- ಮಹಾರಾಷ್ಟ್ರ ಸರ್ಕಾರ ಸಮಾರಂಭದಲ್ಲಿ ಸಾವನ್ನಪ್ಪಿದವರ ಬಗ್ಗೆ ಅಧಿಕೃತ ಮಾಹಿತಿ
- ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ₹5 ಲಕ್ಷ ಘೋಷಿಸಿದ ದೇವೇಂದ್ರ ಫಡ್ನಾವಿಸ್
ಕೇಂದ್ರ ಗೃಹಸಚಿವ ಅಮಿತ್ ಶಾ ಭಾಗವಹಿಸಿದ್ದ ಮಹಾರಾಷ್ಟ್ರ ಸರ್ಕಾರ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಜನರಲ್ಲಿ 11 ಮಂದಿ ಸುಡು ಬಿಸಿಲನ್ನು ತಾಳಲಾರದೆ ಮೃತಪಟ್ಟಿದ್ದಾರೆ.
ಸೂಕ್ತ ವ್ಯವಸ್ಥೆಯಿಲ್ಲದೆ ಮಹಾರಾಷ್ಟ್ರ ಸರ್ಕಾರ ಸಮಾರಂಭದಲ್ಲಿ ನಡೆದಿರುವ ಅನಾಹುತದ ಬಗ್ಗೆ ಸ್ವತಃ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ತಡವಾಗಿಯಾದರೂ ಮಾಹಿತಿ ನೀಡಿದ್ದಾರೆ.
ಭಾನುವಾರ ನವಿ ಮುಂಬೈನಲ್ಲಿ ಗರಿಷ್ಠ 38 ಡಿಗ್ರಿ ತಾಪಮಾನ ದಾಖಲಾಗಿತ್ತು. ಬಿಸಿಲಿನ ಝಳಕ್ಕೆ ಜನರು ಹೈರಾಣಾಗಿದ್ದಾರೆ. ಅನೇಕರ ಆರೋಗ್ಯದಲ್ಲಿ ಏರುಪೇರಾಗಿದ್ದು, ಸುಮಾರು 50 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನವಿ ಮುಂಬೈನ ಖಾರ್‌ಘರ್‌ನಲ್ಲಿ ಭಾನುವಾರ ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ನಾರಾಯಣ ಯಾನೆ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಸನ್ಮಾನಿಸಲು ‘ಮಹಾರಾಷ್ಟ್ರ ಭೂಷಣ ಪ್ರಶಸ್ತಿ’ ಸಮಾರಂಭ ಆಯೋಜಿಸಲಾಗಿತ್ತು. ಅಮಿತ್ ಶಾ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು. ಸಮಾರಂಭಕ್ಕೆ ಭಾಗವಹಿಸಿದ್ದವರಲ್ಲಿ 11 ಮಂದಿ ಸುಡು ಬಿಸಿಲಿಗೆ ಬಲಿಯಾಗಿದ್ದಾರೆ.
ವಿವಿಐಪಿ ಅತಿಥಿಗಳಿಗಾಗಿ ಕಾಯುತ್ತಿದ್ದ ಅನೇಕರು ಗಂಟೆಗಟ್ಟಲೆ ಬಿಸಿಲಿನಲ್ಲಿ ಕುಳಿತ ಕಾರಣ ಅಸ್ವಸ್ಥರಾಗಿದ್ದರು. 123ಕ್ಕೂ ಹೆಚ್ಚು ಜನರಿಗೆ ಸುಡು ಬಿಸಿಲಿಗೆ ಬಸವಳಿದು ನಿರ್ಜಲೀಕರಣ, ಆಯಾಸದಂತಹ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಅಸ್ವಸ್ಥರನ್ನು ಆಸ್ಪತ್ರೆಗೆ ಸೇರಿಸಿದರೂ 11 ಜನರು ಮೃತಪಟ್ಟಿದ್ದಾರೆ. ಐವರ ಸ್ಥಿತಿ ಗಂಭೀರವಾಗಿದೆ.
ಈ ಸುದ್ದಿ ಓದಿದ್ದೀರಾ? ಉಮೇಶ್ ಪಾಲ್ ಹತ್ಯೆ | ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಕುಟುಂಬ ಬಹುತೇಕ ಅಂತ್ಯಗೊಳಿಸಿದ ಯೋಗಿ ಸರ್ಕಾರ
ಮೃತರ ಕುಟುಂಬಕ್ಕೆ ಮಹಾರಾಷ್ಟ್ರ ಸರ್ಕಾರ ₹5 ಲಕ್ಷ ಪರಿಹಾರ ಘೋಷಿಸಿದೆ. ಆಸ್ಪತ್ರೆಗೆ ದಾಖಲಾಗಿರುವವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಲಾಗಿದೆ.
ಮಹಾರಾಷ್ಟ್ರ ಸರ್ಕಾರ ಸಮಾರಂಭದಲ್ಲಿ ಬಿಸಿಲಿಗೆ ಇಷ್ಟೊಂದು ಜನರು ಮೃತಪಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುವುದಾಗಿ ಹೇಳಿದೆ. ಆದರೆ ಮುಂಜಾಗ್ರತೆ ಕೈಗೊಳ್ಳದೆ ಇರುವ ಬಗ್ಗೆ ಸರ್ಕಾರದ ಮೇಲೆ ಟೀಕೆ ವ್ಯಕ್ತವಾಗಿದೆ.
ಅವಘಡ ಸಂಭವಿಸಿದ ನಂತರ ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.
ಕಾರ್ಯಕ್ರಮದಲ್ಲಿ ಏಕನಾಥ್ ಶಿಂದೆ, ಫಡ್ನಾವಿಸ್ ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಫೆಬ್ರವರಿಯಿಂದ ದೇಶದಲ್ಲಿ ಹೆಚ್ಚಿನ ತಾಪಮಾನ ವರದಿಯಾಗಿದೆ. ಸಮಾರಂಭ ನಡೆದ ದಿನ ಪ್ರದೇಶದಲ್ಲಿ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ವರದಿಯಾಗಿದೆ.