ಜಿ20 ಶೃಂಗಸಭೆಯ ವೇಳೆ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ ‘President Of India’ ಬದಲು ‘President Of Bharat’ ಎಂದು ಬರೆಯಲಾಗಿದೆ. ದೇಶದ ಹೆಸರು ಬದಲಾವಣೆಗೆ ಹೊರಟಿರುವ ಕೇಂದ್ರದ ನಡೆಗೆ ವಿಪಕ್ಷಗಳು ಸೇರಿದಂತೆ ದೇಶದ ಹಲವೆಡೆ ಆಕ್ರೋಶ ವ್ಯಕ್ತವಾಗಿದೆ.
ಈ ನಡುವೆ, ಬಾಲಿವುಡ್ ನಟ ಅಮಿತಾಭ್ ಬಚ್ಚನ್ ‘ಭಾರತ್ ಮಾತಾ ಕೀ ಜೈ’ ಎಂದು ಟ್ವೀಟ್ ಮಾಡಿದ್ದಾರೆ, ಹೆಸರು ಬದಲಾವಣೆಗೆ ಅಮಿತಾಭ್ ಅವರು ಒಪ್ಪಿಗೆ ಸೂಚಿಸಿ ಈ ರೀತಿ ಪೋಸ್ಟ್ ಮಾಡಿದ್ದಾರೆ.
ಅಮಿತಾಭ್ ಬಚ್ಚನ್ ಮಂಗಳವಾರ(ಆಗಸ್ಟ್ 5) ಟ್ವಿಟರ್ನಲ್ಲಿ ರಾಷ್ಟ್ರಧ್ವಜದೊಂದಿಗೆ ‘ಭಾರತ್ ಮಾತಾ ಕೀ ಜೈ’ ಎಂದಿರುವುದಕ್ಕೆ ನೆಟ್ಟಿಗರು ಬಾಲಿವುಡ್ ನಟನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭೋಪಾಲ್ ಕಾಂಗ್ರೆಸ್ ಘಟಕ, ವಾಟ್ಸಾಪ್ ವಿವಿ ಪ್ರಾಧ್ಯಾಪಕರ ಆಗಮನವಾಗಿದೆ ಎಂದಿದ್ದರೆ, ಇನ್ನೂ ಕೆಲವರು ತೆರಿಗೆ ಉಳಿಸಲು ಬಾಲಿವುಡ್ ನಟರು ಈಗಿನಿಂದಲೆ ಕೇಂದ್ರ ಸರ್ಕಾರಕ್ಕೆ ಬಕೆಟ್ ಹಿಡಿಯಲು ಮುಂದಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು ಪನಾಮ ಹಣ ವಾಪಸ್ ತರಲು ಹೊಸ ಯೋಜನೆಯೇ? ಎಂದು ಕುಟುಕಿದ್ದಾರೆ.
ನೀವು ಬಿಜೆಪಿ ಸೇರುವುದು ಯಾವಾಗ, ರಾಜ್ಯಸಭೆಗೆ ನಾಮಕರಣಕ್ಕೆ ತಯಾರಿ ಎಂದೆಲ್ಲ ಅಮಿತಾಭ್ ಬಚ್ಚನ್ ಅವರನ್ನು ಹಲವರು ಅಣಕಿಸಿದ್ದಾರೆ.
ಅಮಿತಾಭ್ 1980ರ ದಶಕದಲ್ಲಿ ರಾಜಕೀಯ ಪ್ರವೇಶಿಸಿದ್ದರು. 1984 ರಲ್ಲಿ ಉತ್ತರ ಪ್ರದೇಶದ ಅಲಹಾಬಾದ್ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಕಾರಾಣಾಂತರಗಳಿಂದ 1987 ರಲ್ಲಿ ರಾಜೀನಾಮೆ ನೀಡಿ ಇನ್ನು ಮುಂದೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಘೋಷಿಸಿದ್ದರು.
