ನಂದಿನಿ ಹಾಲಿನ ದರ ಲೀಟರ್‌ಗೆ ಕನಿಷ್ಠ 5 ರೂಪಾಯಿ ಏರಿಕೆ ಸಾಧ್ಯತೆ ಇದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ. 'ನಂದಿನಿ' ಹಾಲು 5 ರೂ. ಏರಿಕೆಯಾದಲ್ಲಿ 47 ರೂ.ಗೆ ಹೆಚ್ಚಳವಾಗಲಿದೆ. ಇದು ಸಹಜವಾಗಿ ಒಂದು ಕಡೆ ರೈತರಿಗೆ ಅನುಕೂಲವಾದರೆ, ಬೆಲೆ ಏರಿಕೆಗಳ ಬಿಸಿ ಸರಣಿಗೆ ತುತ್ತಾಗಿರುವ ಜನತೆಯ ಪ್ರತಿಭಟನೆಗೂ ಇದು ಕಾರಣವಾಗಬಹುದು.
ಹಾಲಿನ ದರ ಏರಿಸಿ ರೈತರಿಗೆ ಅನುಕೂಲ ಮಾಡಿ, ಅದನ್ನು ಗ್ರಾಹಕರಿಂದ ಭರಿಸುವ ಮಾತಾಡಿರುವ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ನಂದಿನ ಹಾಲಿನ ದರ ಏರಿಕೆಯ ಸ್ಪಷ್ಟ ಸುಳಿವು ನೀಡಿದ್ದಾರೆ.
ರಾಜ್ಯದೊಳಗೆ ಸದ್ಯದ ಮಾರುಕಟ್ಟೆಯಲ್ಲಿ ‘ನಂದಿನಿ’ ಹಾಲು ಲೀಟರ್‌ಗೆ 42 ರೂ.ಗೆ ಮಾರಾಟವಾಗುತ್ತಿದೆ. ಉಳಿದಂತೆ ‘ತಿರುಮಲ ಹಾಲು’ 52 ರೂ., ಹೆರಿಟೇಜ್ 50 ರೂ., ದೊಡ್ಲ 50 ರೂ., ಜೆರ್ಸಿ 50 ರೂ., ಅರೋಕ್ಯ 50 ರೂ. ಹಾಗೂ ಅಮುಲ್ 54 ರೂ.ಗೆ ಮಾರಾಟವಾಗುತ್ತಿದೆ.
ಹಾಲಿನ ದರ ಏರಿಕೆ ಬಹುತೇಕ ಖಚಿತವಾಗಿದ್ದು, ದರ ಯಾವಾಗ ಹೆಚ್ಚಲಿದೆ, ಎಷ್ಟು ರೂಪಾಯಿ ಹೆಚ್ಚಲಿದೆ, ಇದರಲ್ಲಿ ರೈತರ ಪಾಲು ಎಷ್ಟು, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಗೆ ಎಷ್ಟು ಉಳಿಯಲಿದೆ ಎಂಬ ಪ್ರಶ್ನೆಗಳಿಗೆ ಖಚಿತ ಉತ್ತರ ಇನ್ನೂ ಸಿಕ್ಕಿಲ್ಲ.
ನಂದಿನಿ ಹಾಲಿನ ದರ ಕನಿಷ್ಠ 5 ರೂಪಾಯಿ ಏರಿಕೆ ಸಾಧ್ಯತೆ ಇದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ. ‘ನಂದಿನಿ’ ಹಾಲು 5 ರೂ. ಏರಿಕೆಯಾದಲ್ಲಿ 47 ರೂ.ಗೆ ಹೆಚ್ಚಳವಾಗಲಿದೆ. ಉಳಿದ ಹಾಲು ಕಂಪನಿಗಳಿಗೆ ಹೋಲಿಸಿದರೆ ಮೇಲ್ನೋಟಕ್ಕೆ ನಂದಿನಿ ಹಾಲಿನ ದರ 2-7 ರೂ. ಕಡಿಮೆಯೇ ಇರಲಿದೆ. ಆದರೆ, ಬೆಲೆ ಏರಿಕೆ ಗಗನ ಮುಟ್ಟಿರುವ ಈ ದಿನಗಳಲ್ಲಿ ‘ನಂದಿನಿ’ ಹಾಲಿನ ದರ ಏರಿಕೆಯನ್ನೇ ಲಾಭವಾಗಿಟ್ಟುಕೊಂಡು ಉಳಿದ ಕಂಪನಿಗಳು ಹಾಲಿನ ದರ ಕಡಿಮೆ ಮಾಡಿದರೆ ಅದು ನೇರವಾಗಿ ಕೆಎಂಎಫ್‌ಗೆ ಹೊಡೆತ ಬೀಳಲಿದೆ. ಈ ಎಚ್ಚರಿಕೆಯಲ್ಲೇ ಸರ್ಕಾರ ಹಾಲಿನ ದರ ಏರಿಕೆಯ ಹುತ್ತಕ್ಕೆ ಕೈಹಾಕಬೇಕಿದೆ.

“ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಆದಷ್ಟು ಶೀಘ್ರವಾಗಿ ಹಾಲಿನ ದರ ಹೆಚ್ಚಳ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಸಚಿವ ಕೆ.ವೆಂಕಟೇಶ್ ವಿಧಾನಪರಿಷತ್‌ನಲ್ಲಿ ಮಂಗಳವಾರ ತಿಳಿಸಿದ್ದಾರೆ.
ಹಾಲಿನ ಬೆಲೆಯನ್ನು ಆಗಸ್ಟ್ 2023 ರಲ್ಲಿ 3 ರೂ. ಹೆಚ್ಚಿಸಲಾಗಿತ್ತು. ಬಳಿಕ ಲೀಟರ್‌ಗೆ 39 ರೂ.ನಿಂದ 42 ರೂ.ಗೆ ಹೆಚ್ಚಿಸಲಾಯಿತು. ಜೂನ್ 2024 ರಲ್ಲಿ ಮತ್ತೆ 2 ರೂ. ಹೆಚ್ಚಿಸಿ, ಹೆಚ್ಚುವರಿಯಾಗಿ 50 ಎಂ.ಎಲ್. ಹಾಲು ನೀಡಲಾಯಿತು. ಇತ್ತೀಚೆಗಷ್ಟೇ ರಾಜ್ಯದಲ್ಲಿ ಸರ್ಕಾರದಿಂದ ಬಸ್ ಪ್ರಯಾಣ ದರ ಏರಿದೆ. ಜೊತೆಗೆ ಮೆಟ್ರೋ ಪ್ರಯಾಣ ದರ ಕೂಡ ಏರಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಹಾಲಿನ ಬೆಲೆ ಏರಿಕೆ ಮಾಡಿದ್ದಲ್ಲಿ ಜನತೆಯ ಪ್ರತಿಭಟನೆಗೂ ಇದು ಕಾರಣವಾಗಬಹುದು.
ಈ ಸುದ್ದಿ ಓದಿದ್ದೀರಾ? ‘ನಂದಿನಿ’ ಮೇಲೆ ಮತ್ತೆ ಅಮುಲ್ ಆಕ್ರಮಣ – ದರ ಸಮರ ತಂತ್ರ!
ಅಷ್ಟೇ ಅಲ್ಲದೇ ಈಗಾಗಲೇ ಕನ್ನಡಿಗರ ಹೆಮ್ಮೆಯ ಹಾಲಿನ ಬ್ರ್ಯಾಂಡ್ ‘ನಂದಿನಿ‘ ಮೇಲೆ ಗುಜರಾತ್‌ನ ‘ಅಮುಲ್’ ಆಕ್ರಮಣಕಾರಿ ದರ ಸಮರ ಸಾರಿದ್ದು, ರಾಜ್ಯದಲ್ಲಿ ಮೊಸರಿನ ದರಗಳನ್ನು ತಗ್ಗಿಸಿ ‘ನಂದಿನಿ’ಗೆ ನೇರ ಸವಾಲೆಸೆದಿದೆ. ‘ನಂದಿನಿ’ ಹಾಲಿನ ದರ ಏರಿಕೆ ಕೇವಲ ಹಾಲಿಗಷ್ಟೇ ಸಿಮೀತವಾಗುವುದಿಲ್ಲ. ಮುಂದಿನ ದಿನಗಳಲ್ಲಿ ನಂದಿನಿ ಮೊಸರು ಸೇರಿ ಉಳಿದ ಉತ್ಪನ್ನಗಳಲ್ಲೂ ಸಹಜವಾಗಿ ದರ ಏರಿಕೆ ಕಾಣಲಿದೆ.
