ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಜೆಡಿಎಸ್ ಸೇರ್ಪಡೆಯಾಗಿದ್ದು, ಜೆಡಿಎಸ್‌ನ ಹಲವರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಹಲವಾರು ಜೆಡಿಎಸ್ ಮುಖಂಡರು ಪಕ್ಷ ತೊರೆದಿದ್ದಾರೆ. ಇದೀಗ, ಮೈಸೂರಿನಲ್ಲಿ ಪಕ್ಷದ ಮುಸ್ಲಿಂ ನಾಯಕರು ಜೆಡಿಎಸ್‌ಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಜೆಡಿಎಸ್‌ನ ರಾಜ್ಯ ಕಾರ್ಯದರ್ಶಿ ಶಾಹಿದ್ ಸೇರಿದಂತೆ ಹಲವಾರು ಮಂದಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. “ಜಾತ್ಯತೀತ ಪಕ್ಷವು ಕೋಮುವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಸರಿಯಲ್ಲ” ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
“ಜೆಡಿಎಸ್ ಜಾತ್ಯತೀಯ ಪಕ್ಷವೆಂದು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಬಂದಿದ್ದೆವು. ಆದರೆ, ಪಕ್ಷವು ಕೋಮುವಾದಿ ಪಕ್ಷದ ಜೊತ ಮೈತ್ರಿ ಮಾಡಿಕೊಂಡಿದೆ. ಇದು ಜಾತ್ಯತೀಯ ನಡೆಯಲ್ಲ. ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಸೌಹಾರ್ದತೆ ಹಾಳು ಮಾಡುವ ಕೃತ್ಯಗಳು ನಡೆದಿದ್ದವು. ಆ ಪಕ್ಷದೊಂದಿಗೆ ಮೈತ್ರಿ ಸರಿಯಲ್ಲ” ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.