ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ರಾಮಲಲ್ಲಾ ವಿಗ್ರಹದ ಕೆತ್ತನೆಗೆ ಶಿಲೆ ಸಿಕ್ಕ ಸ್ಥಳದಲ್ಲಿ ಇಂದು ಗುದ್ದಲಿ ಪೂಜೆ ನಡೆಯುತ್ತಿದೆ. ಈ ಪೂಜೆಗೆ ಆಗಮಿಸಿದ್ದ ಸಂಸದ ಪ್ರತಾಪ್ ಸಿಂಹ ಅವರಿಗೆ ಭಾರೀ ಮುಖಭಂಗವಾಗಿದೆ. ಕೆಲ ಸ್ಥಳೀಯರು ಘೇರಾವ್ ಹಾಕಿದ್ದಲ್ಲದೇ, ‘ದಲಿತ ವಿರೋಧಿ’ ಎಂದು ಕರೆದು ಪೂಜೆಗೆ ಅವಕಾಶ ಕಲ್ಪಿಸದೆ ವಾಪಸ್ ಕಳುಹಿಸಿದ ಘಟನೆ ಮೈಸೂರು ತಾಲೂಕಿನ ಹಾರೋಹಳ್ಳಿಯಲ್ಲಿ ನಡೆದಿದೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ರಾಮಲಲ್ಲಾ ಮೂರ್ತಿಯ ಕೃಷ್ಣ ಶಿಲೆ ಕಲ್ಲು ಹಾರೋಹಳ್ಳಿ ಬಳಿಯ ಗುಜ್ಜೇಗೌಡನಪುರದ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕಿತ್ತು. ಈ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ಅವರು ಈ ಹಿಂದೆ ತಿಳಿಸಿದ್ದರು. ಹೀಗಾಗಿ ಇಂದು ಭೂಮಿಪೂಜೆ ಮತ್ತು ರಾಮನ ಪೂಜೆ ಏರ್ಪಡಿಸಲಾಗಿತ್ತು.
Dalit ‘#RamBhakth‘s’ in #Karnataka‘s #Mysuru, #BJP MP #PratapSimha who came to participate in #RamMandirPranPratishtha Pooja near Mysuru was sent away by #Harohalli & #Gujjegowdanapura villagers claiming he was anti- Dalit.
The Pooja was held where the #RamLalla stone was mined… pic.twitter.com/G1JLmt8Zkj
— Hate Detector 🔍 (@HateDetectors) January 22, 2024
ಈ ಕಾರ್ಯಕ್ರಮಕ್ಕೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಆಗಮಿಸಿದ್ದರು. ಈ ವೇಳೆ ಕೆಲ ಸ್ಥಳೀಯರು ಸಂಸದರಿಗೆ ಘೇರಾವ್ ಹಾಕಿದ್ದಲ್ಲದೆ, ಮಹಿಷಾ ದಸರಕ್ಕೆ ವಿರೋಧ ನೆಪ ಹೇಳಿಕೊಂಡು ಅಪಮಾನ ಮಾಡುವ ಮೂಲಕ ದಲಿತ ವಿರೋಧಿ ನಡೆ ಅನುಸರಿಸಿದ್ದಾರೆ. ಹಾಗಾಗಿ, ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಚಕಾರವೆತ್ತಿದ್ದಾರೆ.
ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಇಂದು ಬೆಳಗ್ಗೆ ಆಗಮಿಸುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ಮತ್ತು ದಲಿತ ಮುಖಂಡರು ಜಮೀನಿನ ಬಳಿಯೇ ತಡೆದು ಘೇರಾವ್ ಮಾಡಿ, “ಗೋ ಬ್ಯಾಕ್ ಪ್ರತಾಪ್ ಸಿಂಹ, ದಲಿತ ವಿರೋಧಿ ಪ್ರತಾಪ್ ಸಿಂಹನಿಗೆ ಧಿಕ್ಕಾರ” ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಇದರಿಂದ ವಿಚಲಿತರಾದ ಸಂಸದ ಪ್ರತಾಪ್ ಸಿಂಹ ಸಮಜಾಯಿಷಿ ಕೊಡಲು ಮುಂದಾದರು. ಆದರೆ ಗ್ರಾಮಸ್ಥರು ಅದಕ್ಕೆ ಒಪ್ಪದೆ, “ಇಲ್ಲಿಗೆ ನೀವು ಬರುವುದು ಬೇಡ, ಇಲ್ಲಿಂದ ಜಾಗ ಖಾಲಿ ಮಾಡಿ” ಎಂದು ಖಡಕ್ ಆಗಿ ತಿಳಿಸಿದರು.
