ದಕ್ಷಿಣ ಆಪ್ರಿಕಾದಿಂದ ಕರೆ ತಂದಿದ್ದ ಚೀತಾ ’ಸೂರಜ್’ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮೃತಪಟ್ಟಿದೆ.
ಕಳೆದ 5 ತಿಂಗಳಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾದಿಂದ ಕರೆತಂದಿದ್ದ ಚೀತಾಗಳಲ್ಲಿ 8ನೇ ಚೀತಾ ಸಾವಿನ ಪ್ರಕರಣ ಇದಾಗಿದೆ.
ಚೀತಾ ಸೂರಜ್ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಸೂರಜ್ ಸಾವಿನ ನಂತರ ಹತ್ತು ಚೀತಾಗಳನ್ನು ಕುನೋದ ಇತರ ಉದ್ಯಾನಗಳಿಗೆ ಬಿಡಲಾಗಿದೆ. ಕಳೆದ ಎರಡು ದಿನಗಳ ಹಿಂದಷ್ಟೆ ತೇಜಸ್ ಎನ್ನುವ ಚೀತಾ ಗಾಯಗೊಂಡು ಮೃತಪಟ್ಟಿತ್ತು.
ಆಫ್ರಿಕಾದಿಂದ ಕರೆತಂದ ಚೀತಾಗಳಲ್ಲಿ ಮೊದಲ ಹೆಣ್ಣು ಚೀತಾ ಸಶಾ ಮೂತ್ರಪಿಂಡ ಕಾಯಿಲೆಯಿಂದ ಮಾರ್ಚ್ 27ರಂದು ಮೃತಪಟ್ಟಿತ್ತು. ಏಪ್ರಿಲ್‌ನಲ್ಲಿ ಉದಯ್ ಹೃದಯ ಸಂಬಂಧಿ ಸಮಸ್ಯೆಗಳಿಂದ ಮೃತಪಟ್ಟಿತ್ತು. ಮೇ ತಿಂಗಳಲ್ಲಿ ದೀಕ್ಷಾ ಎರಡು ಪುರುಷ ಚೀತಾಗಳಂದಿಗೆ ನಡೆದ ಕಾಳಗದಲ್ಲಿ ಸಾವಿಗೀಡಾಗಿತ್ತು.
ಮಾರ್ಚ್‌ನಲ್ಲಿ, ಸಿಯಾಯಾ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದಾಗ್ಯೂ, ಒಂದೆರಡು ತಿಂಗಳ ನಂತರ ಮೇ ತಿಂಗಳಲ್ಲಿ ಸಿಯಾಯಾದ ಎರಡು ಮರಿ ಸಾವನ್ನಪ್ಪಿವೆ. ಮತ್ತೆ ಕೆಲವು ದಿನಗಳ ನಂತರ ಉಳಿದ ಎರಡು ಮರಿಗಳು ಮೃತಪಟ್ಟವು. ಪ್ರಾಥಮಿಕ ವರದಿಗಳ ಪ್ರಕಾರ ನಿಶ್ಯಕ್ತಿಯ ಕಾರಣದಿಂದ ಅಸುನೀಗಿದ್ದವು ಎಂದು ತಿಳಿದುಬಂದಿತ್ತು.
ಈ ಸುದ್ದಿ ಓದಿದ್ದೀರಾ? ಭಾರತದ ಐತಿಹಾಸಿಕ ‘ಚಂದ್ರಯಾನ 3’ ಯಶಸ್ವಿ ಉಡಾವಣೆ; 20 ವರ್ಷದ ಹಿಂದೆ ಆರಂಭವಾದ ಯೋಜನೆ ಸಾಗಿದ್ದು ಹೇಗೆ?
ಚೀತಾಗಳು ನೈಸರ್ಗಿಕ ಕಾರಣಗಳು, ದೌರ್ಬಲ್ಯ ಹಾಗೂ ಬಲಶಾಲಿ ಪ್ರಾಣಿಗಳ ಕಾಳಗದಿಂದ ಮೃತಪಡುವ ಸಾಧ್ಯತೆ ಹೆಚ್ಚು ಎಂದು ಪ್ರಾಣಿ ತಜ್ಞರು ಅಭಿಪ್ರಾಯ ಪಡುತ್ತಾರೆ.
ಕಳೆದ ವರ್ಷ ಸೆಪ್ಟೆಂಬರ್ 17 ರಂದು ನಮೀಬಿಯಾದಿಂದ ಕರೆತಂದ ಎಂಟು ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡುಗಡೆ ಮಾಡಲಾಯಿತು. ಈ ವರ್ಷದ ಫೆಬ್ರವರಿಯಲ್ಲಿ, ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳನ್ನು ತರಲಾಗಿತ್ತು. ಅವುಗಳಲ್ಲಿ ಆರು ಕಾಡಿನಲ್ಲಿವೆ ಮತ್ತು ಉಳಿದವು ಕುನೋದಲ್ಲಿನ ವಿವಿಧ ಉದ್ಯಾನಗಳಲ್ಲಿವೆ.