- 2002ರಲ್ಲಿ ನಡೆದಿದ್ದ ಗಲಭೆಯಲ್ಲಿ 11 ಜನರನ್ನು ಹತ್ಯೆ ಮಾಡಲಾಗಿತ್ತು
- ಎಸ್ಐಟಿ ಪ್ರಕರಣಗಳ ವಿಶೇಷ ನ್ಯಾಯಾಲಯದಿಂದ ಆದೇಶ ಪ್ರಕಟ
ಗುಜರಾತಿನ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡ್ನಾನಿ ಮತ್ತು ಬಜರಂಗದಳದ ಮಾಜಿ ನಾಯಕ ಬಾಬು ಬಜರಂಗಿ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳು ಖುಲಾಸೆಯಾಗಿದ್ದಾರೆ.
2002ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಕೋಮು ಗಲಭೆಯಲ್ಲಿ ಮುಸ್ಲಿಂ ಸಮುದಾಯದ 11 ಜನರನ್ನು ಹತ್ಯೆಗೈಯಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 86 ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 307 (ಕೊಲೆಗೆ ಯತ್ನ), 143 (ಕಾನೂನುಬಾಹಿರ ಸಭೆ), 147 (ಗಲಭೆ), 148 (ಮಾರಕ ಆಯುಧಗಳಿಂದ ಶಸ್ತ್ರಸಜ್ಜಿತವಾದ ಗಲಭೆ), 120 (ಬಿ) (ಕ್ರಿಮಿನಲ್ ಪಿತೂರಿ) 150 ( ಕೋಮು ಹಿಂಸಾಚಾರಕ್ಕೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಒಟ್ಟು ಆರೋಪಿಗಳಲ್ಲಿ 18 ಜನರು ಈಗಾಗಲೇ ಮೃತಪಟ್ಟಿದ್ದರು. ಉಳಿದ 68 ಮಂದಿಯನ್ನು ಪ್ರಕರಣದಿಂ ಆರೋಪ ಮುಕ್ತಗೊಳಿಸಿ ಎಸ್ಐಟಿ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎಸ್‌ಕೆ ಬಾಕ್ಸಿ ಅವರು ತೀರ್ಪು ನೀಡಿದ್ದಾರೆ.
ಪ್ರಕರಣ ಸಂಬಂಧ 2010ರಲ್ಲಿ ಆರಂಭವಾದ ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ 187 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಸುಮಾರು 13 ವರ್ಷಗಳ ಕಾಲ 6 ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದ್ದಾರೆ ಎಂದು ವಿಶೇಷ ಪ್ರಾಸಿಕ್ಯೂಟರ್ ಸುರೇಶ್ ಶಾ ತಿಳಿಸಿದ್ದಾರೆ.
ಘಟನೆ ಏನು?
2002ರ ಫೆ. 27ರಂದು ಗೋಧ್ರಾದಲ್ಲಿ ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರಿದ್ದ ಸಾಬರಮತಿ ಎಕ್ಸ್‌ಪ್ರೆಸ್‌ನ ಎಸ್-6 ಭೋಗಿಗೆ ಬೆಂಕಿ ಹಚ್ಚಿಲಾಗಿತ್ತು. ಘಟನೆಯಲ್ಲಿ 58 ಜನರು ಸಾವನ್ನಪ್ಪಿದ್ದರು. ಘಟನೆಯಿಂದ ಗುಜರಾತ್‌ನಾದ್ಯಂತ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಅಹಮದಾಬಾದ್ ನಗರದ ನರೋಡಾ ಗಾಮ್‌ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ 11 ಮಂದಿಯನ್ನು ಕೊಲೆ ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? : ಸಲಿಂಗ ವಿವಾಹ ಮಾನ್ಯತೆ | ದೈಹಿಕ ಸಂಬಂಧ ಮಾತ್ರವಲ್ಲ ಭಾವನಾತ್ಮಕ ಸಂಬಂಧ ಹೊಂದಿದೆ : ಡಿ ವೈ ಚಂದ್ರಚೂಡ್
2002ರಲ್ಲಿ ಗುಜರಾತ್‌ನಲ್ಲಿ ನರೇಂದ್ರ ಮೋದಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆ ಸರ್ಕಾರದಲ್ಲಿ ಮಾಯಾ ಕೊಡ್ನಾನಿ ಸಚಿವರಾಗಿದ್ದರು. ಕೊಡ್ನಾನಿ ಅವರು 97 ಜನರನ್ನು ಕಗ್ಗೊಲೆ ಮತ್ತು ನರೋಡಾ ಪಾಟಿಯಾ ಗಲಭೆ ಪ್ರಕರಣದಲ್ಲಿ ಅಪರಾಧಿ ಮತ್ತು 28 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ನಂತರ ಆಕೆಯನ್ನು ಗುಜರಾತ್ ಹೈಕೋರ್ಟ್ ಬಿಡುಗಡೆಗೊಳಿಸಿತ್ತು. ಸೆಪ್ಟೆಂಬರ್ 2017ರಲ್ಲಿ ಈಗಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಯಾ ಕೊಡ್ನಾನಿ ಪರ ಸಾಕ್ಷಿಯಾಗಿ ಕಾಣಿಸಿಕೊಂಡಿದ್ದರು.
2002ರಲ್ಲಿ ನಡೆದ 9 ಪ್ರಮುಖ ಕೋಮು ಗಲಭೆ ಪ್ರಕರಣಗಳಲ್ಲಿ ಒಂದಾಗಿದ್ದ ನರೋಡಾ ಗಾಮ್ ಹತ್ಯಕಾಂಡ ಪ್ರಕರಣದಲ್ಲಿ ಆಕೆಯ ಮೇಲೆ ಗಲಭೆ, ಕೊಲೆ ಮತ್ತು ಕೊಲೆ ಯತ್ನದ ಜೊತೆಗೆ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿತ್ತು. ನರೋಡಾ ಗಾಮ್ ಹತ್ಯಾಕಾಂಡ ಕುರಿತು ಎಸ್‌ಐಟಿ ಮತ್ತು ವಿಶೇಷ ನ್ಯಾಯಾಲಯ ತನಿಖೆ ಮತ್ತು ವಿಚಾರಣೆ ನಡೆಸುತ್ತಿದ್ದವು.