- ಶರದ್ ಪವಾರ್ ವಿರುದ್ಧ ಜುಲೈ 2 ರಂದು ಅಜಿತ್ ಪವಾರ್ ಬಂಡಾಯ
- ಕೈಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ಶರದ್ ಪತ್ನಿ ಪ್ರತಿಭಾ ಪವಾರ್
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಸಂಸ್ಥಾಪಕ ಶರದ್ ಪವಾರ್ ಅವರ ಪತ್ನಿ ಪ್ರತಿಭಾ ಪವಾರ್ ಅವರನ್ನು ನೋಡಲು ಅವರ ನಿವಾಸಕ್ಕೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ (ಜುಲೈ 15) ತಿಳಿಸಿದ್ದಾರೆ.
ಅಜಿತ್ ಅವರ ಚಿಕ್ಕಮ್ಮ ಪ್ರತಿಭಾ ಪವಾರ್ ದಕ್ಷಿಣ ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಶುಕ್ರವಾರ ಶರದ್ ಪವಾರ್ ಅವರ ಅಧಿಕೃತ ನಿವಾಸ ಸಿಲ್ವರ್ ಓಕ್‌ಗೆ ಮರಳಿದ್ದರು.
ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಚಿಕ್ಕಮ್ಮನ ಕ್ಷೇಮ ಸಮಾಚಾರ ವಿಚಾರಿಸಿದರು.
ಶರದ್ ಪವಾರ್ ವಿರುದ್ಧ ಬಂಡಾಯವೆದ್ದು ಜುಲೈ 2ರಂದು ಏಕನಾಥ ಶಿಂದೆ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಘಟನೆ ಬಳಿಕ ಅವರು ಮೊದಲ ಬಾರಿಗೆ ಸಿಲ್ವರ್ ಓಕ್‌ಗೆ ಭೇಟಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಸಂಪೂರ್ಣ ಮೌನ ಪ್ರತಿಜ್ಞೆ: ಕಾಂಗ್ರೆಸ್ ಆಕ್ರೋಶ
ಅಜಿತ್ ಪವಾರ್ ಅವರು ತಮ್ಮ ಚಿಕ್ಕಮ್ಮ ಪ್ರತಿಭಾ ಪವಾರ್ ಅವರಿಗೆ ಆಪ್ತರು ಎನ್ನಲಾಗಿದೆ. 2019ರಲ್ಲಿ ಬಿಜೆಪಿ ಜೊತೆ ಕೈಜೋಡಿಸಲು ಹೋದಾಗ ಅಜಿತ್ ಅವರನ್ನು ಮತ್ತೆ ಎನ್‌ಸಿಪಿ ತೆಕ್ಕೆಗೆ ತರುವಲ್ಲಿ ಪ್ರತಿಭಾ ಪವಾರ್ ನಿರ್ಣಾಯಕ ಪಾತ್ರ ವಹಿಸಿದ್ದರು.
ಎನ್‌ಸಿಪಿ ನಾಯಕರಿಂದ ಕಾಕಿ ಎಂದು ಪ್ರೀತಿಯಿಂದ ಕರೆಯಲ್ಪಡುವ ಪ್ರತಿಭಾ ಪವಾರ್ ಪಕ್ಷದಲ್ಲಿ ವಿಶೇಷ ಸ್ಥಾನ ಹೊಂದಿದ್ದಾರೆ. ಆದರೆ ಎಂದಿಗೂ ರಾಜಕೀಯದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿಲ್ಲ.