ಮಾರುಕಟ್ಟೆಯಲ್ಲಿ ದರ ಸಮರ ಎಂಬುದು ಸಾಮಾನ್ಯ ಸಂಗತಿ. ಇದನ್ನು ಕಡೆಗಣಿಸಿ ಏಕಾಏಕಿ ಹಾಲು ಮತ್ತು ಉಳಿದ ಉತ್ಪನ್ನಗಳ ದರ ಏರಿಕೆಯಾದಲ್ಲಿ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ ತನ್ನ ಮಾರುಕಟ್ಟೆಯ ಗಣನೀಯ ಪಾಲನ್ನು ಕಳೆದುಕೊಳ್ಳಬೇಕಾಗುತ್ತದೆ. ಗುಜರಾತಿ ಮೂಲದ ‘ಅಮುಲ್’ ಕಂಪನಿ ಈಗಾಗಲೇ ತುದಿಗಾಲಿನಲ್ಲಿ ನಿಂತಿದ್ದು, ದರ ಸಮರವನ್ನು ಎದುರಿಸುವ ಪ್ರತಿತಂತ್ರವನ್ನು ಕೂಡ ಮಹಾಮಂಡಳ ಹೆಣೆಯಬೇಕಿದೆ.

5 ರೂ. 3 ರೂ. 10 ರೂ. ಹೆಚ್ಚಳ ?
“ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ರೈತರ ಒತ್ತಾಯ ಇದೆ. ರೈತರು ಜಾನುವಾರುಗಳಿಗೆ ನೀಡುತ್ತಿರುವ ಮೇವಿನ ಬೆಲೆ ಏರಿಕೆಯಾಗಿದ್ದು, ಈ ಹಿನ್ನೆಲೆ ಹಾಲಿನ ದರ ಲೀಟರ್‌ಗೆ 8 ರೂ.ದಿಂದ 10 ರೂ. ಏರಿಕೆ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ನಾವಿನ್ನೂ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಬಳಿಕ ಅಂತಿಮ ತೀರ್ಮಾನ ಮಾಡುತ್ತೇವೆ. ರೈತರು ಜೀವನೋಪಾಯಕ್ಕಾಗಿ ಹಾಲಿನ ಮೇಲೆ ಅವಲಂಬಿತರಾಗಿದ್ದಾರೆ. ದಿನೇ ದಿನೆ ಹಾಲಿನ ಉತ್ಪಾದನೆ ಹೆಚ್ಚುತ್ತಿದೆ. ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. 5 ರೂ, 3 ರೂ, 10 ರೂ. ಮಾಡುತ್ತೇವೋ ಅದು ಇನ್ನೂ ತೀರ್ಮಾನ ಆಗಿಲ್ಲ. ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಮೊದಲು ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚಿಸಲಾಗುವುದು” ಎಂದು ಸಚಿವ ವೆಂಕಟೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರೈತರ ಅನುಕೂಲಕ್ಕಾಗಿ ದರ ಏರಿಕೆ: ಬಿ. ಶಿವಸ್ವಾಮಿ
ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರು ಈ ವಿಚಾರವಾಗಿ 'ಈದಿನ.ಕಾಂ' ಜೊತೆ ಮಾತನಾಡಿ, "ರೈತರ ಅನುಕೂಲಕ್ಕಾಗಿ ಪ್ರತಿ ಲೀಟರ್ ಹಾಲಿಗೆ 5 ರೂ. ದರ ಏರಿಸಬೇಕು ಎಂಬ ಪ್ರಸ್ತಾವನೆ ಇದೆ. ಆದರೆ ಸರ್ಕಾರ ಎಷ್ಟು ಹೆಚ್ಚು ಮಾಡುತ್ತದೆ ಎಂಬುದು ಗೊತ್ತಿಲ್ಲ. ಹೆಚ್ಚಳವಾಗುವ ಎಲ್ಲ ದರವನ್ನೂ ನಮಗೇ ನೀಡಿ ಎಂದು ರೈತರು ಕೇಳುತ್ತಿದ್ದಾರೆ. ಅದು ಕಷ್ಟ ಸಾಧ್ಯ. ಸರ್ಕಾರ ಹಾಲಿನ ದರವನ್ನು 5 ರೂ.ಗೆ ಏರಿಸಿದಲ್ಲಿ 3 ರೂ. ರೈತರಿಗೆ ಮತ್ತು 2 ರೂ. ನಿಗಮಕ್ಕೆ ಉಳಿಸಿಕೊಂಡರೆ ನಿಗಮವನ್ನು ಕನಿಷ್ಠ ಪಕ್ಷ ಲಾಭವಿಲ್ಲದಿದ್ದರೂ ಅಲ್ಲಿಂದಲ್ಲಿಗೆ ಸರಿದೂಗಿಸಬಹುದು" ಎಂದು ಹೇಳಿದರು.