ಈ ಸುದ್ದಿ ಓದಿದ್ದೀರಾ? ತಲೆ ಕಡಿದು ತಂದವರಿಗೆ 10 ಕೋಟಿ ನೀಡುತ್ತೇನೆ ಎಂದ ಅಯೋಧ್ಯೆ ಸ್ವಾಮೀಜಿಗೆ ಸ್ಟಾಲಿನ್ ತಕ್ಕ ಉತ್ತರ

ಕಾಂಗ್ರೆಸ್ ಟೀಕೆ
ಇಂಡಿಯಾ ಹೆಸರನ್ನು ಬದಲಾವಣೆ ಮಾಡಲು ಹೊರಟಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಜಿ20 ಔತಣಕೂಟಕ್ಕೆ ಸಾಮಾನ್ಯವಾಗಿ ‘President of India’ ಎಂದು ಕಳುಹಿಸುತ್ತಿದ್ದ ಬದಲಿಗೆ ‘President of Bharat’ ಎಂಬ ಹೆಸರಿನಲ್ಲಿ ಆಹ್ವಾನಗಳನ್ನು ಕಳುಹಿಸಿದೆ. ಸಂವಿಧಾನದ 1 ನೇ ವಿಧಿಯಲ್ಲಿ ‘ಇಂಡಿಯಾ, ಎಂದು ಕರೆಯಲ್ಪಡುವ ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ’ ಎಂದು ಬರೆಯಲಾಗಿದೆ. ಆದರೆ ಈಗ ಈ ‘ರಾಜ್ಯಗಳ ಗುಂಪು’ಗಳ ಮೇಲೂ ದಾಳಿ ನಡೆಯುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ಗೌರವ್ ಗೊಗೋಯ್, “ನಾವು ‘ಇಂಡಿಯಾ’ ಮತ್ತು ‘ಭಾರತ್’ ಎರಡನ್ನೂ ಒಪ್ಪಿಕೊಳ್ಳುತ್ತೇವೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಇಸ್ರೋದಲ್ಲಿನ ‘ಐ’ ಇಂಡಿಯಾ, ಐಐಟಿಗಳಲ್ಲಿನ ‘ಐ’ ಇಂಡಿಯಾ, ಐಐಎಂಗಳಲ್ಲಿನ ‘ಐ’ ಇಂಡಿಯಾ, ಐಪಿಎಸ್ನಲ್ಲಿರುವ ‘ಐ’ ಇಂಡಿಯಾ ಆಗಿದೆ. ಹೀಗಿದ್ದರೂ ‘ಇಂಡಿಯಾ’ ಮೈತ್ರಿಗೆ ಹೆದರಿರುವ ಬಿಜೆಪಿ ಕೀಳು ಮಟ್ಟದ ರಾಜಕೀಯ ನಡೆಸುತ್ತಿದೆ” ಎಂದಿದ್ದಾರೆ.
ಭಾರತ್ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸೆಪ್ಟೆಂಬರ್ 18ರಿಂದ 22 ರ ತನಕ ನಿಗದಿಪಡಿಸಲಾದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಬಹುದು ಎಂದು ವರದಿಯಾಗಿದೆ.
ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ‘ಇಂಡಿಯಾ’ ಪದವನ್ನು ಭಾರತ ಎಂದು ಮರುನಾಮಕರಣ ಮಾಡಬೇಕೆಂಬುದು ಆರ್ಎಸ್ಎಸ್ನ ಹಳೆಯ ಆಗ್ರಹವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ‘ಇಂಡಿಯಾದ’ ಬದಲು ‘ಭಾರತ್’ ಎಂಬ ಪದದ ಬಳಕೆಯನ್ನು ಚರ್ಚಿಸುವಾಗ, “ನಮ್ಮ ರಾಷ್ಟ್ರದ ಹೆಸರು ಶತಮಾನಗಳಿಂದ ಭಾರತವಾಗಿದೆ, ಇಂಡಿಯಾವಲ್ಲ” ಎಂದು ಹೇಳಿದ್ದರು.