ನ್ಯಾಯಾಧೀಶರ ಬಗ್ಗೆ ಕ್ಷುಲ್ಲಕವಾಗಿ ಬರೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಲಲಿತ್ ಮೋದಿ ಅವರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿ ಬೇಷರತ್ ಕ್ಷಮೆ ಯಾಚಿಸುವಂತೆ ಸೂಚಿಸಿದೆ.
ಐಪಿಎಲ್ನ ಮಾಜಿ ಆಯುಕ್ತ ಲಲಿತ್ ಮೋದಿ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ (ಏಪ್ರಿಲ್ 13) ಛೀಮಾರಿ ಹಾಕಿ ಭೇಷರತ್ ಕ್ಷಮೆ ಯಾಚಿಸುವಂತೆ ಹೇಳಿದೆ.
ಸಾಮಾಜಿಕ ಜಾಲತಾಣ ಪೋಸ್ಟ್ಗಳಲ್ಲಿ ನ್ಯಾಯಾಂಗ ನಿಂದನೆಯ ಪೋಸ್ಟ್ ಮಾಡಿರುವ ಲಲಿತ್ ಮೋದಿ ಸಾಮಾಜಿಕ ಜಾಲತಾಣ ಪೋಸ್ಟ್ಗಳಲ್ಲಿ ಮತ್ತು ರಾಷ್ಟ್ರೀಯ ಸುದ್ದಿಪತ್ರಿಕೆಗಳಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಅಲ್ಲದೆ, ಭಾರತದ ನ್ಯಾಯಾಂಗಕ್ಕೆ ಸಂಬಂಧಿಸಿದ ಅಂತಹ ಪೋಸ್ಟ್ಗಳನ್ನು ಭವಿಷ್ಯದಲ್ಲಿ ಹಾಕುವುದಿಲ್ಲ ಎಂದು ಕ್ಷಮೆ ಯಾಚಿಸಿರುವ ಬಗ್ಗೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲು ಸೂಚಿಸಿದೆ.
‘ಲಲಿತ್ ಮೋದಿ ಕಾನೂನಿಗಿಂತ ಮೇಲಲ್ಲ. ಇಂತಹ ನ್ಯಾಯಾಂಗ ನಿಂದನೆ ಮರುಕಳಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ನೇತೃತ್ವದ ನ್ಯಾಯಪೀಠವು ಎಚ್ಚರಿಸಿದೆ.
“ಅವರು ಸಲ್ಲಿಸಿದ ಅಫಿಡವಿಟ್ ಗಮನಿಸಿದ್ದೇವೆ. ಅವರು ಕೊಟ್ಟಿರುವ ವಿವರಣೆಯಿಂದ ನಮಗೆ ತೃಪ್ತಿಯಾಗಿಲ್ಲ. ಸ್ಪಷ್ಟನೆಯೂ ಸಹ ನ್ಯಾಯಾಂಗದ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎನ್ನುವುದು ನಮ್ಮ ದೃಷ್ಟಿಕೋನ. ವಕೀಲ ಸಿಂಘ್ವಿ ಅವರು ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಪ್ರಮುಖ ದಿನಪತ್ರಿಕೆಗಳಲ್ಲಿ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಹಾಗೂ ಕೋಲ್ಕತ್ತಾದ ಆವೃತ್ತಿಗಳಲ್ಲಿ ಭೇಷರತ್ ಕ್ಷಮೆ ಯಾಚಿಸಲಾಗುವುದು ಎಂದು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ” ಎಂದು ಪೀಠ ಹೇಳಿದೆ.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಪೀಠ ಏಪ್ರಿಲ್ 24ಕ್ಕೆ ಮುಂದೂಡಿದೆ.
ಲಲಿತ್ ಮೋದಿ ವಿರುದ್ಧ ಸಿಯು ಸಿಂಗ್ ಅವರು ಪ್ರಕರಣ ದಾಖಲಿಸಿದ್ದರು. “ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಲಲಿತ್ ಮೋದಿ 2023 ಮಾರ್ಚ್ 30ರಂದು ಮಾಡಿದ ಟ್ವೀಟ್ನಲ್ಲಿ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಾರೆ. ನಂತರ ನ್ಯಾಯಾಂಗದ ಶಿಕ್ಷೆ ತಪ್ಪಿಸಿಕೊಳ್ಳಲು ನೆಪ ಮಾತ್ರಕ್ಕೆ ಕ್ಷಮೆಯಾಚಿಸಿದ್ದಾರೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸಿಯು ಸಿಂಗ್ ಪರವಾಗಿ ಹಿರಿಯ ವಕೀಲ ರಣ್ಜೀತ್ ಕುಮಾರ್ ವಾದ ಮಂಡಿಸಿದ್ದರು.
