ಮಣಿಪುರದಲ್ಲಿ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಡವಾಗಿ ಪ್ರತಿಕ್ರಿಯಿಸಿದ ಬಗ್ಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ‘ಇದು ಅತಿ ತಡವಾದ, ಅತಿ ಕಡಿಮೆ ಪ್ರತಿಕ್ರಿಯೆಯಾಗಿದೆ’ ಎಂದಿರುವ ಕಾಂಗ್ರೆಸ್, ‘ಕೇವಲ ಮಾತುಗಳು ಏನೂ ಮಾಡಲಾರವು’ ಎಂದು ಟೀಕಿಸಿದೆ.
ಮಣಿಪುರದ ಹಿಂಸಾಚಾರದ ಬಗ್ಗೆ ಮೊದಲ ಬಾರಿಗೆ ಮಾತನಾಡುವ ಮೂಲಕ ಮೌನ ಮುರಿದಿರುವ ಪ್ರಧಾನಿ ಮೋದಿ, ಚತ್ತೀಸ್‌ಘಡ, ರಾಜಸ್ಥಾನಗಳ ಬಗ್ಗೆ ಪ್ರಸ್ತಾಪಿಸುವ ಮೂಲಕ ರಾಜಕೀಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
‘1800 ಗಂಟೆಗಳ ಕಾಲ ‘ಅರ್ಥಮಾಡಿಕೊಳ್ಳಲಾಗದ ಮತ್ತು ಕ್ಷಮಿಸಲಾಗದ ಮೌನ’ದ ನಂತರ, ಪ್ರಧಾನಿ ಅಂತಿಮವಾಗಿ ಒಟ್ಟು 30 ಸೆಕೆಂಡುಗಳ ಕಾಲ ಮಣಿಪುರದ ಬಗ್ಗೆ ಮಾತನಾಡಿದರು’ ಎಂದು ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.
‘ಇತರ ರಾಜ್ಯಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳನ್ನು, ವಿಶೇಷವಾಗಿ ವಿರೋಧ ಪಕ್ಷಗಳ ಆಳ್ವಿಕೆ ಇರುವ ರಾಜ್ಯಗಳಲ್ಲಿ ನಡೆಯುತ್ತಿರುವ ಅಪರಾಧಗಳಿಗೆ ಸಮೀಕರಿಸುವ ಮೂಲಕ ಪ್ರಧಾನಿ ಮೋದಿ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನಿರ್ಲಕ್ಷಿಸಲಾಗಿದೆ’ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
‘ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ವಿಷಯವನ್ನು ಪ್ರಧಾನಿ ಸಂಪೂರ್ಣವಾಗಿ ಬದಿಗಿಟ್ಟಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.
ಗುರುವಾರ ಸಂಸತ್ತಿನ ಮುಂಗಾರಿನ ಅಧಿವೇಶನ ಪ್ರಾರಂಭವಾಗುವ ಮೊದಲು, ‘ಮಣಿಪುರದ ಬೆತ್ತಲೆ ಮೆರವಣಿಗೆಯ ಘಟನೆಯು 140 ಕೋಟಿ ಭಾರತೀಯರನ್ನು ಅವಮಾನಿಸಿದೆ. ಕಾನೂನು ತನ್ನ ಪೂರ್ಣ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ’ ಎಂದು ಪ್ರಧಾನಿ ಮೋದಿ ಹೇಳಿದ್ದರು.