ನಾಗಮಂಗಲದಲ್ಲಿ ಅದ್ಭುತವಾದ ಸೌಹಾರ್ದತೆ ಇತ್ತು. ಕಾಲಕಾಲದಲ್ಲಿ ರಾಜಕೀಯದ ಹಸ್ತಕ್ಷೇಪ, ವಿಭಜನೆಯ ರಾಜಕಾರಣ ಮತ್ತು ತುಷ್ಟೀಕರಣದ ಕಾರಣದಿಂದ ಗಲಭೆ ನಡೆದಿದೆ ಎಂದು ಮಾಜಿ ಸಚಿವ ಸಿ ಎನ್ ಅಶ್ವತ್ಥನಾರಾಯಣ ಅರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶುಕ್ರವಾರ ಬಿಜೆಪಿ ಸತ್ಯಶೋಧನಾ ಸಮಿತಿಯ ವರದಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
“ಮತಕ್ಕಾಗಿ ಆಪಾದಿತರ ಕೇಸುಗಳನ್ನು ಹಿಂಪಡೆಯಲಾಗಿದೆ. ಪೊಲೀಸರ ಸಂಪೂರ್ಣ ವೈಫಲ್ಯತೆ ಕಾಣುತ್ತದೆ. ಪೊಲೀಸರ ಕೈಕಟ್ಟಿ ಹಾಕಿದ್ದರು. ಏನೂ ಕ್ರಮ ಕೈಗೊಳ್ಳಲು ಅವರಿಗೆ ಅವಕಾಶ ಇರಲಿಲ್ಲ. ಯಾರ ಮೇಲೂ ಕೇಸ್ ಮಾಡುವ ಹಾಗಿಲ್ಲ. ಯಾರ ಮೇಲೂ ಕ್ರಮ ಕೈಗೊಳ್ಳುವಂತಿಲ್ಲ ಎಂಬ ಸ್ಥಿತಿ ಪೊಲೀಸರದಾಗಿತ್ತು” ಎಂದು ವಿವರಿಸಿದರು.
ಇದೊಂದು ಪೂರ್ವಯೋಜಿತ ಕೃತ್ಯ
“25ರಿಂದ 30 ಜನರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಿದ್ದರು. ಆಗ ಗಲಭೆ ಆಗಿದೆ. ಕಳೆದ ವರ್ಷವೂ ಗಲಭೆ ಆಗಿತ್ತು. ಇದು ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಈ ವೈಫಲ್ಯ ಮತ್ತು ತುಷ್ಟೀಕರಣ ಎದ್ದು ಕಾಣುವಂತಿದೆ” ಎಂದು ಆರೋಪಿಸಿದರು.
“ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಆರೋಪಿಗಳು ಮಾಸ್ಕ್ ಧರಿಸಿದ್ದು ನೋಡಿದರೆ, ಪೆಟ್ರೋಲ್ ಬಾಂಬ್ ಸಿದ್ಧವಿಟ್ಟಿದ್ದನ್ನು ಗಮನಿಸಿದರೆ ಇದೊಂದು ಪೂರ್ವಯೋಜಿತ ಕೃತ್ಯ ಎಂಬುದು ಗೊತ್ತಾಗುತ್ತದೆ. ನಿರ್ದಿಷ್ಟ ಅಂಗಡಿಗಳನ್ನೇ ಗುರಿ ಮಾಡಿ ಮೂರನೇ ಬಾರಿ ಬಂದು ಬೆಂಕಿ ಹಚ್ಚಿದ್ದಾರೆ” ಎಂದು ಹೇಳಿದರು.
“ನಮ್ಮ ಆಡಳಿತಾವಧಿಯಲ್ಲಿ ಎಲ್ಲಿಯೂ ಗಣೇಶೋತ್ಸವ ಸಂದರ್ಭದಲ್ಲಿ ಗಲಾಟೆಗಳು ಆಗಿರಲಿಲ್ಲ. ಇವತ್ತು ರಾಜ್ಯದ 8-10 ಕಡೆ ಗಲಭೆಗಳು ಆಗಿವೆ. ವಿನಾ ಕಾರಣ ಪ್ರಚೋದನೆ ನಡೆದಿದೆ. ಅವರ ಚುನಾಯಿತ ಪ್ರತಿನಿಧಿಗಳು ಬಾಂಗ್ಲಾ ದೇಶದ ಪರಿಸ್ಥಿತಿ ನಿರ್ಮಿಸುತ್ತೇವೆ; ಗವರ್ನರ್ ಕಚೇರಿಗೆ ನುಗ್ಗುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಮೋದಿಜೀ ಅವರನ್ನು ಶೇಖ್ ಹಸೀನ್ ಥರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ” ಎಂದರು.
Vaddu olagaki satytanagi horage barutte e nann maklanna