ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದಲ್ಲಿ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಖಾಲಿ ಇರುವ ಮಾಹಿತಿ ಆಯುಕ್ತರ ಹುದ್ದೆಗೆ ಆಯುಕ್ತರನ್ನು ತಕ್ಷಣ ಭರ್ತಿ ಮಾಡಬೇಕು ಮತ್ತು ಸ್ಥಗಿತಗೊಂಡಿರುವ ಪೀಠದ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.
ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿರುವ ನೈಜ ಹೋರಾಟಗಾರರ ವೇದಿಕೆಯು, ‘2005ರಲ್ಲಿ ಭಾರತ ಸರ್ಕಾರದ ಆಡಳಿತ ಚುಕ್ಕಾಣಿಯನ್ನು ಹಿಡಿದಿದ್ದ ಯುಪಿಎ ಒಕ್ಕೂಟದ ಕಾಂಗ್ರೆಸ್ ಪಕ್ಷದ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರವರು ದೇಶದಲ್ಲಿ ಪಾರದರ್ಶಕವಾದ ಆಡಳಿತ ನಡೆಸಲು ಬದ್ಧರಾಗಿ ಮಾಹಿತಿ ಹಕ್ಕು ಅಧಿನಿಯಮ 2005 ಜಾರಿಗೊಳಿಸಿ ಒಂದು ಇತಿಹಾಸವನ್ನು ಸೃಷ್ಟಿ ಮಾಡಿದ್ದರು. ಈ ನಿಟ್ಟಿನಲ್ಲಿ ದೇಶದಾದ್ಯಂತ ಮಾಹಿತಿ ಆಯೋಗವನ್ನು ರಚಿಸಿ ಮಾಹಿತಿ ಅಧಿನಿಯಮ 2005ರ ಪ್ರಕಾರ ಆಡಳಿತದ ಎಲ್ಲಾ ಮಾಹಿತಿಯು ನಾಗರಿಕರಿಗೆ ದೊರಕುವಂತೆ ಮಾಡಿತು’ ಎಂದು ಉಲ್ಲೇಖಿಸಿದ್ದಾರೆ.
ಕರ್ನಾಟಕ ಸರ್ಕಾರವು ಬೆಂಗಳೂರಿನಿಂದ ಅನತಿ ದೂರದಲ್ಲಿರುವ ಬೆಳಗಾವಿ ಜಿಲ್ಲೆ ಹಾಗೂ ಮುಂಬೈ ಕರ್ನಾಟಕ ವ್ಯಾಪ್ತಿಯಲ್ಲಿರುವ ಏಳು ಜಿಲ್ಲೆಗಳ ನಾಗರಿಕರಿಗೆ ಸುಲಭವಾಗಿ ಮಾಹಿತಿ ದೊರಕುವಂತೆ ಅಲ್ಲಿ ಮಾಹಿತಿ ಆಯೋಗದ ಪೀಠವನ್ನು ರಚನೆ ಮಾಡಿ ಆಯುಕ್ತರನ್ನು ನೇಮಕ ಮಾಡಿತ್ತು. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಹಿತಿ ಆಯುಕ್ತರು ರಾಜೀನಾಮೆ ನೀಡಿದ ಕಾರಣ ಖಾಲಿಯಾದ ಸದರಿ ಹುದ್ದೆಯು ಸುಮಾರು ಎರಡು-ಮೂರು ವರ್ಷಗಳಿಂದ ಭರ್ತಿ ಮಾಡದೆ, ಮಾಹಿತಿ ಆಯುಕ್ತರ ನೇಮಕಾತಿ ಮಾಡದೆ ಸರ್ಕಾರವು ತನ್ನ ಜವಾಬ್ದಾರಿಯಿಂದ ಹಿಂದೆ ಸರಿದಿರುವುದು ದುರದೃಷ್ಟಕರ ಸಂಗತಿ. ಬೆಳಗಾವಿ ಜಿಲ್ಲೆ ಸೇರಿದಂತೆ ಸುಮಾರು ಏಳು ಜಿಲ್ಲೆಗಳ ನಾಗರಿಕರು ಸಲ್ಲಿಸಿದ ಮೇಲ್ಮನವಿ ಸಂಖ್ಯೆ ಹದಿನೈದು ಸಾವಿರ ಗಡಿ ದಾಟಿ ಇತ್ಯರ್ಥಕ್ಕಾಗಿ ಕಾದು ಕುಳಿತಿದೆ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಬರೆದ ಮನವಿಯಲ್ಲಿ ನೈಜ ಹೋರಾಟಗಾರರ ವೇದಿಕೆ ಮಾಹಿತಿ ನೀಡಿದೆ.
ನೈಜ ಹೋರಾಟಗಾರರ ವೇದಿಕೆ
ಆದುದರಿಂದ, ಮಾಹಿತಿ ಆಯೋಗದ ಬೆಳಗಾವಿ ಪೀಠಕ್ಕೆ ತಕ್ಷಣ ಆಯುಕ್ತರನ್ನು ನೇಮಿಸಿ ಮಾಹಿತಿ ಆಯೋಗದ ಪೀಠವು ಪುನರಾರಂಭಗೊಳಿಸಿ ಇತ್ಯರ್ಥಕ್ಕೆ ಕಾಯುತ್ತಿರುವ 15 ಸಾವಿರಕ್ಕೂ ಹೆಚ್ಚು ಮೇಲ್ಮನವಿಗಳ ಇತ್ಯರ್ಥಕ್ಕೆ ಸರ್ಕಾರವು ಮುಂದಾಗಬೇಕು. ಸೂಕ್ತ ಕಾನೂನು ಕ್ರಮಗಳ ಪ್ರಕ್ರಿಯೆಗೆ ಚಾಲನೆ ನೀಡಿ, ನನೆಗುದಿಗೆ ಬಿದ್ದಿರುವ ಬೆಳಗಾವಿ ಮಾಹಿತಿ ಆಯೋಗದ ಪೀಠಕ್ಕೆ ಆಯುಕ್ತರನ್ನು ನೇಮಿಸಿ, ಮರು ಚಾಲನೆ ನೀಡಬೇಕೆಂದು ನೈಜ ಹೋರಾಟಗಾರರ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ.
ನೈಜ ಹೋರಾಟಗಾರರ ವೇದಿಕೆಯ ಪರವಾಗಿ ಹೆಚ್ ಎಂ. ವೆಂಕಟೇಶ್, ಹಂದ್ರಾಳ್ ನಾಗಭೂಷಣ್, ಲೋಕೇಶ್ ಬಿ ಎಸ್, ಜಗದೀಶ್ ಟಿ, ಕುಣಿಗಲ್ ನರಸಿಂಹಮೂರ್ತಿ ಸರ್ಕಾರವನ್ನು ಆಗ್ರಹಿಸಿದ್ದಾರೆ.