ಸಂಸತ್ತಿನ ವಿಶೇಷ ಅಧಿವೇಶನ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿ ಸೆಪ್ಟೆಂಬರ್ 17 ರಂದು ಸರ್ಕಾರ ಸರ್ವಪಕ್ಷ ಸಭೆ ಕರೆದಿದ್ದು, ವಿಶೇಷ ಅಧಿವೇಶನದ ಉದ್ದೇಶ ಏನು ಅನ್ನೋದು ಇನ್ನೂ ಕೂಡಾ ನಿಗೂಢವಾಗಿಯೇ ಉಳಿದಿದೆ.
5 ದಿನಗಳ ವಿಶೇಷ ಸಂಸತ್ ಅಧಿವೇಶನ ಆರಂಭವಾಗುವ ಒಂದು ದಿನ ಮುನ್ನ ಈ ಸರ್ವ ಪಕ್ಷ ಸಭೆ ಕರೆಯಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 18 ರಿಂದ 5 ದಿನಗಳ ಕಾಲ ಸಂಸತ್‌ನ ವಿಶೇಷ ಅಧಿವೇಶನ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಸೆಪ್ಟೆಂಬರ್ 17 ಭಾನುವಾರ ಸಂಜೆ 4.30ಕ್ಕೆ ಸರ್ವ ಪಕ್ಷ ಸಭೆ ಕರೆಯಲಾಗಿದೆ ಎಂದು ಮಾಹಿತಿ ನೀಡಿದ್ಧಾರೆ. ಈ ಸಂಬಂಧ ರಾಜ್ಯಸಭೆ ಹಾಗೂ ಲೋಕಸಭೆಯ ನಾಯಕರಿಗೆ ಇಮೇಲ್ ಮೂಲಕ ಹಾಗೂ ಪತ್ರದ ಮೂಲಕ ಮಾಹಿತಿ ರವಾನಿಸಲಾಗಿದೆ ಎಂದು ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಹಸು ಮೇಯಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ; ಐವರು ಸಾವು, 8 ಮಂದಿ ಗಾಯ
ಭಾನುವಾರ ಸಂಜೆ ನಡೆಯಲಿರುವ ಸರ್ವ ಪಕ್ಷ ಸಭೆಯಲ್ಲಿ ಮುಂದಿನ ವಾರದಿಂದ ಆರಂಭ ಆಗಲಿರುವ ಸಂಸತ್ ವಿಶೇಷ ಅಧಿವೇಶನದ ಉದ್ದೇಶ ಕುರಿತಾಗಿ ಚರ್ಚೆ ನಡೆಯುವ ಸಾದ್ಯತೆ ಇದೆ. ಆದರೆ ವಿಪಕ್ಷಗಳಿಗೆ ವಿಶೇಷ ಅಧಿವೇಶನದ ಉದ್ದೇಶ ಕುರಿತಾಗಿ ಯಾವುದೇ ಮಾಹಿತಿ ಇಲ್ಲ. ಹೀಗಾಗಿ, ಅಧಿವೇಶನದ ಉದ್ದೇಶ ಏನಿರಬಹುದು ಎಂಬ ವಿಚಾರದ ಕುರಿತಾಗಿ ಹಲವು ಊಹಾಪೋಹಗಳು ಶುರುವಾಗಿವೆ.
ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಸರ್ಕಾರದ ನಿರ್ಧಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿಯ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರವಿಲ್ಲ ಎಂದು ಹೇಳಿದರು.
“ವಿಶೇಷ ಸಂಸತ್ ಅಧಿವೇಶನ ಪ್ರಾರಂಭವಾಗುವುದಕ್ಕೆ ಎರಡು ಕೆಲಸದ ದಿನಗಳು ಬಾಕಿ ಉಳಿದಿವೆ. ಯಾವ ಉದ್ದೇಶಕ್ಕೆ ಕರೆಯಲಾಗಿದೆ ಎಂದು ಇನ್ನೂ ಮಾಹಿತಿ ನೀಡಿಲ್ಲ. ಇದು ಇಬ್ಬರಿಗೆ ಮಾತ್ರ ತಿಳಿದಿದೆ! ನಾವು ಇನ್ನೂ ನಮ್ಮನ್ನು ಸಂಸದೀಯ ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ” ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.