ಈ ಸುದ್ದಿ ಓದಿದ್ದೀರಾ?: ಮುಸ್ಲಿಂ ಮೀಸಲಾತಿ ರದ್ದು ತೀರ್ಮಾನ ತೀರ ಕಳಪೆ, ದೋಷಪೂರಿತ ನಿರ್ಧಾರ ಎಂದ ಸುಪ್ರೀಂ ಕೋರ್ಟ್
ಹಿರಿಯ ವಕೀಲ ಎ ಎಂ ಸಿಂಘ್ವಿ ಅವರು ಲಲಿತ್ ಮೋದಿ ಪರ ವಾದ ಮಂಡಿಸುತ್ತಲೇ ನ್ಯಾಯಪೀಠ ತೀವ್ರ ತರಾಟೆಗೆ ತೆಗೆದುಕೊಂಡು, “ನ್ಯಾಯಾಧೀಶರು ಇಂತಹವರ ಪಾಕೆಟ್ನಲ್ಲಿದ್ದಾರೆ ಎನ್ನುವ ಹೇಳಿಕೆಯ ಅರ್ಥವೇನು? ನ್ಯಾಯಾಂಗ ಅಷ್ಟು ದುರ್ಬಲ ಎಂದು ಅವರು ಅಂದುಕೊಂಡಿದ್ದಾರೆಯೆ? ನ್ಯಾಯಾಲಯಕ್ಕೆ ಕ್ಷಮೆ ಕೇಳಿರುವುದು ಎಲ್ಲಿದೆ? ಮೊದಲಿಗೆ ನೀವು ಬೇಷರತ್ ಕ್ಷಮೆ ಯಾಚಿಸಿ. ಇಲ್ಲದಿದ್ದರೆ ನ್ಯಾಯಾಂಗ ನಿಂದನೆಯಾಗಲಿದೆ. ಕ್ಷಮೆಯನ್ನು ಸಾರ್ವಜನಿಕವಾಗಿ ಮುಂದಿಡಬೇಕು. ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ನಂಬಿಕೆಯಿದೆ ಎಂದು ಅವರು ಹೇಳಬೇಕು” ಎಂದು ಛೀಮಾರಿ ಹಾಕಿದೆ.
“ನ್ಯಾಯಾಲಯಕ್ಕೆ ಕಾಗದದಲ್ಲಿ ಕ್ಷಮೆ ಯಾಚಿಸಿದರೆ ಒಪ್ಪಿಕೊಳ್ಳುವುದಿಲ್ಲ. ಸಾರ್ವಜನಿಕವಾಗಿ ಅಂತಹ ಹೇಳಿಕೆ ನೀಡಿದ್ದರೆ, ಕ್ಷಮೆಯೂ ಸಾರ್ವಜನಿಕವಾಗಿಯೇ ಕೇಳಬೇಕು. ಯಾರು ಬೇಕಾದರೂ ನ್ಯಾಯಾಂಗದ ಮೇಲೆ ಆರೋಪ ಹೊರಿಸಬಹುದು ಎಂದುಕೊಂಡಿದ್ದಾರೆ, ನಾವು ಅದನ್ನು ಸಹಿಸುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಾಲಯದ ಆದೇಶವನ್ನು ‘ಸ್ಪಷ್ಟವಾಗಿ’ ಕೇಳಿರುವುದಾಗಿ ಸಿಂಘ್ವಿ ಹೇಳಿದ್ದಾರೆ. ಆದೇಶಿಸಿದ ರೀತಿಯಲ್ಲಿಯೇ ಕ್ಷಮೆ ಯಾಚನೆಯ ಭರವಸೆಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ.
“ಲಲಿತ್ ಮೋದಿ ಏನನ್ನು ಬೇಕಾದರೂ ಖರೀದಿಸಬಹುದು ಎಂದು ಅಂದುಕೊಂಡಿರುವಂತಿದೆ. ಆದರೆ ಕಾನೂನು ಮತ್ತು ನ್ಯಾಯವ್ಯವಸ್ಥೆಗಿಂತ ಅವರು ಮೇಲಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.