ಆರ್‌ಟಿಐ ಕಾರ್ಯಕರ್ತ ಗಂಗರಾಜು ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಅಕ್ರಮದ
ಗಂಭೀರ ಆರೋಪ ಮಾಡಿದ್ದಾರೆ.
“ಮೈಸೂರು ಮುಡಾ ಪ್ರಕರಣ ತನಿಖಾ ಹಂತದಲ್ಲಿದ್ದು, ಇ.ಡಿ ದಾಳಿ ನಡೆಸಿ ಕಡತಗಳನ್ನು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿರುವ ಸಮಯದಲ್ಲಿ ಮೂಡಾಗೆ ಬಿಟ್ಟುಕೊಟ್ಟ ರಸ್ತೆ ಜಾಗ ಹಾಗೂ ಪೈಪ್‌ಲೈನ್ ಜಾಗವನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಮುಡಾಗೆ ಸೇರಿದೆ ಎನ್ನಲಾದ 7 ಗುಂಟೆ ಜಾಗವನ್ನು 2023ರ ಸೆಪ್ಟೆಂಬರ್ 29ರಂದು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದು, ಮೈಸೂರು ನಗರದ ಕೆಆರ್ಎಸ್ ರಸ್ತೆಯಲ್ಲಿನ ಸರ್ವೇ ನಂಬರ್ 454ರ ಜಾಗ ನೋಂದಾಯಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
“ಸದರಿ ಜಾಗದಲ್ಲಿ ಗಣೇಶ್ ದೀಕ್ಷಿತ್ ಎಂಬುವವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗವಿದ್ದು, ಅದರಲ್ಲಿ 20 ಗುಂಟೆ ಜಾಗವನ್ನು ಸಿಎಂ ಪತ್ನಿ ಪಾರ್ವತಿಯವರು 20 ಗುಂಟೆ ಜಾಗಕ್ಕೆ 1.85 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದರು. 20 ಗುಂಟೆ ಅಂದರೆ 21,771,99 ಚದರಡಿ ಜಾಗವನ್ನು ನೋಂದಣಿ ಮಾಡಿಸಿಕೊಂಡಿದ್ದರು. ಅದರಲ್ಲಿ 8998 ಚದರಡಿ ಜಾಗವನ್ನು ಗಣೇಶ್ ದೀಕ್ಷಿತ್, ರಸ್ತೆ ಮತ್ತು ಪೈಪ್‌ಲೈನ್‌ಗಾಗಿ ಮುಡಾಗೆ ಬಿಟ್ಟುಕೊಟ್ಟಿದ್ದರು. ಆದರೆ ಮುಡಾಗೆ ಬಿಟ್ಟಿದ್ದ ರಸ್ತೆ ಮತ್ತು ಪೈಪ್‌ಲೈನ್ ಜಾಗವನ್ನೂ ಕೂಡ ತಮ್ಮ ಹೆಸರಿಗೆ ಸೇರಿಸಿಕೊಂಡು ಪಾರ್ವತಿ ನೋಂದಣಿ ಮಾಡಿಸಿಕೊಂಡಿದ್ದಾರೆ” ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಅ.20ರಂದು ದೇಶದ ಮೊದಲ ರೈತರ ಶಾಲೆಗೆ ಶಂಕುಸ್ಥಾಪನೆ
ಆರ್‌ಟಿಐ ಕಾರ್ಯಕರ್ತ ಗಂಗರಾಜು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಆರ್‌ಟಿಐ ಅಡಿ ದಾಖಲೆ ಕೋರಿ ಮಾಹಿತಿ ಸಲ್ಲಿಸಿದ್ದೆ. ಇದರ ಮಾಹಿತಿ ಪ್ರಕಾರ ಮುಡಾದಲ್ಲಿ ಪಾರ್ವತಿಯವರು ದಿನಾಂಕ 2024ರ ಆಗಸ್ಟ್ 30 ಹಾಗೂ 31ರಂದು ಮತ್ತೆ ರಿಜಿಸ್ಟರ್ ತಿದ್ದುಪಡಿ ಮಾಡಿಸಿದ್ದಾರೆ” ಎಂದು ಹೇಳಿದ್ದಾರೆ.
“ಮುಡಾದ ಜಾಗವಾದ ರಸ್ತೆ ಹಾಗೂ ಪೈಪ್‌ಲೈನ್ ಜಾಗ ಹೊರತುಪಡಿಸಿ ಇನ್ನುಳಿದ 12,782 ಚದರಡಿ ಜಾಗಕ್ಕೆ ಮರು ನೋಂದಣಿ ಮಾಡಿಸಿಕೊಂಡಿದ್ದಾರೆ” ಎಂದು ಗಂಗರಾಜು ಹೇಳಿಕೆ ನೀಡಿರುತ್ತಾರೆ.