"ಈಗ ರೈತರಿಂದ ಪ್ರತಿ ಲೀಟರ್ ಹಾಲನ್ನು ಗುಣಮಟ್ಟದ ಆಧಾರದ ಮೇಲೆ 31 ರೂ.ದಿಂದ 34 ರೂ. ದರಗಳಲ್ಲಿ ಖರೀದಿ ಮಾಡಲಾಗುತ್ತಿದೆ. ಪ್ರತ್ಯೇಕವಾಗಿ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಬೇಸಿಗೆ ಕಾರಣದಿಂದ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದ ಜಾಗದಲ್ಲಿ ಈಗ 80 ಲಕ್ಷ ಲೀಟರ್ ಹಾಲು ನಿತ್ಯ ಉತ್ಪಾದನೆಯಾಗುತ್ತಿದೆ. ಹಾಲಿನ ದರ ಏರಿಕೆಯಾದಲ್ಲಿ 80 ಲಕ್ಷ ಲೀಟರ್ ಹಾಲಿಗೂ ಅನ್ವಯವಾಗುತ್ತದೆ. ಆದರೆ ಅಷ್ಟು ಹಾಲು ಖರ್ಚು ಆಗುವುದಿಲ್ಲ. ಉಳಿದ ಹಾಲನ್ನು ನಾವು ಪೌಡರ್ ಮಾಡಿ ಮಾರಾಟ ಮಾಡಬೇಕಾಗುತ್ತದೆ. ಇದರಿಂದ ಹಣದ ಹರಿವು ತಕ್ಷಣಕ್ಕೆ ಆಗುವುದಿಲ್ಲ. ಪರಿಣಾಮ ನಿಗಮಕ್ಕೆ ಹಣಕಾಸಿನ ಕೊರತೆ ಉಂಟಾಗುತ್ತದೆ. ಹೀಗಾಗಿ ಏರಿಕೆಯಾಗುವ ಹಣದಲ್ಲಿ ನಿಗಮಕ್ಕೂ ಸ್ವಲ್ಪ ಉಳಿದರೆ ಅದು ಪರೋಕ್ಷವಾಗಿ ರೈತರಿಗೇ ಅನುಕೂಲವಾಗಲಿದೆ" ಎಂದು ವಿವರಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಮಾತನಾಡಿ, “ಹೈನುಗಾರಿಕೆಯ ಉತ್ಪಾದನೆಯ ವೆಚ್ಚ ಈಗ ಹಿಂದಿಗಿಂತ ಹೆಚ್ಚಾಗಿದೆ. ಹಸುಗಳನ್ನು ಸಾಕುವುದು ಅಷ್ಟು ಸುಲಭವಾಗಿಲ್ಲ. ಮೇವು ಕೊರತೆ ಸಾಕಷ್ಟಿದೆ. ರೈತರ ದೃಷ್ಟಿಯಲ್ಲಿ ಹೈನುಗಾರಿಕೆ ಈಗ ನಷ್ಟದ ದಾರಿ ಹಿಡಿದಿದೆ. ರೈತರಿಗೆ ಲಾಭ ಮಾಡಿಕೊಡುವ ಜವಾಬ್ದಾರಿ ಸರ್ಕಾರದ್ದು. ಸ್ವಾಮಿನಾಥನ್ ಆಯೋಗದ ಪ್ರಕಾರ ಉತ್ಪಾದನೆ ವೆಚ್ಚಕ್ಕೆ ಶೇ.50 ರಷ್ಟು ದರ ಹೆಚ್ಚಳ ಮಾಡಿ, ರೈತರಿಗೆ ನೀಡಬೇಕು. 5 ರೂ. ಇರುವ ಪ್ರೋತ್ಸಾಹಧನವನ್ನು 10 ರೂ.