀನು, ಮಾಂಸದೂಟ ಮಾಡಿದ್ದರು. ಈ ಮೂಲಕ ವಿಪಕ್ಷ ನಾಯಕರುಗಳು ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಭಾಷಣದಲ್ಲಿ ಹೇಳಿದ್ದರು. ಆದರೆ ಇದೀಗ ಬಿಹಾರ ವಿಧಾನಸಭೆ ನಡೆಯುವ ವೇಳೆ ಶ್ರಾವಣ ತಿಂಗಳಾದರೂ ಎನ್‌ಡಿಎ ಶಾಸಕರು ಮಾಂಸಹಾರ ಸೇವಿಸುತ್ತಿರುವುದನ್ನು ವಿಪಕ್ಷಗಳು ಟೀಕಿಸಿದೆ.
ಈ ಹಿಂದೆ ಶ್ರಾವಣ ತಿಂಗಳಲ್ಲಿ ಮಾಂಸಹಾರ ಸೇವಿಸಿದ್ದಕ್ಕಾಗಿ ಬಿಜೆಪಿಯಿಂದ ಟೀಕೆಗೆ ಗುರಿಯಾಗಿದ್ದ ತೇಜಸ್ವಿ ಯಾದವ್ ಅವರು ಬಿಜೆಪಿಯ ಆಹಾರ ರಾಜಕೀಯವನ್ನು ಈಗ ಗುರಿಯಾಗಿಸಿಕೊಂಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದೊಂದಿಗೆ, ಬಿಜೆಪಿಯ ಮಂತ್ರಿಗಳು ಮತ್ತು ಶಾಸಕರು ಶ್ರಾವಣ ಸೋಮವಾರದಂದು ಮಟನ್ ತಿನ್ನುತ್ತಿದ್ದಾರೆ” ಎಂದು ಯಾದವ್ ವ್ಯಂಗ್ಯವಾಡಿದ್ದಾರೆ.
“ಮೋದಿ ಅವರ ಸಂಸತ್ತಿನಲ್ಲಿರುವ ಬಿಹಾರದ ಮೂರು ಸಚಿವರುಗಳು ಶ್ರಾವಣ ಮಾಸದಲ್ಲೂ ಪ್ರತಿದಿನ ಮೂರು ಕಿಲೋ ಮಟನ್ ತಿನ್ನುತ್ತಾರೆ. ಆದರೆ ತೋರ್ಪಡಿಕೆಗೆ ಸನಾತನ ಧರ್ಮದ ಬಗ್ಗೆ ಧೀರ್ಘ ಭಾಷಣ ಮಾಡುತ್ತಾರೆ. ನಮಗೆ ಆಹಾರದ ವಿಷಯದಲ್ಲಿ ಯಾವುದೇ ತಕರಾರು ಇಲ್ಲ. ಬೇಕಾದ ಆಹಾರ ಸೇವಿಸಲಿ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟು ತಾರತಮ್ಯ ಹೊಂದಿದ್ದಾರೆ ಎಂಬ ಪ್ರಶ್ನೆ” ಎಂದು ಹೇಳಿದ್ದಾರೆ.
“ಪ್ರಧಾನಿ ಮೋದಿ ಅವರಿಗೆ ಶ್ರಾವಣ ತಿಂಗಳಲ್ಲಿ ಅವರ ಪಕ್ಷದ ನಾಯಕರು ಮಟನ್ ತಿನ್ನುವುದರಿಂದ ತೊಂದರೆಯಿಲ್ಲ. ಆದರೆ ಶ್ರಾವಣದಲ್ಲಿ ಮಾಂಸಹಾರ ಸೇವಿಸದ ನಾಯಕರು ಮಾಂಸಹಾರ ಸೇವಿಸಿದರೆ ತಮ್ಮ ಆಹಾರ ಸಂಸ್ಕೃತಿಯನ್ನು ದೇಶದ ಮೇಲೆ ಹೇರಲು ಯಾವ ಸುಳ್ಳನ್ನೂ ಬಳಸಲು ಸಿದ್ಧರಿರುತ್ತಾರೆ” ಎಂದು ಟೀಕಿಸಿದ್ದಾರೆ.
प्रधानमंत्री श्री @narendramodi जी के असीम आशीर्वाद और कृपा से सावन के सोमवारी को दबा कर मटन 🥩 चापते बीजेपी के मंत्री और विधायक।
— Tejashwi Yadav (@yadavtejashwi) July 21, 2025
मोदी जी की कैबिनेट में बिहार से तीन ऐसे मंत्री है जो सावन में भी प्रतिदिन 3 किलो मटन खाते है लेकिन दिखावटी तौर पर सनातन पर लंबा चौड़ा ज्ञान देते है।… pic.twitter.com/NuvuOwEzKy
ಯಾದವ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಮನೋಜ್ ಶರ್ಮಾ, “ಯಾದವ್ ಅವರು ಆಹಾರ ಕೌಂಟರ್ ನೋಡುತ್ತಿರಬೇಕೇ ಅಥವಾ ಬಿಹಾರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರಬೇಕೇ? ಬಹುಶಃ ಅಡುಗೆ ಮಾಡುವವರು ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಯ್ಕೆಗಳನ್ನು ನೀಡಿರಬಹುದು. ಅದರಲ್ಲಿ ಏನಿದೆ” ಎಂದು ಪ್ರಶ್ನಿಸಿದ್ದಾರೆ.
ಕಳೆದ ವಾರ, ಜೆಡಿಯು ನಾಯಕ ಮತ್ತು ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಯಾನೆ ಲಾಲನ್ ಸಿಂಗ್ ಮಟನ್ ಪಾರ್ಟಿ ಆಯೋಜಿಸಿದ್ದಾರೆ. ಈ ವಿಚಾರದಲ್ಲಿ ಯಾದವ್ ಎನ್‌ಡಿಎ ಮತ್ತು ಪ್ರಧಾನಿಯನ್ನು ಗುರಿಯಾಗಿಸಿಕೊಂಡಿದ್ದರು. “ನಮ್ಮನ್ನು ಅವರು ಸನಾತನ ವಿರೋಧಿಗಳು ಎಂದು ಕರೆದಿದ್ದಾರೆ. ಪ್ರಧಾನಿ ನಾಳೆ ಬಿಹಾರಕ್ಕೆ ಬರುತ್ತಿದ್ದಾರೆ ಮತ್ತು ತಮ್ಮ ಬೆಂಬಲಿಗರಿಗೆ ಮಟನ್ ಪಾರ್ಟಿ ಏರ್ಪಡಿಸಿದ ಲಾಲನ್ ಸಿಂಗ್ ಅವರಿಗೆ ಧನ್ಯವಾದ ಹೇಳಲಿದ್ದಾರೆ. ಅವರು ದಾನ ಕಾರ್ಯವನ್ನು ಮಾಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದರು.