ಮಾಜಿ ತಾಪಂ ಸದಸ್ಯ ಹಾರೋಹಳ್ಳಿ ಸುರೇಶ್, “ನೀವೊಬ್ಬ ದಲಿತ ವಿರೋಧಿ. ನಿಮ್ಮ ನಡವಳಿಕೆಯಿಂದ ದಲಿತರ ಭಾವನೆಗೆ ಧಕ್ಕೆಯುಂಟಾಗಿದೆ. ಮಹಿಷ ದಸರಾ ಆಚರಣೆ ಸಂದರ್ಭದಲ್ಲಿ ದಲಿತರನ್ನು ತುಳಿದು ಹಾಕಿ ಬಿಡುತ್ತೇನೆ, ಹೊಸಕಿ ಹಾಕಿ ಬಿಡುತ್ತೇನೆ ಎಂದು ಬೆದರಿಸಿದ್ದ ನೀವು ದಲಿತರ ಜಮೀನಿಗೆ ಏಕೆ ಬರುತ್ತೀರಿ? ಇಲ್ಲಿಂದ ಹೊರ ನಡೆಯಿರಿ” ಎಂದು ಹೇಳಿದರು.
ಈ ವೇಳೆ ಸಂಸದ ಪ್ರತಾಪ್ ಸಿಂಹ, “ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ದಲಿತ ವಿರೋಧಿಯಲ್ಲ” ಎಂದು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನ ಮಾಡಿದರು. ಆದರೆ ಇದರಿಂದ ಸಮಾಧಾನಗೊಳ್ಳದ ಗ್ರಾಮಸ್ಥರು, “ನೀವು ಏನು ಹೇಳುವುದು ಬೇಡ, ಇಲ್ಲಿಂದ ವಾಪಸ್ ಹೋಗಿ” ಎಂದು ಪಟ್ಟು ಹಿಡಿದರು.
ತಾಯಿ ಚಾಮುಂಡೇಶ್ವರಿಗೆ ಕೋಟ್ಯಂತರ ಭಕ್ತರಿದ್ದಾರೆ, ಈ ಮಹಿಷನ ಮೂರು ಮತ್ತೊಂದು ಜನ ಅನುಯಾಯಿಗಳ ತರ್ಲೆಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಹತಾಶೆಯಿಂದ ಕಾಂಗ್ರೆಸ್ಸಿನ ತಾಲೂಕು ಪಂಚಾಯಿತಿ ಸದಸ್ಯ ಮತ್ತು ಕೆಲವರು ಈ ಕೆಲಸ ಮಾಡಿದರು, ಇನ್ನು ಮುಂದೆಯೂ ಮಾಡುತ್ತಾರೆ. pic.twitter.com/bAvEpn4cUl
— Pratap Simha (@mepratap) January 22, 2024
ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ವ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಸಚಿವ ಸಾ.ರಾ.ಮಹೇಶ್ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಪಟ್ಟರಾದರೂ ಗ್ರಾಮಸ್ಥರು ಮಾತ್ರ ಅದಕ್ಕೆ ಬಗ್ಗಲಿಲ್ಲ. ನಂತರ ಸಂಸದ ಪ್ರತಾಪ್ ಸಿಂಹ ಅವರನ್ನೇ ಅಲ್ಲಿಂದ ವಾಪಸ್ ಹೋಗುವಂತೆ ಶಾಸಕರು ವಿನಂತಿಸಿದರು. ಇದರಿಂದ ಕೊನೆಗೆ ಏನೂ ಮಾತನಾಡದೆ ಸಂಸದ ಪ್ರತಾಪ್ ಸಿಂಹ ಕಾರ್ಯಕ್ರಮದಲ್ಲಿ ಭಾಗಿಯಾಗದೆ ಹೊರ ನಡೆದರು. ಆ ಬಳಿಕ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ದಸಂಸ ಮುಖಂಡ ನಟರಾಜ್, ಗ್ರಾಮಸ್ಥರಾದ ಚಲುವರಾಜ್, ಸೋಮಶೇಖರ್, ಬೀರಪ್ಪ, ಧನಗಳ್ಳಿ ಸ್ವಾಮಿ, ರಾಜೇಶ್ ರಾಜೇಂದ್ರ, ಕಿರಣ್, ಸಿ.ಡಿ.ಚಲುವರಾಜು, ಸುನೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಅನುಯಾಯಿಗಳ ತರ್ಲೆಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ: ಪ್ರತಾಪ್ ಸಿಂಹ
“ತಾಯಿ ಚಾಮುಂಡೇಶ್ವರಿಗೆ ಕೋಟ್ಯಂತರ ಭಕ್ತರಿದ್ದಾರೆ, ಈ ಮಹಿಷನ ಮೂರು ಮತ್ತೊಂದು ಜನ ಅನುಯಾಯಿಗಳ ತರ್ಲೆಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಹತಾಶೆಯಿಂದ ಕಾಂಗ್ರೆಸ್ಸಿನ ತಾಲೂಕು ಪಂಚಾಯಿತಿ ಸದಸ್ಯ ಮತ್ತು ಕೆಲವರು ಈ ಕೆಲಸ ಮಾಡಿದರು. ಇನ್ನು ಮುಂದೆಯೂ ಮಾಡುತ್ತಾರೆ” ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.