ಗೆ ಏರಿಕೆ ಮಾಡಬೇಕು. ಹಾಗಂತ ದರ ಏರಿಕೆಯ ಹೊರೆಯನ್ನು ಗ್ರಾಹಕರಿಗೆ ಹೇರಬಾರದು. ಗ್ರಾಹಕರಿಗೆ ಹೊರೆಯಾದರೆ ನಾಳೆ ಅದು ನಮಗೂ ಸಮಸ್ಯೆಯಾಗಿಯೇ ಪರಿಣಮಿಸುತ್ತದೆ. ಈ ದೃಷ್ಟಿಯಲ್ಲಿ ಗ್ರಾಹಕ ಮತ್ತ ರೈತ ಸ್ನೇಹಿಯಾಗಿ ಸರ್ಕಾರ ಹಾಲಿನ ದರ ಹೆಚ್ಚಿಸಬೇಕು” ಎಂದು ತಿಳಿಸಿದರು.
“ಹಾಲಿನ ಉತ್ಪನ್ನಗಳಾದ ಬೆಣ್ಣೆ-ತುಪ್ಪದ ಕೊರತೆ ಸಾಕಷ್ಟಿದೆ. ಇದನ್ನು ಹೆಚ್ಚಿಸಿ ಸರ್ಕಾರ ಹಣ ಬರುವಂತೆ ನೋಡಿಕೊಳ್ಳಬೇಕು. ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ಪುನರ್ ಪರಿಶೀಲಿಸಿ, ಅವುಗಳ ದಕ್ಷತೆ ಹೆಚ್ಚಿಸುವ ಮೂಲಕ ಹಣವನ್ನು ಉಳಿಸಬೇಕು. ಕೇಂದ್ರದಿಂದ ರಾಜ್ಯದ ತೆರಿಗೆ ಹಣವನ್ನು ಹಕ್ಕಿನಿಂದ ಪಡೆಯಬೇಕು. ಆಗ ಇದಕ್ಕೆಲ್ಲ ಪರಿಹಾರ ಸಿಗುತ್ತದೆ. ಇದನ್ನು ಬಿಟ್ಟು ಹಾಲಿನ ದರ ಏರಿಸಿ, ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆ ಹೊರೆಸಬಾರದು” ಎಂದರು.

“ಸರ್ಕಾರ ಹಾಲಿನ ದರ ಏರಿಕೆ ಮಾಡುವುದನ್ನು ಸ್ವಾಗತಿಸುತ್ತೇವೆ. ಆದರೆ, ಅದರ ಪ್ರಯೋಜನ ನೇರವಾಗಿ ರೈತರಿಗೆ ಸಿಗಬೇಕು. ರೈತರ ಹೆಸರನಲ್ಲಿ ದುರುಪಯೋಗವಾಗಬಾರದು. ದನಕರುಗಳ ನಿರ್ವಹಣೆ ಕಷ್ಟವಾಗಿದೆ. ಇದರಿಂದ ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಹಾಲಿನ ದರ ಹೆಚ್ಚಳ ಮಾಡಿ ಖರೀದಿ ಮತ್ತು ಕೊಳ್ಳುವವರ ನಡುವೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಸರ್ಕಾರ ಕೇವಲ ತನ್ನ ಬೊಕ್ಕಸ ತುಂಬಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಬಾರದು” ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.